ವೀರಾಜಪೇಟೆ, ಮೇ 15: ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 100ಮೀಟರ್ ಅಂತರದ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ಸಿಗರೇಟು, ಬೀಡಿ, ಗುಟ್ಕಾ ಸೇರಿದಂತೆ ಇತರ ತಂಬಾಕು ವಸ್ತುಗಳನ್ನು ಬಹಿರಂಗವಾಗಿ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ಧಾಳಿ ನಡೆಸಲಾಗಿದೆ. ತಾಲೂಕು ಕಚೇರಿಯ ಆವರಣದಲ್ಲಿ ಧೂಮಪಾನ ನಿಷೇಧದ ನಾಮ ಫಲಕ ಹಾಕದಿರುವ ಹಿನ್ನೆಲೆ ಹೈ ಪವರ್ ಮಂಡಳಿ ತಹಶೀಲ್ದಾರ್ ಮಹದೇವಸ್ವಾಮಿ ಅವರಿಗೆ ರೂ 100 ದಂಡ ವಿಧಿಸಿದೆ.
ಇಂದು ಬೆಳಿಗ್ಗೆ ಹೈ ಪವರ್ ಸಮಿತಿಯ ಅಧಿಕಾರಿ ಜಾನ್ ಕೆನಾಡಿಯಾ ಅವರು ಪಟ್ಟಣ ಪಂಚಾಯಿತಿ, ಕಂದಾಯ ಇಲಾಖೆ ಅಧಿಕಾರಿಗಳು, ಕ್ಷೇತ್ರ ವಿದ್ಯಾಧಿಕಾರಿ, ಅಬ್ಕಾರಿ ಇಲಾಖೆ ಹಾಗೂ ನಗರ ಪೊಲೀಸ್ ಠಾಣೆ ಸೇರಿದಂತೆ ನಾಲ್ಕು ತಂಡಗಳನ್ನು ರಚಿಸಿ ಗುಪ್ತವಾಗಿ ದಾಳಿ ಮಾಡಿದಾಗ ಸಂಜೆಯ ತನಕ ಒಟ್ಟು 104 ಪ್ರಕರಣಗಳು ದಾಖಲಾಗಿ ರೂ 18,750 ನಗದನ್ನು ದಂಡದ ರೂಪದಲ್ಲಿ ವಸೂಲಿ ಮಾಡಲಾಗಿದ್ದು ರೂ 22,000 ಮೌಲ್ಯದ ಮಾದಕ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.
ವೀರಾಜಪೇಟೆ ಅರಣ್ಯ ಇಲಾಖೆ, ಕೃಷಿ ಇಲಾಖೆ, ಸಾಂಬಾರ ಮಂಡಳಿ, ಕಾಫಿ ಬೋರ್ಡ್, ಮೂರು ಕಾಲೇಜುಗಳ ಪ್ರಾಂಶುಪಾಲರು, ವಿವಿಧ ಇಲಾಖೆ ಸೇರಿದಂತೆ ಒಟ್ಟು 15ಮಂದಿ ಅಧಿಕಾರಿಗಳಿಗೆ ಧೂಮಪಾನ ನಿಷೇಧದ ನಾಮಫಲಕ ಅಳವಡಿಸದ ಕಾರಣ ದಂಡ ವಿಧಿಸಲಾಗಿದೆ. ಈ ದಾಳಿಯ ಸಂಬಂಧ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಉನ್ನತಾಧಿಕಾರಿ ಆದೇಶ ಹೊರಡಿಸಿ ಕಠಿಣ ಕ್ರಮ ಕೈಗೊಳ್ಳಲು ಮಾರ್ಗದರ್ಶನ ನೀಡಿದ್ದರು. ಈ ಆದೇಶದಂತೆ ಅಧಿಕಾರಿಗಳು ಸಹಕಾರ ನೀಡಿದ್ದಾರೆ. ಧಾಳಿ ನಿರಂತರವಾಗಿ ಜಿಲ್ಲೆಯ ವಿವಿಧೆಡೆಗಳಲ್ಲಿ ಮುಂದುವರೆಯಲಿದೆ ಎಂದು ಜಾನ್ ಕೆನಾಡಿಯ ಮಾಧ್ಯಮದವರಿಗೆ ತಿಳಿಸಿದರು.
ಯಾವದೇ ಸರಕಾರಿ ಕಚೇರಿಯಾಗಲಿ ನಾಮಫಲಕ ಅಳವಡಿಸದಿರುವದು, ಸಿಗರೇಟ್, ಬೀಡಿಯನ್ನು ಅಕ್ರಮವಾಗಿ ಸೇದಿ ಅದರ ತುಂಡನ್ನು ಕಸದ ಬುಟ್ಟಿಗೆ ಎಸೆದಿರುವದು ಕಂಡು ಬಂದರೂ ಒಂದು ತುಂಡು ಬೀಡಿಗೂ ತಲಾ ರೂ 200ರಂತೆ ದಂಡ ವಿಧಿಸಲಾಗುವದು. ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಂತೆ ವಿವಿಧ ದಿನಾಂಕಗಳನ್ನು ಗೊತ್ತು ಪಡಿಸಿ ಧಾಳಿ ನಡೆಸಲಿರುವದಾಗಿ ಜಾನ್ ಕೆನಾಡಿಯ ತಿಳಿಸಿದರು.