ಗೋಣಿಕೊಪ್ಪಲು, ಮೇ 16 : ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಬಾಳೆಲೆ ವಿಜಯಲಕ್ಷ್ಮಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಪ್ರೀ ಕ್ವಾರ್ಟರ್ ಫೈನಲ್‍ನಲ್ಲಿ ಚೆಕ್ಕೇರ ತಂಡವು ಮಂಡುವಂಡ ವಿರುದ್ಧ ಹೀನಾಯ ಸೋಲು ಅನುಭವಿಸುವ ಮೂಲಕ ಅಳಮೇಂಗಡ ಕ್ರಿಕೆಟ್ ಕಪ್‍ನಿಂದ ಹೊರ ಬಿದ್ದಿದೆ.

ಆತಿಥೇಯ ಅಳಮೇಂಗಡ, ಅಮ್ಮಚ್ಚಿಮಣಿಯಂಡ, ಕಾಣತಂಡ, ಕೆದಮುಳ್ಳೂರ್ ಮಾಳೇಟೀರ, ಬಿರುನಾಣಿ ಅಣ್ಣಳಮಾಡ ಹಾಗೂ ಮಂಡುವಂಡ ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶ ಪಡೆದಿವೆ.

ಚಾಂಪಿಯನ್ ಹೊರಕ್ಕೆ : 7 ಬಾರಿ ಕೊಡವ ಕ್ರಿಕೆಟ್‍ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಚೆಕ್ಕೇರ ಮಂಡುವಂಡ ವಿರುದ್ಧ 9 ವಿಕೆಟ್‍ಗಳ ಸೋಲು ಅನುಭವಿಸಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಚೆಕ್ಕೇರ ತಂಡಕ್ಕೆ ಮಂಡುವಂಡ ತಂಡದ ಬೌಲರ್‍ಗಳು ಮುಳುವಾದರು. ತಂಡದ ಬ್ಯಾಟ್ಸ್‍ಮನ್ ಕಾರ್ಯಪ್ಪ 22 ರನ್‍ಗಳಿಗೆ ನಿರ್ಗಮಿಸಿದರು. ಪೂವಯ್ಯ ಕೂಡ ಬೇಗನೇ ಔಟಾದರು. ನಿಗದಿತ 10 ಓವರ್‍ಗಳಲ್ಲಿ 47 ರನ್ ದಾಖಲಿಸಿತು.

ಮಂಡುವಂಡ ತಾಳ್ಮೆಯಿಂದ ಬ್ಯಾಟ್ ಮಾಡಿ 4 ಚೆಂಡು ಉಳಿದಿರುವಂತೆ 1 ವಿಕೆಟ್ ಕಳೆದುಕೊಂಡು ಪಂದ್ಯ ಗೆದ್ದು ಕೊಂಡಿತು. ಮಂಡುವಂಡ ಪರ ಗಣೇಶ್ 20, ದರ್ಶನ್ 19 ರನ್, ಮಂಡುವಂಡ ಪರ ದರ್ಶನ್ 4 ವಿಕೆಟ್, ಹರ್ಷಿತ್ 2 ವಿಕೆಟ್ ಪಡೆದು ಕ್ರೀಡಾಭಿಮಾನಿಗಳ ಮನಗೆದ್ದರು. 22 ರನ್ ಹೊಡೆದ ಚೆಕ್ಕೇರ ಕಾರ್ಯಪ್ಪ ಪಂದ್ಯ ಶ್ರೇಷ್ಠರಾದರು.

ಆತಿಥೇಯ ಅಳಮೇಂಗಡ ಅಚ್ಚಪಂಡ ವಿರುದ್ಧ 5 ರನ್‍ಗಳ ರೋಚಕ ಗೆಲುವು ದಾಖಲಿಸಿತು. ಮೊದಲು ಬ್ಯಾಟ್ ಮಾಡಿದ ಅಳಮೇಂಗಡ 3 ವಿಕೆಟ್ ನಷ್ಟಕ್ಕೆ 75 ರನ್ ಗಳಿಸಿತು. ಅಚ್ಚಪಂಡ ತಂಡವು 5 ವಿಕೆಟ್‍ಗೆ 70 ರನ್ ಗಳಿಸಿತು. ಅಳಮೇಂಗಡ ಪರ ದಿಪಿನ್ 30, ವರುಣ್ 15 ರನ್, ಅಚ್ಚಪಂಡ ಅಯ್ಯಪ್ಪ 25, ಮಿಥುನ್ 24 ರನ್ ಗಳಿಸಿದರು. ಅಳಮೇಂಗಡ ದಿಪಿನ್ 2 ವಿಕೆಟ್, ಅಚ್ಚಪಂಡ ಮಂಜು ಮಾಚಯ್ಯ 2 ವಿಕೆಟ್ ಪಡೆದು ಪಂದ್ಯ ಶ್ರೇಷ್ಠರಾದರು.

ಅಮ್ಮಚ್ಚಿಮಣಿಯಂಡವು ಪಂದ್ಯಂಡವನ್ನು 6 ವಿಕೆಟ್‍ಗಳಿಂದ ಸೋಲಿಸಿತು. ಪಂದ್ಯಂಡ 10 ವಿಕೆಟ್ ಕಳೆದುಕೊಂಡು 50 ರನ್ ದಾಖಲಿಸಿತು. ಅಮ್ಮಚ್ಚಿಮಣಿಯಂಡವು 4 ವಿಕೆಟ್ ಕಳೆದುಕೊಂಡು 51 ರನ್ ದಾಖಲಿಸಿ ಪಂದ್ಯ ಗೆದ್ದು ಕೊಂಡಿತು. ಅಮ್ಮಚ್ಚಿಮಣಿಯಂಡ ಪರ ಚೇತನ್ 17 ರನ್ ದಾಖಲಿಸಿದರು. ಪಂದ್ಯಂಡ ಬೋಪಣ್ಣ 10 ರನ್ ದಾಖಲಿಸಿ 2 ವಿಕೆಟ್ ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಮಾಜಿ ಚಾಂಪಿಯನ್ ಕಾಣತಂಡ ತಂಡವು ಕೊಟ್ಟಂಗಡ ವಿರುದ್ಧ 9 ವಿಕೆಟ್‍ಗಳ ಗೆಲುವು ದಾಖಲಿಸಿತು. ಕೊಟ್ಟಂಗಡ 9 ವಿಕೆಟ್‍ಗೆ 50 ರನ್, ಕಾಣತಂಡ 1 ವಿಕೆಟ್ ಕಳೆದುಕೊಂಡು 51 ರನ್ ಗಳಿಸಿ ಗೆದ್ದು ಬೀಗಿತು. ಕಾಣತಂಡ ಪರ ವಿಪನ್ ಉತ್ತಪ್ಪ 41 ರನ್‍ಗಳಿಸಿದರು. ಕೊಟ್ಟಂಗಡ ವಿಶು 11 ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಮಾಳೇಟೀರ (ಕೆದಮುಳ್ಳೂರ್) ಮೂಕೊಂಡ ತಂಡವನ್ನು 9 ವಿಕೆಟ್‍ಗಳಿಂದ ಸೋಲಿಸಿತು. ಮೂಕೊಂಡ 2 ವಿಕೆಟ್ ನಷ್ಟಕ್ಕೆ 97 ರನ್, ಮಾಳೇಟೀರ 1 ವಿಕೆಟ್ ನಷ್ಟಕ್ಕೆ 100 ರನ್ ದಾಖಲಿಸಿ ಗೆಲುವು ಪಡೆಯಿತು. ಮಾಳೇಟೀರ ದ್ಯಾನ್ 51 ರನ್ ದಾಖಲಿಸಿದರು. ಮೂಕೊಂಡ ಡೆನ್ 39 ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಬಿರುನಾಣಿ ಅಣ್ಣಳಮಾಡ ತಂಡವು ಕೂತಂಡ ವಿರುದ್ಧ 9 ವಿಕೆಟ್ ಗೆಲುವು ಪಡೆಯಿತು. ಕೂತಂಡ 5 ವಿಕೆಟ್‍ಗೆ 60 ರನ್ ದಾಖಲಿಸಿತು. ಅಣ್ಣಳಮಾಡ 6.1 ಓವರ್‍ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗೆÀಲುವು ಪಡೆಯಿತು. ಅಣ್ಣಳಮಾಡ ಭವನ್ ಹಾಗೂ ಕಟ್ಟಿ ತಲಾ 2 ವಿಕೆಟ್, ಪಡೆದರು. ಕೂತಂಡ ಸಂತೋಷ್ 16 ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.