ಸೋಮವಾರಪೇಟೆ,ಮೇ.16: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜೂನ್ 5ರಂದು ಸೋಮವಾರ ಪೇಟೆಯಲ್ಲಿ ನಡೆಯಲಿರುವ 5ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ವನ್ನು ಯಶಸ್ವಿಗೊಳಿಸುವ ಸಂಬಂಧ ಚರ್ಚಿಸಲು ಶಾಸಕ ಅಪ್ಪಚ್ಚು ರಂಜನ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ರಂಜನ್, ಎಲ್ಲಾ ಉಪಸಮಿತಿಗಳು ಮುಂದಿನ ಮೂರು ದಿನಗಳೊಳಗಾಗಿ ಕಾರ್ಯಕ್ರಮ ಸಿದ್ಧತೆಯ ಸಂಪೂರ್ಣ ವಿವರಗಳನ್ನು ನೀಡಬೇಕು ಎಂದು ಸೂಚಿಸಿದರು.

ಸಮಾಜ ಸೇವೆ, ಸಾಹಿತ್ಯ ಕ್ಷೇತ್ರ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿದವರ ಹೆಸರುಗಳನ್ನು ಮುಖ್ಯ ದ್ವಾರಗಳು ಮತ್ತು ವೇದಿಕೆಗೆ ಇಡಬೇಕೆಂದು ಸಲಹೆ ನೀಡಿದರು. ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲಾ ಕನ್ನಡಾಭಿಮಾನಿಗಳು, ವಿವಿಧ ಸಂಘ ಸಂಸ್ಥೆಗಳು, ಚೇಂಬರ್ ಆಫ್ ಕಾಮರ್ಸ್, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ, ಎಲ್ಲಾ ಇಲಾಖಾಧಿಕಾರಿಗಳು ಕ್ರಿಯಾಶೀಲ ರಾಗಿ ತಮ್ಮನ್ನು ತೊಡಗಿಸಿಕೊಂಡು ಕನ್ನಡದ ಕೆಲಸವನ್ನು ಮಾಡ ಬೇಕೆಂದು ಕರೆ ನೀಡಿದರು.

ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್ ಸಾಗರ್, ತಾಲೂಕು ಘಟಕದ ಅಧ್ಯಕ್ಷ ಎಚ್.ಜೆ. ಜವರಪ್ಪ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ತಾಲೂಕು ಪಂಚಾಯಿತಿ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಸುನಿಲ್ ಉಪಸ್ಥಿತರಿದ್ದರು.