ಮಡಿಕೇರಿ, ಮೇ 15: ಪರಸ್ಪರ ಜಾತಿ-ಧರ್ಮದ ಹೆಸರಿನಲ್ಲಿ ಮನುಜ ಮತಗಳು ವಿಭಜನೆಗೊಳ್ಳುತ್ತಿರುವ ಇಂದಿನ ಕಾಲಘಟ್ಟದಲ್ಲಿ ನಾವೆಲ್ಲರೂ ಒಂದೇ ಎಂದು ಸಾರುವ ನಿಟ್ಟಿನಲ್ಲಿ ಎಲ್ಲರಲ್ಲೂ ಭಾವೈಕ್ಯತೆ ಮೂಡಿಸುವ ಮಹತ್ಕಾರ್ಯಕ್ಕೆ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ಕೇಂದ್ರ ಸಾಕ್ಷಿಯಾಗಿದೆ. ವಿದ್ಯಾಲಯದ ಏಕತಾ ಮೈದಾನದಲ್ಲಿ ಆಯೋಜನೆಗೊಂಡಿರುವ 8ನೇ ರಾಷ್ಟ್ರೀಯ ಭಾವೈಕ್ಯತಾ ಸಮಾವೇಶದಲ್ಲಿ ರಾಷ್ಟ್ರಾದ್ಯಂತ 58 ಶಾಲೆಗಳಿಗೆ ಸೇರಿದ 450 ಮಂದಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಇಂದಿನಿಂದ 6 ದಿನಗಳ ಕಾಲ ಪರಸ್ಪರ ಬಾಂಧವ್ಯ ಬೆಸೆಯಲಿದ್ದಾರೆ. ತಾ. 20ರ ವರೆಗೆ ನಡೆಯಲಿರುವ ಸಮಾವೇಶಕ್ಕೆ ಇಂದು ಚಾಲನೆ ದೊರೆತಿದೆ.ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಭಾರತೀಯ ವಿದ್ಯಾಭವನದ ಬೆಂಗಳೂರು ಕೇಂದ್ರದ ಅಧ್ಯಕ್ಷ ಎನ್. ರಾಮಾನುಜ ಅವರು ರಾಷ್ಟ್ರೀಯ ಭಾವೈಕ್ಯತೆಯೇ ಭವ್ಯ ಭಾರತದ ಪ್ರಬಲ ಶಕ್ತಿಯಾಗಿದ್ದು, ಭವಿಷ್ಯದ ಪ್ರಜೆಗಳಾದ ಇಂದಿನ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಭಾವೈಕ್ಯತೆ, ಒಗ್ಗಟ್ಟಿನ ಮೂಲ ಮಂತ್ರ ಪ್ರತಿಪಾದಿಸುವ ನಿಟ್ಟಿನಲ್ಲಿ ಭಾವೈಕ್ಯತಾ ಶಿಬಿರಗಳು ಸಹಕಾರಿ ಎಂದು ಅಭಿಪ್ರಾಯಪಟ್ಟರು.

ಧರ್ಮ, ಜಾತಿ, ಲಿಂಗ ತಾರತಮ್ಯವಿಲ್ಲದೇ ಸೈನಿಕರು ಹೇಗೆ ದೇಶ ಕಾಯುತ್ತಾ ಭಾರತೀಯರನ್ನು ರಕ್ಷಿಸುತ್ತಿರುವಾಗಲೇ ಭಾರತೀಯರಲ್ಲಿ ಜಾತಿ, ಧರ್ಮ ಸಂಘರ್ಷದ ಮೂಲಕ ಒಡಕುಂಟುಮಾಡಿ

(ಮೊದಲ ಪುಟದಿಂದ) ದೇಶದ ಸಾಮರಸ್ಯಕ್ಕೆ ಧಕ್ಕೆ ತರುವ ಪ್ರಯತ್ನಗಳಾಗುತ್ತಿದೆ. ಭಾರತದಲ್ಲಿ ನೆಲಸಿರುವವರೆಲ್ಲರೂ ಭಾರತೀಯರು, ಭಾರತೀಯರೆಲ್ಲರೂ ಒಂದೇ ಎಂಬ ಸಂದೇಶವನ್ನು ದೇಶವ್ಯಾಪಿ ಪ್ರಬಲವಾಗಿ ಸಾರುವ ಅನಿವಾರ್ಯತೆ ಇಂದಿನ ದಿನಗಳಲ್ಲಿದೆ ಎಂದು ಹೇಳಿದರು. ಏಕತೆಯ ಸಂದೇಶ ಸಾರುವ ಪ್ರಬಲ ಭಾರತ ದೇಶದ ಪರಿಕಲ್ಪನೆ ನನಸಾಗುವ ನಿಟ್ಟಿನಲ್ಲಿ ಪ್ರತಿಯೋರ್ವರೂ ಕೈ ಜೋಡಿಸಬೇಕಾಗಿದೆ ಎಂದು ಕರೆ ನೀಡಿದರು.

ಭಾರತೀಯ ವಿದ್ಯಾಭವನದ ಬೆಂಗಳೂರು ಕೇಂದ್ರದ ನಿರ್ದೇಶಕ ಎಚ್.ಎನ್. ಸುರೇಶ್ ಮಾತನಾಡಿ, ಪಠ್ಯ ಪುಸ್ತಕಗಳಲ್ಲಿ ಇಲ್ಲದ ಭಾರತೀಯ ಸಂವಿಧಾನದ ಪ್ರಮುಖ ಆಶಯವಾಗಿರುವ ಭಾವೈಕ್ಯತೆಯ ಮಹತ್ವದ ಬಗ್ಗೆ ಶಿಕ್ಷಕರು ವಿದ್ಯಾರ್ಥಿಗಳಿಗೆ ತಿಳಿಸಬೇಕು. ಮಾನವೀಯ ಮೌಲ್ಯಗಳೊಂದಿಗೆ ಮಾನವ ಹಕ್ಕುಗಳ ಬಗ್ಗೆಯೂ ವಿದ್ಯಾರ್ಥಿಗಳಲ್ಲಿ ಶಿಕ್ಷಕರು ತಿಳುವಳಿಕೆ ಮೂಡಿಸಬೇಕು. ಇಂತಹ ವಿಚಾರಗಳು ಪರೀಕ್ಷೆಗೆ ಬರುವದಿಲ್ಲವಾದರೂ ಜೀವನಕ್ಕೆ ಅತ್ಯಂತ ಮುಖ್ಯವಾಗುತ್ತದೆ ಎಂಬದನ್ನು ಮರೆಯಬಾರದು ಎಂದು ತಿಳಿಹೇಳಿದರು.

ಬ್ರಿಟೀಷರು ಒಡೆದು ಆಳುವ ನೀತಿಯ ಮೂಲಕ ಭಾರತವನ್ನು ಅತಿಕ್ರಮಿಸಿದರೆ ಈಗ ಅಧಿಕಾರಸ್ಥರು ಆಳುವದಕ್ಕಾಗಿಯೇ ಭಾರತೀಯರನ್ನು ಒಡೆಯುತ್ತಿದ್ದಾರೆ ಎಂದು ಸುರೇಶ್ ಟೀಕಿಸಿದರು. ಸೈನಿಕ ಮತ್ತು ಕ್ರೀಡಾ ಪರಂಪರೆಯಂತೆ ದೇಶದ ಭಾವೈಕ್ಯತೆಗೂ ಕೊಡಗಿನ ಜನತೆಯ ಕೊಡುಗೆ ಅಪಾರ ಎಂದು ಸುರೇಶ್ ಶ್ಲಾಘಿಸಿದರು.

ಭಾರತೀಯ ವಿದ್ಯಾಭವನದ ಶಿಕ್ಷಣ ಭಾರತಿ ವಿಭಾಗದ ಮುಂಬೈ ಕೇಂದ್ರದ ನಿರ್ದೇಶಕ ರಾಕೇಶ್ ಸೆಕ್ಸೇನಾ ಮಾತನಾಡಿ, 6 ದಿನಗಳ ಶಿಬಿರದಲ್ಲಿ ವಿವಿಧತೆಯಲ್ಲಿ ಏಕತೆಯ ಸಂದೇಶವನ್ನು ಪ್ರತಿಪಾದಿಸಲಾಗುತ್ತದೆ. ದೇಶದ ಅಭಿವೃದ್ಧಿಗೆ ಪ್ರಮುಖವಾಗಿರುವ ಭಾವೈಕ್ಯತೆ, ಒಗ್ಗಟ್ಟನ್ನು ಯಶಸ್ವಿಯಾಗಿ ಜಾರಿಗೊಳಿಸುವದು ಸವಾಲೇ ಆಗಿದ್ದರೂ ಇಂತಹ ಸವಾಲನ್ನು ಯುವಪೀಳಿಗೆ ಅತ್ಯಂತ ಯಶಸ್ವಿಯಾಗಿ ನಿಭಾಯಿಸಬಲ್ಲ ಶಕ್ತಿ ಹೊಂದಿದೆ. ಹೀಗಾಗಿಯೇ ಇಂತಹÀ ವಿದ್ಯಾರ್ಥಿ ಶಿಬಿರಗಳು ಹೆಚ್ಚಾಗಬೇಕಾಗಿದೆ ಎಂದು ಕರೆ ನೀಡಿದರು.

ಸ್ವಾತಂತ್ರ್ಯ ಲಭಿಸಿದ ಸಂದರ್ಭ ಭಾರತ ಶ್ರೀಮಂತ ದೇಶವಾಗಿರಲೇ ಇಲ್ಲ. ಆದರೆ ಆಗ ಪ್ರತೀಯೋರ್ವರಲ್ಲಿಯೂ ದೇಶಭಕ್ತಿ ಹೆಚ್ಚಿತ್ತು. ಆರ್ಥಿಕವಾಗಿ ಭಾರತ ಪ್ರಬಲವಾಗಿಲ್ಲದೇ ಇದ್ದಾಗ ಕಂಡು ಬರುತ್ತಿದ್ದ ರಾಷ್ಟ್ರಪ್ರೇಮ ಈಗ ಕಣ್ಮರೆಯಾಗುತ್ತಿರುವದು ದುರಂತ ಎಂದೂ ರಾಕೇಶ್ ಸೆಕ್ಸೇನಾ ವಿಷಾದಿಸಿದರು.

ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಬಿ.ಕೆ. ಸುಬ್ಬಯ್ಯ ಮಾತನಾಡಿ, ಭಾರತದಲ್ಲಿ ದೇಶ ವಿರೋಧಿ ಕೃತ್ಯಗಳು ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ದೇಶಪ್ರೇಮ, ಭಾವೈಕ್ಯತೆ ಮೂಡಿಸುವ ಇಂತಹÀ ಶಿಬಿರಗಳ ಅಗತ್ಯ ಹೆಚ್ಚಾಗಿದೆ ಎಂದು ಪ್ರತಿಪಾದಿಸಿದರಲ್ಲದೇ, ಪ್ರಾಚೀನ ಕಾಲದಲ್ಲಿ ದೇಶವನ್ನು ಮಾತ್ರ ಸಮಾನವಾಗಿ ನೋಡುತ್ತಿದ್ದರು. ಅಂಥ ಮೌಲ್ಯ ಆಧುನೀಕತೆಯ ಈ ದಿನಗಳಲ್ಲಿ ಮರೆಯಾಗುತ್ತಿದೆ ಎಂದು ವಿಷಾದಿಸಿದರು.

ತಪೋಭೂಮಿ, ಪುಣ್ಯಭೂಮಿ ಯಾಗಿರುವ ಕೊಡಗಿನಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ ಬಾವೈಕ್ಯತಾ ಶಿಬಿರವು ದೇಶವ್ಯಾಪಿಯಿಂದ ಬಂದಿರುವ ನೂರಾರು ವಿದ್ಯಾರ್ಥಿಗಳಲ್ಲಿ ದೇಶರಕ್ಷಣೆ ನಿಟ್ಟಿನಲ್ಲಿ ನವಚೇತನ ಮೂಡಿಸಲಿ ಎಂದೂ ಬಿ.ಕೆ. ಸುಬ್ಬಯ್ಯ ಆಶಿಸಿದರು.

ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಆಡಳಿತ ಮಂಡಳಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಬಿ.ಬಿ. ಬೆಳ್ಯಯಪ್ಪ, ಆಡಳಿತ ಮಂಡಳಿ ಸಂಚಾಲಕ ಸಿ.ಬಿ. ದೇವಯ್ಯ, ಶಾಲಾ ಪ್ರಾಂಶುಪಾಲ ಮತ್ತು ಶಿಬಿರದ ನಿರ್ದೇಶಕ ಇ. ಶ್ರೀನಿವಾಸನ್, ವಿದ್ಯಾಭವನ ಕೊಡಗು ಕೇಂದ್ರದ ಕಾರ್ಯದರ್ಶಿ ಬಾಲಾಜಿ ಕಶ್ಯಪ್ ವೇದಿಕೆಯಲ್ಲಿದ್ದರು.

ಭಾರತೀಯ ವಿದ್ಯಾಭವನದ ಮಾರ್ಗದರ್ಶಕ ಕೆ.ಪಿ. ಉತ್ತಪ್ಪ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಭಾರತೀಯ ವಿದ್ಯಾಭವನದ ಕೊಡಗು ಕೇಂದ್ರದ ಅಧ್ಯಕ್ಷ ಕೆ.ಎಸ್. ದೇವಯ್ಯ ವಂದಿಸಿದರು. ಶಿಕ್ಷಕಿ ಶಿಲ್ಪಾ ಪೊನ್ನಮ್ಮ ನಿರೂಪಿಸಿದರು.

ಸಂಗೀತ ಶಿಕ್ಷಕಿ ವಾಣಿ ಹೊಳ್ಳ ನಿರ್ದೇಶನದಲ್ಲಿ ಭಾರತೀಯ ವಿದ್ಯಾಭವನದ ವಿದ್ಯಾರ್ಥಿಗಳು ಎಲ್ಲಾ ಧರ್ಮೀಯರ ಪ್ರಾರ್ಥನಾ ಗೀತೆಯಾಗಿ ಸರ್ವಧರ್ಮ ಮೈತ್ರಿಗೀತೆಯ ಮೂಲಕ ಗಮನ ಸೆಳೆದರು. ರೋಜಾ ಸುನೀಲ್ ನಿರ್ದೇಶನದಲ್ಲಿ ಸ್ವಾಗತ ನೃತ್ಯವನ್ನು ವಿದ್ಯಾರ್ಥಿಗಳು ಆಕರ್ಷಕವಾಗಿ ಪ್ರದರ್ಶಿಸಿದರು. ಹುತಾತ್ಮರಾದ ಭಾರತೀಯ ಯೋಧರಿಗೆ ಮೌನಚಾರಣೆ ಮೂಲಕ ನಮನ ಸಲ್ಲಿಸಲಾಯಿತು. ಶಿಕ್ಷಕಿಯರಾದ ಇಂದ್ರ, ನಮೃತಾ, ಭಾರತಿ. ತನುಜ ಅತಿಥಿಗಳ ಪರಿಚಯ ನೆರವೇರಿಸಿದರು. ಶ್ರೀನಿವಾಸ ಆಸ್ಥಾನ ಅವರ ಯಕ್ಷಗಾನ ಕಲಾ ಪ್ರದರ್ಶನದೊಂದಿಗೆ ಏಕತಾ ಭಾವೈಕ್ಯತಾ ಶಿಬಿರ ಚಾಲನೆಗೊಂಡಿತು.

ಇದಕ್ಕೂ ಮುನ್ನ ವಿವಿಧೆಡೆಗಳಿಂದ ಬಂದಿರುವ ಶಿಬಿರಾರ್ಥಿಗಳು ಏಕತಾ ಮೈದಾನದಲ್ಲಿ ಆಕರ್ಷಕ ಪಥಸಂಚಲನ ನಡೆಸಿದರು. ಮಡಿಕೇರಿಯ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಬ್ಯಾಂಡ್ ತಂಡದಿಂದ ವಾದ್ಯಗೋಷ್ಠಿ ಗಮನ ಸೆಳೆಯಿತು.

ಮಡಿಕೇರಿಯ ಗಾಂಧಿ ಮೈದಾನದಲ್ಲಿನ ಗಾಂಧಿ ಪ್ರತಿಮೆ ಸೇರಿದಂತೆ ನಗರದಲ್ಲಿನ ವೀರಸೈನಿಕರ ಪ್ರತಿಮೆಗಳಿಗೆ ಪುಪ್ಪಾರ್ಚನೆ ನೆರವೇರಿಸಿದ ಶಿಬಿರಾರ್ಥಿಗಳು ಮಡಿಕೇರಿಯ ಮುಖ್ಯರಸ್ತೆಯಲ್ಲಿ ಭಾವೈಕ್ಯತೆಯ ಸಂದೇಶ ಸಾರುವ ಶಾಂತಿಗಾಗಿ ನಡಿಗೆ ತೆರಳಿದರು. ಕೋಟೆ ಆವರಣದಲ್ಲಿ ಕರ್ನಾಟಕದ ಹೆಸರಾಂತ ಜಾನಪದ ಕಲಾವಿದ ರೇವಣ್ಣ ಮತ್ತು ತಂಡದಿಂದ ಪೂಜಾಕುಣಿತ ಹಾಗೂ ಡೊಳ್ಳುಕುಣಿತ ನೃತ್ಯಗಳು, ದೇಶದ ವಿವಿಧೆಡೆಗಳಿಂದ ಬಂದಿದ್ದ ನೂರಾರು ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರವಾದವು.

ಕರ್ನಾಟಕ ಸೇರಿದಂತೆ ದೇಶದ ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ, ಪಶ್ಚಿಮಬಂಗಾಲ, ರಾಜಸ್ತಾನ, ತ್ರಿಪುರ, ಚಂಡೀಘಡ್, ದಿಲ್ಲಿ, ಮಹಾರಾಷ್ಟ್ರ, ಛತ್ತೀಸ್‍ಘಡ್, ಉತ್ತರ ಪ್ರದೇಶಗಳಿಗೆ ಸೇರಿದ ಭಾರತೀಯ ವಿದ್ಯಾಭವನದ 450 ವಿದ್ಯಾರ್ಥಿಗಳು ತಮ್ಮ ಶಿಕ್ಷಕರೊಂದಿಗೆ ಏಕತಾ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.