ಮಡಿಕೇರಿ ಮೇ 18 : ಬೆಂಗಳೂರಿನ ಡಾ. ಅಂಬೇಡ್ಕರ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ನಡೆದ ರಾಷ್ಟ್ರಮಟ್ಟದ ತಾಂತ್ರಿಕ ವಸ್ತು ಪ್ರದರ್ಶನದಲ್ಲಿ ಗೋಣಿಕೊಪ್ಪಲಿನ ಕಾವೇರಿ ಪಾಲಿಟೆಕ್ನಿಕ್ ಮೆಕ್ಯಾನಿಕಲ್ ವಿದ್ಯಾರ್ಥಿಗಳು ಪ್ರಥಮ ಸ್ಥಾನಗಳಿಸುವ ಮೂಲಕ 1 ಲಕ್ಷ ನಗದು ಬಹುಮಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾಲೇಜಿನ ಪ್ರಾಂಶುಪಾಲ ಕೆ. ಶ್ರೀನಿವಾಸ್ ಹಾಗೂ ತಾಂತ್ರಿಕ ವಿಭಾಗದ ಪ್ರಮುಖರು ಸುಮಾರು 1.26 ಲಕ್ಷ ರೂ. ವೆಚ್ಚದಲ್ಲಿ 27 ವಿದ್ಯಾರ್ಥಿಗಳ ತಂಡ ಹತ್ತು ತಿಂಗಳ ಪರಿಶ್ರಮದಿಂದ ತಯಾರಿಸಿದ ಕಂಪ್ಯೂಟರ್ ನ್ಯೂಮೆರಿಕಲ್ ಕಂಟ್ರೋಲ್ ಆಟೋಮೇಟೆಡ್ ಲೇತ್ ಪ್ರಾಜೆಕ್ಟ್‍ನ ಕುರಿತು ಮಾಹಿತಿ ನೀಡಿದರು.

ಈ ಯಂತ್ರವನ್ನು ತಯಾರಿಸಲು 20 ಲಕ್ಷ ರೂ.ಗಳವರೆಗೆ ವೆಚ್ಚ ತಗಲುತ್ತದೆಯಾದರೂ ವಿದ್ಯಾರ್ಥಿಗಳು ಇಷ್ಟು ಕಡಿಮೆ ವೆಚ್ಚದಲ್ಲಿ ಯಂತ್ರವನ್ನು ತಯಾರಿಸಿರುವದು ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿನ ಒಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಇದನ್ನು ಸಿಎನ್‍ಸಿ ಲೇತ್ ಎಂದು ಕರೆಯಲಾಗುತ್ತಿದ್ದು, ಕಂಪ್ಯೂಟರ್ ಮೂಲಕ ಯಂತ್ರವನ್ನು ನಿಯಂತ್ರಿಸುವದು ಇದರ ಕಾರ್ಯವಾಗಿದೆ. ಕಂಪ್ಯೂಟರ್‍ಗೆ ನಾವು ಒದಗಿಸುವ ತಾಂತ್ರಿಕ ಮಾಹಿತಿಯನ್ನು ವಿದ್ಯುನ್ಮಾನ ಉಪಕರಣಗಳಾದ ಬ್ರೇಕ್ ಔಟ್ ಬೋರ್ಡ್ ಮತ್ತು ಮೋಟಾರ್ ಡ್ರೈವರ್ಸ್‍ಗಳ ಮೂಲಕ ಸಂಕೇತಗಳಾಗಿ ಪರಿವರ್ತಿಸಿ ಯಂತ್ರಗಳ ಚಲನವಲನಗಳನ್ನು ನಿಯಂತ್ರಿಸಲಾಗುತ್ತದೆ ಎಂದು ತಿಳಿಸಿದರು.

ಸ್ಪರ್ಧೆಯಲ್ಲಿ ಸುಮಾರು 110 ಕಾಲೇಜುಗಳು ಪಾಲ್ಗೊಂಡಿದ್ದು, ಕಾವೇರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ದಕ್ಷಿಣ ಭಾರತದಲ್ಲೇ ಪ್ರಥಮ ಸ್ಥಾನ ಗಳಿಸಿರುವದು ಹೆಮ್ಮೆಪಡುವ ವಿಚಾರವೆಂದು ಬೋಧಕರಾದ ಪಿ.ಪಿ. ಉಣ್ಣಿಕೃಷ್ಣನ್ ತಿಳಿಸಿದರು. ಮುಂದಿನ ದಿನಗಳಲ್ಲಿ ಸ್ಯಾಟ್‍ಲೈಟ್ ತಯಾರಿಸುವ ಕುರಿತು ಚಿಂತನೆ ನಡೆಸಲಾಗಿದ್ದು, ಇದಕ್ಕಾಗಿ 10 ಲಕ್ಷ ರೂ. ವೆಚ್ಚವಾಗಲಿದೆ ಎಂದು ಪ್ರಮುಖರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ತಾಂತ್ರಿಕ ವಿಭಾಗದ ಮುಖ್ಯಸ್ಥ ಕೆ.ಎ. ದೇವಯ್ಯ, ಉಪನ್ಯಾಸಕ ಕೆ.ಎಸ್. ದರ್ಶನ್ ಹಾಗೂ ವಿದ್ಯಾರ್ಥಿ ನಾಯಕ ಕೆ. ಆದಿತ್ಯ ಉಪಸ್ಥಿತರಿದ್ದರು.