ಗೋಣಿಕೊಪ್ಪಲು, ಮೇ 18: ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಬಾಳೆಲೆ ವಿಜಯಲಕ್ಷ್ಮಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಸೆಮಿ ಫೈನಲ್ ಪಂದ್ಯಗಳಲ್ಲಿ ಮರೆನಾಡಿನ ಬಿರುನಾಣಿ ಅಣ್ಣಳಮಾಡ ಹಾಗೂ ಕಳಕಂಡ ತಂಡಗಳು ಫೈನಲ್‍ಗೆ ಲಗ್ಗೆ ಇಟ್ಟಿವೆ. ಮಾಜಿ ಚಾಂಪಿಯನ್ ಕಾಣತಂಡ ಹಾಗೂ ಆತಿಥೇಯ ಅಳಮೇಂಗಡ ಸೋಲು ಅನುಭವಿಸುವ ಮೂಲಕ ಪ್ರಶಸ್ತಿ ಸುತ್ತಿನಿಂದ ಹೊರ ಬಿದ್ದಿದೆ. ಕೊಡವ ಕ್ರಿಕೆಟ್‍ನಲ್ಲಿ 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಕಾಣತಂಡ ತಂಡ ಕಳಕಂಡ ವಿರುದ್ದ ಕೊನೆಯ 11 ಬಾಲಿಗೆ 1 ರನ್‍ಗಳ ಮೂಲಕ ಟೈ ಸಾಧನೆಯಿಂದಾಗಿ ಸೋಲು ಅನುಭವಿಸಿತು.

ಕಳಕಂಡ ಟಾಸ್ ಸೋತು ಮೊದಲು ಬ್ಯಾಟ್ ಮಾಡಿ ನಿಗದಿತ 15 ಓವರ್‍ಗಳಿಗೆ 82 ರನ್ ದಾಖಲಿಸಿತು. ಕಾಣತಂಡವು 82 ರನ್ ಗಳಿಸುವಷ್ಟರಲ್ಲಿ 9 ವಿಕೆಟ್ ಕಳೆದುಕೊಂಡು ಓವರ್‍ನ ಕೊನೆಯ ಎಸೆತದಲ್ಲಿ ರನ್ ಪಡೆಯಲಾಗದೆ ವಿಕೆಟ್ ಕಳೆದುಕೊಂಡು ಪಂದ್ಯ ಟೈ ಫಲಿತಾಂಶಕ್ಕೆ ಕಾರಣವಾಯಿತು.

(ಮೊದಲ ಪುಟದಿಂದ) ಕೊನೆಯ 2 ಓವರ್‍ಗಳಿಗೆ ಗೆಲುವು ದಾಖಲಿಸಲು ಕಾಣತಂಡಕ್ಕೆ 7 ರನ್‍ಗಳಿದ್ದಾಗ 14 ನೇ ಓವರ್‍ನಲ್ಲಿ ಕಳಕಂಡ ಮಧು ಕಾರ್ಯಪ್ಪ ಅವರ ಪ್ರಥಮ ಎಸೆತಕ್ಕೆ 1 ಸಿಕ್ಸರ್ ದಾಖಲಾಯಿತು. ನಂತರದ 3 ವಿಕೆಟ್‍ಗಳು ಉರುಳಿದವು. ಕೊನೆಯ ಓವರ್ ಬೌಲ್ ಮಾಡಿದ ಕಳಕಂಡ ಬಬ್ಲಿ ರನ್ ನೀಡದೆ 1 ವಿಕೆಟ್ ಪಡೆದರು.

ಸೂಪರ್ ಓವರ್‍ನಲ್ಲಿ ಕಳಕಂಡ ಪರ ಮಧು ಬೌಲ್ ಮಾಡಿ 2 ವಿಕೆಟ್ ಪಡೆದರು. ಮೊದಲನೇ ಎಸತಕ್ಕೆ 4 ರನ್ ದಾಖಲಿಸಿತು. ನಂತರ ಕಿಶನ್ ಕಾರ್ಯಪ್ಪ ಹಾಗೂ ಮನು ಅಯ್ಯಪ್ಪ ವಿಕೆಟ್ ಪಡೆಯುವ ಮೂಲಕ ಕಳಕಂಡ 5 ರನ್‍ಗಳ ಗುರಿ ಪಡೆದುಕೊಂಡಿತು. ಕಳಕಂಡ ಪರ ಬಬ್ಲಿ 1 ಬೌಂಡರಿ, ಹಾಗೂ 1 ಸಿಕ್ಸರ್ ಸಿಡಿಸುವ ಮೂಲಕ ಪಂದ್ಯ ಗೆದ್ದುಕೊಟ್ಟರು.

ಕಾಣತಂಡ ಪರ ಮನು ಅಯ್ಯಪ್ಪ 24, ಕಿಶಾನ್ ಕಾರ್ಯಪ್ಪ 15 ರನ್ ದಾಖಲಿಸಿದರು. ಕಾಣತಂಡ ಕಿಶನ್ 4 ವಿಕೆಟ್, ಕಳಕಂಡ ಕಾರ್ಯಪ್ಪ 32 ರನ್, ಬಬ್ಲಿ 17 ರನ್, ಪ್ರಸನ್ನ 4 ವಿಕೆಟ್, ಕಾರ್ಯಪ್ಪ 3 ವಿಕೆಟ್ ಪಡೆದು ಮಿಂಚಿದರು. ಪಂದ್ಯ ಪುರುಷರಾಗಿ ಕಾಣತಂಡ ಕಿಶಾನ್ ಕಾರ್ಯಪ್ಪ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಆತಿಥೇಯ ಅಳಮೇಂಗಡವನ್ನು ಅಣ್ಣಳಮಾಡ (ಬಿರುನಾಣಿ) ತಂಡವು 10 ರನ್‍ಗಳಿಂದ ಸೋಲಿಸಿತು. ಮೊದಲು ಬ್ಯಾಟ್ ಮಾಡಿದ ಅಣ್ಣಳಮಾಡ 75 ರನ್‍ಗಳಿಗೆ ಆಲೌಟ್ ಆಯಿತು.. ಅಣ್ಣಳಮಾಡ ಕಿಟ್ಟು ತಿಮ್ಮಯ್ಯ 24 ರನ್, ಅಳಮೇಂಗಡ ದಿಲಿಪ್ 4 ವಿಕೆಟ್, ಸೋಮಯ್ಯ ಹಾಗೂ ದಿಪಿನ್ ತಲಾ 2 ವಿಕೆಟ್ ಪಡೆದರು.

ಅಳಮೇಂಗಡ 7 ವಿಕೆಟ್ ಕಳೆದುಕೊಂಡು 65 ರನ್ ದಾಖಲಿಸಿ 10 ರನ್‍ಗಳಿಂದ ಸೋಲು ಅನುಭವಿಸಿತು. ಅಳಮೇಂಗಡದ ದಿಪಿನ್, ಸೋಮಯ್ಯ ಹಾಗೂ ದಿಲಿಪ್ ರನ್ ದಾಖಲಿಸದೆ ಸೋಲಿಗೆ ಕಾರಣರಾದರು. ಅಳಮೇಂಗಡ ಪರ ದರ್ಶನ್ 21 ರನ್ ಹೊಡೆದರು. ಅಣ್ಣಳಮಾಡ ಭವನ್ ಬಿದ್ದಪ್ಪ, ಸೋಮಯ್ಯ, ಅರುಣ್ ಹಾಗೂ ಕಿಟ್ಟು ತಿಮ್ಮಯ್ಯ ತಲಾ 2 ವಿಕೆಟ್ ಪಡೆಯುವ ಮೂಲಕ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು. ಅಣ್ಣಳಮಾಡ ಬಿಗಿ ಬೌಲಿಂಗ್ ಹಾಗೂ ಹೋರಾಟದ ಕ್ಷೇತ್ರ ರಕ್ಷಣೆ ಮೂಲಕ ಪಂದ್ಯ ಗೆದ್ದುಕೊಂಡರು. ಅಳಮೇಂಗಡ ದಿಲಿಪ್ ಪಂದ್ಯ ಪುರುಷ ಪ್ರಶಸ್ತಿ ಪಡೆದರು.

21 ಕ್ಕೆ ಫೈನಲ್: ಅಳಮೇಂಗಡ ಕ್ರಿಕೆಟ್ ಕಪ್‍ನ ಸಮಾರೋಪ ಹಾಗೂ ಫೈನಲ್ ಹಣಾಹಣಿ ತಾ. 21 ರಂದು ನಡೆಯಲಿದೆ. ತಾ. 19 ಹಾಗೂ 20 ರಂದು ರಜೆ ಘೋಷಿಸಲಾಗಿದೆ. 21 ರಂದು ಬೆಳಿಗ್ಗೆ 10.30 ಕ್ಕೆ ಫೈನಲ್ ಹಣಾಹಣಿ ನಡೆಯಲಿದೆ ಎಂದು ಅಳಮೇಂಗಡ ಕ್ರಿಕೆಟ್ ಕಪ್ ಮಾಧ್ಯಮ ಕಾರ್ಯದರ್ಶಿ ಅಳಮೇಂಗಡ ರಮೇಶ್ ತಿಳಿಸಿದ್ದಾರೆ.

ಪಂದ್ಯಾವಳಿ ನಿರ್ಧೇಶಕರಾಗಿ ಮಾಚಂಗಡ ದರ್ಶನ್ ಸೋಮಣ್ಣ, ಸ್ಕೋರರ್ ಆಗಿ ಕೊಕ್ಕೇಂಗಡ ರಂಜನ್, ತೀಪುಗಾರರಾಗಿ ಕೊಟ್ಟಂಗಡ ಸೂರಜ್, ಆದೇಂಗಡ ನಿಶಿ ಕುಶಾಲಪ್ಪ, ಚೆಕ್ಕೇರ ನವೀನ್ ಹಾಗೂ ಆದೇಂಗಡ ಶಾಶ್ವತ್ ಕಾರ್ಯ ನಿರ್ವಹಿಸಿದರು. ಕಾಂಡೇರ ದಾನಾ ಕುಶಾಲಪ್ಪ ವೀಕ್ಷಕ ವಿವರಣೆ ನೀಡಿದರು.