ಕುಶಾಲನಗರ, ಮೇ 15: ಬ್ಯಾಡಗೊಟ್ಟದ ನಿರಾಶ್ರಿತರ ಪುನರ್ವಸತಿ ಕೇಂದ್ರಕ್ಕೆ ಭೂಮಿ ಮತ್ತು ವಸತಿ ರಹಿತರ ಹೋರಾಟ ಸಮಿತಿಯ ಪ್ರಮುಖರು ಭೇಟಿ ನೀಡಲು ತೆರಳಿದ ಸಂದರ್ಭ ಪೊಲೀಸರು ಅವರನ್ನು ತಡೆಹಿಡಿದು ಹಿಂತಿರುಗುವಂತೆ ಸೂಚನೆ ನೀಡಿದ ಘಟನೆ ಸೋಮವಾರ ಸಂಜೆ ನಡೆಯಿತು.

ಭೂಮಿ ಮತ್ತು ವಸತಿ ರಹಿತರ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ನಿರ್ವಾಣಪ್ಪ, ರಾಜ್ಯ ಸಮಿತಿಯ ಸದಸ್ಯ ಸಿರಿಮನೆ ನಾಗರಾಜ್, ಎಸ್.ಆರ್. ಮಂಜುನಾಥ್ ಮತ್ತಿತರರು ಕುಶಾಲನಗರದಲ್ಲಿ ಗುಪ್ತ ಸಭೆ ನಡೆಸಿ ನಂತರ ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರಕ್ಕೆ ತೆರಳಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಸಮಿತಿಯ ಪ್ರಮುಖರನ್ನು ಶಿಬಿರಕ್ಕೆ ಪ್ರವೇಶಿಸಲು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಹಿಂತಿರುಗಬೇಕಾಯಿತು.

ದಿಡ್ಡಳ್ಳಿಯ ನಿರಾಶ್ರಿತರಿಗೆ ಸರಕಾರ ಬಸವನಹಳ್ಳಿ ಮತ್ತು ಬ್ಯಾಡಗೊಟ್ಟದಲ್ಲಿ ಪುನರ್ವಸತಿ ಕಲ್ಪಿಸಿದ್ದು ನಿರಾಶ್ರಿತರಿಗೆ 5 ಸೆಂಟ್ ಜಾಗ ನೀಡಬೇಕು. ಮನೆ ನಿರ್ಮಾಣ ತನಕ ಅವರ ಖರ್ಚು ವೆಚ್ಚವನ್ನು ಜಿಲ್ಲಾಡಳಿತ ಭರಿಸಬೇಕು. ಬ್ಯಾಡಗೊಟ್ಟದಿಂದ ತೆರವುಗೊಳಿಸಿದ 200 ಕ್ಕೂ ಅಧಿಕ ಕುಟುಂಬಗಳಿಗೆ ಬ್ಯಾಡಗೊಟ್ಟದಲ್ಲಿ ಶಾಶ್ವತ ನೆಲೆ ಕಲ್ಪಿಸಬೇಕು ಎಂಬದು ಈ ಹೋರಾಟ ಸಮಿತಿಯ ಪ್ರಮುಖರ ಒತ್ತಾಯವಾಗಿದೆ.