ಕುಶಾಲನಗರ, ಮೇ 15: ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಮಾಡಲು ಭಾರತೀಯ ಜನತಾ ಪಕ್ಷಕ್ಕೆ ಅಸಾಧ್ಯ ಎಂದು ರಾಜ್ಯ ನಗರಾಭಿವೃದ್ಧಿ ಹಾಗೂ ಹಜ್ ಸಚಿವ ರೋಷನ್ ಬೇಗ್ ಹೇಳಿದರು. ಅವರು ಕುಶಾಲನಗರದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ರಾಜ್ಯ ಸರಕಾರ 4 ವರ್ಷಗಳ ಯಶಸ್ವಿ ಆಡಳಿತ ಪೂರೈಸಿದ್ದು, ಬಿಜೆಪಿ ಸರಕಾರದ ಸಚಿವರಂತೆ ಕಾಂಗ್ರೆÉ್ರಸ್ ಸಚಿವರು ಜೈಲು ಪಾಲಾಗಿಲ್ಲ. ಭ್ರಷ್ಟಾಚಾರ ರಹಿತ ಸರಕಾರ ನೀಡಿದ ಹೆಮ್ಮೆ ಕಾಂಗ್ರೆಸ್ ಪಕ್ಷದ್ದಾಗಿದೆ. ಮುಂದಿನ ಬಾರಿ ಕಾಂಗ್ರೆಸ್ ಸರಕಾರದ ಆಡಳಿತ ಮುಂದುವರೆಯುವದು ಖಚಿತ ಎಂದರು.

ಕೊಡಗು ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಹೆಸರಿನಲ್ಲಿ ಎಸ್‍ಡಿಪಿಐ, ಪಿಎಫ್‍ಐ ಸಂಘಟನೆಗಳು ಕಾರ್ಯಾಚರಣೆ ನಡೆಸುತ್ತಿದ್ದು ಇದರಿಂದ ಕೆಟ್ಟ ಪರಿಣಾಮಗಳು ಉಂಟಾಗದಂತೆ ತಡೆಯಬೇಕಾಗಿದೆ ಎಂದರು. ಅಲ್ಪಸಂಖ್ಯಾತರು ಕಾರ್ಯಕ್ರಮದ ಸಂದರ್ಭ ಹಸಿರು ಬಾವುಟಕ್ಕೆ ಮಾತ್ರ ಸೀಮಿತವಾಗದೆ. ಕೇಸರಿ ಬಾವುಟದೊಂದಿಗೆ ಕಾರ್ಯಕ್ರಮ ರೂಪಿಸಬೇಕಾಗಿದೆ ಎಂದು ಕಿವಿಮಾತು ಹೇಳಿದ ರೋಷನ್ ಬೇಗ್, ಸೂಫಿಸಂತರು ಬದುಕಿದ ನಾಡಿನಲ್ಲಿ ಸೌಹಾರ್ದತೆ ಮೆರೆಯಬೇಕೆಂದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ, ರಾಜ್ಯ ಸರಕಾರ ಅಲ್ಪಸಂಖ್ಯಾತರ ರಕ್ಷಣೆಗೆ ಬದ್ದವಾಗಿದ್ದು ಕೊಡಗು ಜಿಲ್ಲೆಯಲ್ಲಿ ನಡೆದ ಹಲವು ಪ್ರಕರಣಗಳ ಸಂದರ್ಭ ಇದು ಸಾಬೀತಾಗಿದೆ ಎಂದರು. ರಾಜ್ಯ ಸರಕಾರ ಈ ಬಾರಿ ಬಜೆಟ್‍ನಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ಯೋಜನೆಗಳಿಗೆ ರೂ 2500 ಕೋಟಿ ಮೀಸಲಿರಿಸಿದೆ. ಕೊಡಗು ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಸ್ಮಶಾನಗಳ ತಡೆಗೋಡೆ ನಿರ್ಮಾಣಕ್ಕೆ ರೂ. 2 ಕೋಟಿ 96 ಲಕ್ಷ, ಶಾದಿ ಭಾಗ್ಯಕ್ಕೆ ರೂ 3 ಕೋಟಿ ಹಣ ಬಿಡುಗಡೆ, ಎಡಪಾಲ ರಸ್ತೆ ಅಭಿವೃದ್ಧಿ ಕಾಮಗಾರಿ ರೂ. 7 ಕೋಟಿ 70 ಲಕ್ಷ,

(ಮೊದಲ ಪುಟದಿಂದ) ಎಮ್ಮೆಮಾಡು ವ್ಯಾಪ್ತಿಯ ರಸ್ತೆ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ ಎಂದರು.

94 ಸಿ ಅಡಿಯಲ್ಲಿ ಬಡವರಿಗೆ ಆಯಾಯ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ನಿವೇಶನವನ್ನು ಹಂಚಲಾಗುವದು. ಸಿ ಆಂಡ್ ಡಿ ಭೂಮಿ ವ್ಯಾಜ್ಯ ಇತ್ಯರ್ಥಗೊಳಿಸಲಾಗುವದು ಎಂದರಲ್ಲದೆ ಕೊಡಗು ಜಿಲ್ಲೆಯ ಅಲ್ಪಸಂಖ್ಯಾತ ಮುಖಂಡರೊಬ್ಬರಿಗೆ ರಾಜ್ಯಮಟ್ಟದ ಹುದ್ದೆಯೊಂದನ್ನು ನೀಡಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವದು ಎಂದರು.

ಮಾಜಿ ಶಾಸಕ ಹಾಗೂ ಕೊಡಗು ಜಿಲ್ಲಾ ಸಂಯುಕ್ತ ಜಮಾಅತ್ ಅಧ್ಯಕ್ಷ ಕೆ.ಎಂ.ಇಬ್ರಾಹಿಂ ಮಾತನಾಡಿ, ಟಿಪ್ಪು ಜಯಂತಿ ಸರಕಾರ ಪ್ರಾಯೋಜಿತ ಕಾರ್ಯಕ್ರಮವಾಗಿದ್ದರೂ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರನ್ನು ಹೊರತುಪಡಿಸಿದಂತೆ ಉಳಿದ ಬಹುತೇಕ ಹಿಂದೂ ಮುಖಂಡರು ಅಸಹಕಾರ ಧೋರಣೆ ತೋರಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಪಸಂಖ್ಯಾತರಿಗೆ ಜಿಲ್ಲೆಯಲ್ಲಿ ಉನ್ನತ ಹುದ್ದೆ ನೀಡುವಲ್ಲಿ ಪಕ್ಷ ನಿರ್ಲಕ್ಷ್ಯ ತಾಳಿದೆ ಎಂದರು. ಕರ್ನಾಟಕ ವಿಧಾನ ಪರಿಷತ್‍ನ ಮುಖ್ಯ ಸಚೇತಕ ಐವಾನ್ ಡಿಸೋಜ ಮಾತನಾಡಿ, ರಾಜ್ಯ ಸರಕಾರ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಹೊಂದಿದ್ದು ಸಂವಿಧಾನದತ್ತವಾದ ಎಲ್ಲಾ ಹಕ್ಕುಗಳ ರಕ್ಷಣೆಗೆ ಬದ್ದವಾಗಿದೆ. ಹಲವಾರು ಜನಪರ ಯೋಜನೆಗಳನ್ನು ರೂಪಿಸಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಟಿ.ಪಿ. ರಮೇಶ್, ಪಕ್ಷ ವಿರೋಧಿ ಹೇಳಿಕೆ ನೀಡುವ ಪಕ್ಷದ ಮುಖಂಡರು, ಕಾರ್ಯಕರ್ತರ ಬಗ್ಗೆ ಶಿಸ್ತು ಕ್ರಮಕೈಗೊಳ್ಳಲಾಗುವದು ಎಂದರು. ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಕೆ.ಎ.ಯಾಕೂಬ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸೈಯದ್ ಅಹಮ್ಮದ್, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ಕೊಡಗು ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಎಸ್.ಎ. ಹುಸೇನ್, ಮಾಜಿ ಸಚಿವೆ ಸುಮಾವಸಂತ್, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ ಉಪಸ್ಥಿತರಿದ್ದು ಮಾತನಾಡಿದರು. ಅಲ್ಪಸಂಖ್ಯಾತರ ಘಟಕ ಮೈಸೂರು ವಲಯದ ಅಧ್ಯಕ್ಷ ರಫೀಕ್ ಅಹಮ್ಮದ್, ಕೊಡಗು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಉಸ್ಮಾನ್ ಹಾಜಿ, ಹಿಂದುಳಿದ ವಿಭಾಗದ ಅಧ್ಯಕ್ಷ ಸರಾ ಚಂಗಪ್ಪ, ವಿವಿಧ ಘಟಕಗಳ ಪ್ರಮುಖರು, ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿ ಸದಸ್ಯರುಗಳು, ಪ್ರಮುಖರು ಇದ್ದರು.