ಮಡಿಕೇರಿ, ಮೇ 15 : ಪೊಲೀಸ್ ಅಧಿಕಾರಿಗಳು ಯಾವದೇ ಒತ್ತಡ ಮತ್ತು ಖಿನ್ನತೆ ಇಲ್ಲದೆ ಕರ್ತವ್ಯ ನಿರ್ವಹಿಸಲು ಯೋಗಾಸನ ಹಾಗೂ ಪ್ರಾಣಾಯಾಮ ಸಹಕಾರಿಯಾಗಿದೆ ಎಂದು ರಾಜ್ಯ ಗುಪ್ತದಳದ ಪೊಲೀಸ್ ಅಧಿಕಾರಿ ಅನೂಪ್ ಮಾದಪ್ಪ ಅಭಿಪ್ರಾಯಪಟ್ಟಿದ್ದಾರೆ.
ವಾಂಡರರ್ಸ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ನಗರದಲ್ಲಿ ಪ್ರಥಮ ವರ್ಷದ ಯೋಗಾಸನ ಮತ್ತು ಪ್ರಾಣಾಯಾಮ ಶಿಬಿರ ನಡೆಯಿತು. ಶಿಬಿರಾರ್ಥಿಯಾಗಿ ತಮ್ಮ ಅನುಭವವನ್ನು ಹಂಚಿಕೊಂಡ ಅವರು ಪ್ರತಿದಿನ ಸಮಾಜದಲ್ಲಿ ನಡೆಯುವ ಕೊಲೆ, ಸುಲಿಗೆ, ಕಳ್ಳತನ, ಅಪರಾಧ ಪ್ರಕರಣಗಳಿಂದ ಪೋಲಿಸರಿಗೆ ಒತ್ತಡದ ಜೊತೆಗೆ ಖಿನ್ನತೆ ಕೂಡ ಬರುವದು ಸಹಜ. ತಮ್ಮ ಕರ್ತವ್ಯವನ್ನು ಒತ್ತಡ ಇಲ್ಲದೆ ನಿಭಾಯಿಸಲು ಯೋಗ, ಪ್ರಾಣಾಯಾಮ ದಿಂದ ಮಾತ್ರ ಸಾಧ್ಯ ಎಂದರು. ಯೋಗ್ಯ ಶಿಕ್ಷಕ ವೆಂಕಟೇಶ್ ಮಾತನಾಡಿ, ಇಂದಿನ ವೇಗದ ಮತ್ತು ಒತ್ತಡದ ಜೀವನದ ಜಂಜಾಟದಲ್ಲಿ ಮನುಷ್ಯ ಸಂತೋಷ ಹಾಗೂ ಆರೋಗ್ಯ ಮರೆತಿದ್ದಾನೆ. ಪ್ರತಿದಿನ ಯೋಗ ಮತ್ತು ಪ್ರಾಣಾಯಾಮ ಮಾಡುವವರಲ್ಲಿ ಶುದ್ಧ ಮನಸ್ಸು, ಮಾನಸಿಕ ಸ್ಥಿರತೆ ಇರುತ್ತದೆ ಎಂದರು. ಶಿಬಿರದಲ್ಲಿ ಕ್ಲಬ್‍ನ ಪ್ರಮುಖರಾದ ಬಾಬು ಸೋಮಯ್ಯ, ಅಶೋಕ್ ಅಯ್ಯಪ್ಪ, ಗಣೇಶ್, ಆಸಿಫ್, ಆನಂದ್ ಮತ್ತಿತರರು ಪಾಲ್ಗೊಂಡಿದ್ದರು.