ಸುಂಟಿಕೊಪ್ಪ, ಮೇ 15: ಸಂತ ಅಂತೋಣಿ ದೇವಾಲಯದ ಪಾಲಕ ಸಂತ ಅಂತೋಣಿಯವರ ವಾರ್ಷಿಕ ಮಹೋತ್ಸವವು ಭಾರೀ ವಿಜೃಭಣೆಯಿಂದ ಆಚರಿಸಲಾಯಿತು.
ಸಂತ ಅಂತೋಣಿ ಅವರ ವಾರ್ಷಿಕ ಮಹೋತ್ಸವದ ಅಂಗವಾಗಿ ತಾ.11 ರಂದು ಹಬ್ಬದ ಪೂರ್ವ ಸಿದ್ಧತೆಯಾಗಿ ಧ್ವಜಾರೋಹಣ ಹಾಗೂ ದೇವಾಲಯದಲ್ಲಿ ಹಬ್ಬದ ಸಿದ್ದತೆಯಾಗಿ 3 ದಿನಗಳ ವಿಶೇಷ ಪ್ರಭೋದನೆ ಮತ್ತು ಗಾಯನ ಬಲಿಪೂಜೆ ಪ್ರಾರ್ಥನೆಯನ್ನು ಎ. ರೋಹನ್ ಅವರು ನೇರವೇರಿಸಿದರು.
ತಾ.14 ರಂದು ಸಂಜೆ ಸಂತ ಅಂತೋಣಿ ವಾರ್ಷಿಕ ಮಹೋತ್ಸವದ ಅಂಗವಾಗಿ ದೇವಾಲಯವನ್ನು ಬಣ್ಣ ಬಣ್ಣದ ಕಾಗದ ಹಾಗೂ ಅಲಂಕೃತ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಮೈಸೂರಿನ ನೂತನ ಧರ್ಮಾಧ್ಯಕ್ಷರಾದ ಡಾ. ಕೆ.ಎ. ವಿಲಿಯಂ ಅವರನ್ನು ಕನ್ನಡ ವೃತ್ತದಲ್ಲಿ ಸಂತ ಅಂತೋಣಿಯವರ ದೇವಾಲಯದ ಧರ್ಮಗುರುಗಳಾದ ಫಾದÀರ್ ಎಡ್ವರ್ಡ್ ವಿಲಿಯಂ ಸಲ್ಡಾನ ಮಾಲಾರ್ಪಣೆ ಮಾಡುವದರೊಂದಿಗೆ ಕ್ರೈಸ್ತ ಬಾಂಧವರು ವಾದ್ಯಗೋಷ್ಠಿ ಸಹಿತ ದೇವಾಲಯಕ್ಕೆ ಕರೆದೊಯ್ದರು.
ದೇವಾಲಯದಲ್ಲಿ ನಡೆದ ವಾರ್ಷಿಕ ಬಲಿಪೂಜೆ ಹಿನ್ನಲೆ ಧರ್ಮಾಧ್ಯಕ್ಷರಾದ ಡಾ.ಕೆ.ಎ.ವಿಲಿಯಂ ಕ್ರೈಸ್ತ ಬಾಂಧವರಿಗೆ ವಿಶೇಷ ಪ್ರಭೋಧನೆಯನ್ನು ನೀಡಿದರಲ್ಲದೆ ಮೈಸೂರು ಪ್ರಾಂತ್ಯದ ವಿವಿಧ ಧರ್ಮಕೇಂದ್ರಗಳ ಧರ್ಮಗುರುಗಳು ಹಾಗೂ ಕೊಡಗು ಧರ್ಮಕೇಂದ್ರಗಳ ಧರ್ಮಗುರುಗಳು ಆಡಂಬರ ಗಾಯನ ದಿವ್ಯ ಬಲಿಪೂಜೆಯನ್ನು ನೇರವೇರಿಸಿದರು.
ನಂತರ ವಿದ್ಯುತ್ ದೀಪಾಲಂಕೃತ ಭವ್ಯ ಮಂಟಪದಲ್ಲಿ ಪಾಲಕ ಸಂತ ಅಂತೋಣಿಯವರ ಮೂರ್ತಿಯನ್ನು ಇರಿಸಿ ವಾದ್ಯಗೋಷ್ಠಿಯೊಂದಿಗೆ ಧರ್ಮಾಧ್ಯಕ್ಷರು, ಧರ್ಮಗುರುಗಳು, ಕ್ರೈಸ್ತ ಸನ್ಯಾಸಿನಿಯರು ಮತ್ತು ಬಾರೀ ಸಂಖ್ಯೆಯಲ್ಲಿ ವಿವಿಧ ಊರುಗಳಿಂದ ಆಗಮಿಸಿದ್ದ ಕ್ರೈಸ್ತ ಬಾಂಧವರು ಪ್ರಾರ್ಥನೆ ಗಾಯನಗಳೊಂದಿಗೆ ಹಾಡುತ್ತ ಮೊಂಬತ್ತಿ ಹಿಡಿದು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ನಗರದಲ್ಲಿ ಹಬ್ಬದ ವಾತವರಣವು ಕಳೆಕಟ್ಟಿದ್ದು, ರಸ್ತೆ ಇಕ್ಕೆಲಗಳಲ್ಲಿ ನಿಂತಿದ್ದ ಸಾರ್ವಜನಿಕರು ಮೆರವಣಿಗೆಯ ವೈಭವವನ್ನು ಕಣ್ಣುತುಂಬಿಕೊಂಡರು.