ಗೋಣಿಕೊಪ್ಪಲು, ಮೇ 15: ಇದು ಬೇಸಗೆಯ ರಜೆಯ ಮಜಾ ಸಮಯವೋ ಗೊತ್ತಿಲ್ಲ. ಈವರೆಗೆ ನಾಗರಹೊಳೆಯಂತಹ ರಾಷ್ಟ್ರೀಯ ಉದ್ಯಾನವನ ಸಂರಕ್ಷಣೆಯ ವಿಚಾರದಲ್ಲಿ ಅಧಿಕಾರಿಗಳು ಅಷ್ಟಾಗಿ ನಿರ್ಲಕ್ಷ್ಯ ಮಾಡಿರಲಿಲ್ಲ. ಇದೀಗ ಅಧಿಕಾರಿಗಳ ತಂಡವೇ ನಾಪತ್ತೆಯಾಗಿದ್ದು ಆಶ್ಚರ್ಯ ಮೂಡಿಸಿದೆ.ನಾಗರಹೊಳೆ ರಾಷ್ಟ್ರೀಯ ಉದ್ಯಾನವನವನ್ನು ರಕ್ಷಣೆಯ ವಿಚಾರವಾಗಿ 7 ವಲಯವನ್ನಾಗಿ ವಿಂಗಡಿಸಿ, 7 ವಲಯಾರಣ್ಯಾಧಿಕಾರಿಗಳನ್ನು ನಿಯೋಜಿಸಲಾಗಿತ್ತು. ತಮ್ಮನ ಮದುವೆ, ತಂಗಿಯ ಮದುವೆ ಇತ್ಯಾದಿ ಕಾರ್ಯಕ್ರಮದ ನೆಪದಲ್ಲಿ ಅಧಿಕಾರಿಗಳು ರಜೆಯ ಮೇಲೆ ತೆರಳುವದು ಸಹಜವೇ! ಆದರೆ, ಜವಾಬ್ದಾರಿಯನ್ನು ಎಸಿಎಫ್ ಮಟ್ಟದ ಅಧಿಕಾರಿಗಳು, ಇತರೆ ಸಮೀಪದ ವಲಯದ ವಲಯಾರಣ್ಯಾಧಿಕಾರಿಗಳು ತೆಗೆದುಕೊಳ್ಳುತ್ತಿದ್ದರು.
ಆದರೆ, ಈ ಬಾರಿ ವಾರದಿಂದ ಮೂರು ವಲಯಾಧಿಕಾರಿಗಳು ನಾಪತ್ತೆಯಾಗಿದ್ದು ನಾಗರಹೊಳೆ ಸಿಬ್ಬಂದಿಗಳೇ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ನಾಗರಹೊಳೆಯ ವಲಯಾರಣ್ಯಾಧಿಕಾರಿ ಹಾಗೂ ಎಸಿಎಫ್ ಅವರುಗಳು ಒಂದು ವಾರದಿಂದ ಕಣ್ಮರೆಯಾಗಿದ್ದಾರೆ! ಇನ್ನು ಕಲ್ಲಳ ವಲಯಾರಣ್ಯಾಧಿಕಾರಿ ಊರಿಗೆ ತೆರಳಿದ್ದಾರೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ. ವೀರನ ಹೊಸಳ್ಳಿ ಹಾಗೂ ಅಂತರಸಂತೆ ವ್ಯಾಪ್ತಿಯಲ್ಲಿ ಅತ್ಯಧಿಕ ಕಳ್ಳಬೇಟೆ, ಮರ ಹನನ ನಡೆದ ಉದಾಹರಣೆಗಳಿವೆ. ವೀರನ ಹೊಸಳ್ಳಿ ವಲಯಾರಣ್ಯಾಧಿಕಾರಿ ರಜೆಯ ಮೇಲೆ ತೆರಳಿದ್ದಾರಂತೆ.
ಇವರೆಲ್ಲರೂ ಹುಣಸೂರು ವನ್ಯಜೀವಿ ವಿಭಾಗಕ್ಕೆ ಒಳಪಡುವ ಅಧಿಕಾರಿಗಳು ಈ ಬಗ್ಗೆ ಹುಣಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಮಣಿಕಂಠ ಅವರೇ ಜವಾಬ್ದಾರರು. ಒಟ್ಟಿನಲ್ಲಿ ನಾಗರಹೊಳೆ ಮೂಕ ಪ್ರಾಣಿಗಳನ್ನು, ಬೆಲೆ ಬಾಳುವ ಮರಗಳನ್ನು ದೇವರೇ ಕಾಪಾಡಬೇಕು. - ಟಿ.ಎಲ್.ಶ್ರೀನಿವಾಸ್