ಕೂಡಿಗೆ, ಮೇ 18: ಸಮೀಪದ ಯಡವನಾಡು ಗ್ರಾಮದಲ್ಲಿ ಕಳಪೆ ಗುಣಮಟ್ಟದ ರಸ್ತೆ ಡಾಂಬರೀಕರಣ ಕಾಮಗಾರಿ ನಡೆಯುತ್ತಿದೆ ಎಂದು ಆರೋಪಿಸಿ ಯಡವನಾಡು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ನಮ್ಮ ಗ್ರಾಮ, ನಮ್ಮ ರಸ್ತೆ ಯೋಜನೆಯಡಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ 6 ಕೋಟಿ ರೂ. ವೆಚ್ಚದಲ್ಲಿ ಯಡವನಾಡು ಮುಖ್ಯ ರಸ್ತೆಯಿಂದ ಕಾಜೂರು ರಸ್ತೆಯ ವರೆಗೆ 6 ಕಿ.ಮೀ ದೂರದ ರಸ್ತೆ ಕಾಮಗಾರಿಯನ್ನು ಗುತ್ತಿಗೆದಾರರು ನಡೆಸಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ವ್ಯವಸ್ಥೆ ಮತ್ತು ಮನೆಗಳಿರುವ ಜಾಗದಲ್ಲಿ ಮೋರಿಗಳನ್ನು ನಿರ್ಮಾಣ ಮಾಡದೆ ಗುತ್ತಿಗೆದಾರರು ಮನಬಂದಂತೆ ಮೆಟ್ಲಿಂಗ್ ಕಾಮಗಾರಿ ನಡೆಸಿದ್ದಾರೆ. ಡಾಂಬರೀಕರಣ ಮಾಡಲು ಪ್ರಾರಂಭಿಸಿದ ಸಂದರ್ಭ ಅಡಿಭಾಗದ ಧೂಳು ಹಾಗೂ ಮಣ್ಣನ್ನು ತೆಗೆಯದೆ ಕಳಪೆ ಡಾಂಬರೀಕರಣ ಮಾಡಲಾಗುತ್ತಿದೆ ಎಂದು ಯಡವನಾಡು ಗ್ರಾ.ಪಂ. ಸದಸ್ಯರು ಹಾಗೂ ಗ್ರಾಮಸ್ಥರು ಆರೋಪಿಸಿದರು.

ಪ್ರತಿಭಟನಾಕಾರರು ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಗ್ರಾಮ, ನಮ್ಮ ರಸ್ತೆ ಯೋಜನೆಯ 6 ಕಿ.ಮೀ ವ್ಯಾಪ್ತಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ, ಹಾಕಿರುವ ಡಾಂಬರನ್ನು ತೆಗೆದು ಸಮರ್ಪಕವಾಗಿ ವೈಜ್ಞಾನಿಕ ರೀತಿಯಲ್ಲಿ ಡಾಂಬರೀಕರಣಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಯಡವನಾಡು ಗ್ರಾಮದ ವಾರ್ಡ್ ಸದಸ್ಯ ರಮೇಶ್, ಐಗೂರು ಗ್ರಾ.ಪಂ ಸದಸ್ಯ ರಮೇಶ್, ಗ್ರಾಮಸ್ಥರುಗಳಾದ, ಜೆ.ಆರ್. ವಿಶ್ವನಾಥ್, ಸುರೇಶ್, ಸಿ.ಕೆ. ಉದಯ, ವೈ.ಡಿ. ಗಿರೀಶ್, ಜಿ.ಆರ್. ವಿಜಯ್‍ಕುಮಾರ್, ಭಾನುಪ್ರಕಾಶ್, ಡಿ.ಕೆ. ಪೊನ್ನಪ್ಪ, ಡಿ.ಕೆ. ಪ್ರಕಾಶ್, ವಾಸುದೇವ್, ಚಂದ್ರು ಸೇರಿದಂತೆ ನೂರಾರು ಗ್ರಾಮಸ್ಥರು ಪ್ರತಿಭಟನೆಯಲ್ಲಿ ತೊಡಗಿದ್ದರು.