ಮಡಿಕೇರಿ, ಮೇ 15: ಜಿಲ್ಲಾ ಅಧ್ಯಕ್ಷರ ದಿಢೀರ್ ಬದಲಾವಣೆ ಯೊಂದಿಗೆ ನೂತನ ಬಿಜೆಪಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಇಂದು ನಡೆದ ಪಕ್ಷದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಪರಸ್ಪರ ಒಳಬೇಗುದಿ ಆಸ್ಫೋಟ ಗೊಂಡು, ರಾಜ್ಯ ಪ್ರಮುಖರು ಹಿಡಿತ ಸಾಧಿಸಲಾರದೆ ಸಿಡಿಮಿಡಿಗೊಂಡು ಹಿಂತೆರಳಿದ ಪ್ರಸಂಗ ಬಹಿರಂಗ ಗೊಂಡಿದೆ.ಇಂದು ಬೆಳಿಗ್ಗೆ 10.30 ಗಂಟೆಗೆ ನಗರದ ಓಂಕಾರ ಸದನದಲ್ಲಿ ಕಾರ್ಯ ಕಾರಿಣಿ ಸಭೆ ಆಯೋಜನೆಗೊಂಡು, ಪ್ರಮುಖ ಪದಾಧಿಕಾರಿಗಳು ನಿಗದಿತ ಸಮಯಕ್ಕೆ ಕಾಣಿಸಿಕೊಂಡರಾದರೂ ಜಿಲ್ಲೆಯ ಬಿಜೆಪಿ ಶಾಸಕದ್ವಯರ ಸಹಿತ ಮೇಲ್ಮನೆ ಸದಸ್ಯರು ಆಗಮಿಸಿರಲಿಲ್ಲ. ಆಗಮಿಸಿದ್ದ ಪ್ರಮುಖರಲ್ಲಿಯೂ ಲವಲವಿಕೆಯಿಲ್ಲದೆ ಪರಸ್ಪರರಲ್ಲಿ ಗೊಂದಲದ ಛಾಯೆ ಮೂಡಿತ್ತು.

ಅರ್ಧ ಗಂಟೆ ವಿಳಂಬವಾಗಿ ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಆಗಮಿಸುತ್ತಿದ್ದಂತೆ, ಒಬ್ಬೊಬ್ಬರಾಗಿ ಜನಪ್ರತಿನಿಧಿಗಳು ಕಾರ್ಯಕ್ರಮ ಸಭಾಂಗಣ ಪ್ರವೇಶಿಸಿದರು. ರಾಜ್ಯ ಸಂಘಟನಾ ಕಾರ್ಯದರ್ಶಿಗಳು ಸಭಾಂಗಣದ

(ಮೊದಲ ಪುಟದಿಂದ) ಕೋಣೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್‍ರೊಂದಿಗೆ ಏನೋ ಮಾತುಕತೆಯಲ್ಲಿ ತೊಡಗಿದರು.

ಈ ವೇಳೆ ಶಾಸಕದ್ವಯರಾದ ಕೆ.ಜಿ. ಬೋಪಯ್ಯ, ಅಪ್ಪಚ್ಚುರಂಜನ್ ಮತ್ತು ಮೇಲ್ಮನೆ ಸದಸ್ಯ ಸುನಿಲ್ ಸುಬ್ರಮಣಿ ಕೊಠಡಿಗೆ ಧಾವಿಸಿದರಾದರೂ, ಕಾರ್ಯಕಾರಿಣಿ ಸಭೆ 1 ಗಂಟೆ ವಿಳಂಬವಾದರೂ ಆರಂಭಗೊಳ್ಳಲಿಲ್ಲ. ಸಭಾಂಗಣದಲ್ಲಿ ಆಸೀನರಾದವರಿಗೂ ಒಳಗೆ ಏನು ನಡೆಯುತ್ತಿದೆ ಎಂಬ ಅಚ್ಚರಿ ಮನೆ ಮಾಡಿತ್ತು.

ಈ ಮಧ್ಯೆ ಕೊಠಡಿಯಿಂದ ಹೊರಬಂದ ಬಿಜೆಪಿ ಜಿಲ್ಲಾ ಅಧ್ಯಕ್ಷ ಭಾರತೀಶ್, ಪಕ್ಷದ ಪ್ರಧಾನ ಕಾರ್ಯದರ್ಶಿಗಳನ್ನು ಸನ್ನೆ ಮಾಡಿ ಕೊಠಡಿಯತ್ತ ಆಹ್ವಾನಿಸಿದರು. ಒಳ ನಡೆದ ಪದಾಧಿಕಾರಿಗಳು ಮರುಕ್ಷಣದಲ್ಲೇ ಸಭಾಂಗಣದತ್ತ ಧಾವಿಸಿ ಕಾರ್ಯಕರ್ತರ ನಡುವೆ ಅಲ್ಲಲ್ಲಿ ಕುಳಿತುಕೊಂಡರು.

ಜನಪ್ರತಿನಿಧಿಗಳ ತಾಕೀತು

ಕೊಠಡಿಯೊಳಗೆ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಪಕ್ಷದ ಪ್ರಬಾರಿಗಳಿಗೆ ಇಲ್ಲಿನ ಶಾಸಕದ್ವಯರು, ಮೇಲ್ಮನೆ ಸದಸ್ಯರು ಗಮನ ಸೆಳೆದು, ಹಿಂದೆಯೇ ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ನಿಯುಕ್ತಿಗೊಳಿಸಿದಾಗ ಕಾರ್ಯನಿರ್ವಹಿಸದ ರವಿಕುಶಾಲಪ್ಪ, ಈಗ ಕಾರ್ಯಕಾರಿಣಿಗೆ ಬಂದಿದ್ದು, ಅವರು ವೇದಿಕೆ ಏರಿದರೆ ತಾವುಗಳು ಹೊರ ನಡೆಯುವದಾಗಿ ಸುಳಿವು ನೀಡಿದ್ದಾರೆ. ಜನಪ್ರತಿನಿಧಿಗಳ ತಾಕೀತು ಹೊರ ಬೀಳುತ್ತಲೇ, ಮೆಲ್ಲನೆ ಐವರು ಪ್ರಧಾನ ಕಾರ್ಯದರ್ಶಿಗಳನ್ನು ಕೊಠಡಿಗೆ ಕರೆದ ಅರುಣ್ ಕುಮಾರ್, ಯಾರೊಬ್ಬರು ವೇದಿಕೆಯಲ್ಲಿ ಆಸೀನರಾಗದಂತೆ ಸೂಚಿಸಿದ್ದಾರೆ.

ಆ ಮೇರೆಗೆ ಕೊಠಡಿಯ ನಿರ್ಧಾರದಂತೆ ಕೆಲವರಷ್ಟೇ ವೇದಿಕೆಯಲ್ಲಿ ಕಾಣಿಸಿಕೊಂಡು, ಮೇಲ್ನೋಟಕ್ಕೆ ಕಾರ್ಯಕಾರಿಣಿ ಆರಂಭಗೊಂಡರೂ, ಯಾರೊಬ್ಬರೂ ಉತ್ಸಾಹ ಅಥವಾ ಲವಲವಿಕೆಯಿಂದ ಕಾಣುತ್ತಿಲ್ಲವೆಂದು ಸ್ವತಃ ಅರುಣ್ ಕುಮಾರ್ ತಮ್ಮ ಭಾಷಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಶಾಸಕ ಕೆ.ಜಿ. ಬೋಪಯ್ಯ ಅವರು, ತಮ್ಮ ವಿರುದ್ಧ ಕೆಲವರು ನಡೆಸುತ್ತಿರುವ ಪಕ್ಷದೊಳಗಿನ ಪಿತೂರಿ ಬಗ್ಗೆ ಮಾತನಾಡುತ್ತಾ, ಜಿಲ್ಲೆಯಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಹಾಗೂ ಜವಾಬ್ದಾರಿ ನಿಭಾಯಿಸುವಲ್ಲಿ ಎಲ್ಲ ಹಂತದಲ್ಲಿ ಶ್ರಮಪಟ್ಟಿದ್ದಾಗಿ ನೆನಪಿಸಿಕೊಂಡಿದ್ದಾರೆ.

ಅಲ್ಲದೆ ಸಾಮಾಜಿಕ ಜಾಲತಾಣ ಹಾಗೂ ಬೇನಾಮಿ ಪತ್ರಗಳಿಂದ ತನ್ನ ತೇಜೋವಧೆ ನಡೆಸಲಾಗುತ್ತಿದೆ ಎಂದು ಅಸಮಾಧಾನ ಹೊರಗೆಡವಿದ್ದಾರೆ. ಒಂದು ಹಂತದಲ್ಲಿ ತಮ್ಮ ಭಾಷಣ ಆರಂಭಿಸಿದ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್, ಕೆಲವರ ನಡೆಯಿಂದ ಸಿಡಿಮಿಡಿಗೊಂಡು ಅರ್ಧಕ್ಕೆ ಭಾಷಣ ಮೊಟಕುಗೊಳಿಸಿ ತಮ್ಮ ಸ್ಥಾನದಲ್ಲಿ ಆಸೀನರಾಗಿದ್ದಾರೆ.

ಜಿಲ್ಲೆಯಲ್ಲಿ ಸಂಘಟನಾತ್ಮಕವಾಗಿ ಪಕ್ಷದ ಯಾರೊಬ್ಬರಿಗೂ ಸಮರ್ಪಕ ಮಾಹಿತಿಯಿಲ್ಲದ ಬಗ್ಗೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರಚಾರಕ್ಕಾಗಿ ಬಿಜೆಪಿಯಲ್ಲಿ ಸ್ಥಾನಮಾನ ಹೊಂದಿರುವವರು ಕ್ರಿಯಾಶೀಲರಾಗದಿದ್ದರೆ ಅಂತಹವರನ್ನು ಕೈ ಬಿಡುವ ಸುಳಿವು ನೀಡಿದ್ದಾರೆ.ಉದ್ಘಾಟನಾ ಸಮಾರಂಭದ ಪ್ರಾರಂಭದಲ್ಲೇ ಮಾತನಾಡಿ, ಸೋಮವಾರಪೇಟೆಯಲ್ಲಿ ಕಾರ್ಯಕ್ರಮ ನಿಮಿತ್ತ ಶಾಸಕ ಅಪ್ಪಚ್ಚು ರಂಜನ್ ನಿರ್ಗಮಿಸಿದರೆ, ಉಳಿದ ಬಹುತೇಕ ಪದಾಧಿಕಾರಿಗಳು ಮಹಿಳಾ ಮೋರ್ಚಾ, ಯುವಮೋರ್ಚಾ ಸಹಿತ ಯಾರೊಬ್ಬರೂ ವೇದಿಕೆಯತ್ತ ಸುಳಿಯಲೇ ಇಲ್ಲ. ಒಟ್ಟಿನಲ್ಲಿ ಕಾರ್ಯಕಾರಿಣಿ ಸಮಾರೋಪ ವೇಳೆಗೆ ಅಧ್ಯಕ್ಷ ಬಿ.ಬಿ. ಭಾರತೀಶ್ ಎಲ್ಲರೂ ಒಗ್ಗೂಡಿ ಪಕ್ಷ ಕಟ್ಟುವ ಮಾತನಾಡಿದರೂ ಕೂಡ, ವೇದಿಕೆಯಲ್ಲಿ ಯಾರು ಇರಬೇಕು- ಇರಬಾರದು ಎಂಬಲ್ಲಿಗೆ ಹುಟ್ಟಿಕೊಂಡ ಗೊಂದಲದ ಸಭೆಯಲ್ಲಿ, ಜಿಲ್ಲಾ ಬಿಜೆಪಿಯ ಸುಮಾರು 37 ಮಂದಿ ವಿವಿಧ ಹಂತದ ಪದಾಧಿಕಾರಿಗಳಲ್ಲಿ ಕೇವಲ 20 ಮಂದಿಯಷ್ಟು ಪಾಲ್ಗೊಂಡು, ಪಕ್ಷದೊಳಗೆ ಎಲ್ಲವು ಸರಿಯಿಲ್ಲ ಎಂಬದನ್ನು ರಾಜ್ಯ ಪ್ರಮುಖರೆದುರು ತೋರ್ಪಡಿಸಿದಂತಾಗಿದೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಇಂದಿನ ಸಭೆಗೆ ಆಗಮಿಸಲಿರುವದಾಗಿ ಈ ಮೊದಲು ತಿಳಿಸಲಾಗಿತ್ತಾದರೂ, ಅವರ ಗೈರು ಕೂಡ ಎದ್ದು ಕಾಣುತ್ತಿತ್ತು. ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ನಿರ್ಗಮಿಸುವ ಮುನ್ನ ಆಸ್ಫೋಟ ಶಮನಗೊಳಿಸುವ ನಿಟ್ಟಿನಲ್ಲಿ ಕೆಲ ಪ್ರಮುಖರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದ್ದಾಗಿ ತಿಳಿದುಬಂದಿದೆ.