ಮಡಿಕೇರಿ ಮೇ 18 : ಆರು ದಶಕಗಳನ್ನು ಕಂಡಿರುವ ಕೊಡಗು ಕಾಫಿ ಬೆಳೆಗಾರ ಸಹಕಾರ ಸಂಘವು ಇಂದು ಆರ್ಥಿಕವಾಗಿ ಕುಸಿದು ಹೋಗಿದೆ. ಒಂದೊಮ್ಮೆ ಕೊಡಗಿನ ಬೆಳೆಗಾರರು ಭವಿಷ್ಯದ ಕನಸಿನೊಂದಿಗೆ ಪ್ರತಿಷ್ಠಿತ ಸಹಕಾರ ಸಂಸ್ಥೆಯಾಗಿ ಕಟ್ಟಿ ಬೆಳೆಸಿದ್ದರು. 1956ರ ವೇಳೆಗೆ ಮಡಿಕೇರಿ ಮಹಾತ್ಮಗಾಂಧಿ ರಸ್ತೆ ಅಂಚಿನಲ್ಲಿ ಗಾಂಧಿ ಮೈದಾನಕ್ಕೆ ಹೊಂದಿಕೊಂಡಂತೆ ಒಂದು ಸುಸಜ್ಜಿತ ಕಟ್ಟದವು ತಲೆಯೆತ್ತುವಂತಾಯಿತು.

ಜಿಲ್ಲೆಯ ಬೆಳೆಗಾರರಿಗೆ ಆಸರೆಯಾಗಿದ್ದ ಸಂಘವು ಕಾಫಿಗೆ ಮುಕ್ತ ಮಾರುಕಟ್ಟೆ ವ್ಯವಸ್ಥೆಯಾಗಿ ಕಾಫಿ ಮಂಡಳಿಯ ಹಿಡಿತ ಸಡಿಲಗೊಂಡ ಬೆನ್ನಲ್ಲೇ ಈ ಪ್ರತಿಷ್ಠಿತ ಸಹಕಾರ ಸಂಸ್ಥೆ ಬಲಹೀನಗೊಳ್ಳುವಂತೆ ಗೋಚರಿಸತೊಡಗಿತು.

ಇಪ್ಪತ್ತು ವರ್ಷಗಳ ಹಿಂದೆ ಅಂದಿನ ಬೆಳೆಗಾರರ ಸಹಕಾರ ಸಂಘದ ಆಡಳಿತ ಮಂಡಳಿಯು ಭಾರತೀಯ ಕಾಫಿ ಮಂಡಳಿ ಸಂಘಕ್ಕೆ ಸಂಬಂಧಿಸಿದ ಗೋದಾಮಿನಲ್ಲಿ ದಾಸ್ತಾನು ಇರಿಸಿದ್ದ ಭಾರೀ ಮೊತ್ತದ ಕಾಫಿಯನ್ನು ಏಕಪಕ್ಷೀಯವಾಗಿ ಮಾರಾಟಗೊಳಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಪರಿಣಾಮ ಕಾಫಿ ಮಂಡಳಿಯು ಜಿಲ್ಲೆಯು ಈ ಪ್ರತಿಷ್ಠಿತ ಸಂಸ್ಥೆಯು ಮಂಡಳಿಯ ಗಮನಕ್ಕೆ ಬಾರದಂತೆ ಕಾಫಿ ಮಾರಾಟ ಮಾಡಿ ತನಗೆ ರೂ. 1.55 ಕೋಟಿ ವಂಚಿಸಿರುವದಾಗಿ ಮೊಕದ್ದಮೆ ದಾಖಲಿಸಿದೆ. ಈ ಪ್ರಕರಣ ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘ ಮತ್ತು ಭಾರತೀಯ ಕಾಫಿ ಮಂಡಳಿ ನಡುವೆ ಕಾನೂನಾತ್ಮಕ ಸಂಘರ್ಷಕ್ಕೆ ನಾಂದಿಯಾಗಿದೆ.

ಹಲವು ವರ್ಷಗಳ ವ್ಯಾಜ್ಯದ ಬಳಿಕ ಕಾಫಿ ಮಂಡಳಿಯು ಕಾನೂನು ಸಮರಕ್ಕೆ ಮೇಲುಗೈ ಸಾಧಿಸಿದ್ದು, ರೂ. 1.55 ಕೋಟಿ ಅಸಲು ಹಣಕ್ಕೆ ಶೇ. 18 ಬಡ್ಡಿ ಸಹಿತ ಒಟ್ಟು ರೂಪಾಯಿ 5.50 ಕೋಟಿಯನ್ನು ಸಂಘದಿಂದ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ.

ಕಾನೂನಿನಿಂದ ಪಾರಾಗುವ ದಿಸೆಯಲ್ಲಿ ಸಂಘವು ತನ್ನೆಲ್ಲ ಆರ್ಥಿಕ ಮೂಲವನ್ನು ಕ್ರೋಢೀಕರಿಸಿ ಒಂದಿಷ್ಟು ಹಣವನ್ನು ನ್ಯಾಯಾಲಯದ ನಿರ್ದೇಶನದಂತೆ ಮಂಡಳಿಗೆ ಪಾವತಿಸಿದ್ದಾಗಿದೆ. ಇದರಿಂದಾಗಿ ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘವು ಆರ್ಥಿಕವಾಗಿ ಕುಸಿದು ಹೋಗಿದೆ.

ಬಾಡಿಗೆಯೇ ಜೀವಾಳ : ಇಂದು ಈ ಸಂಘ ಕೊಡಗಿನ ಪ್ರತಿಷ್ಠಿತ ಸಹಕಾರ ಸಂಸ್ಥೆಯಾಗಿ ಕಂಡು ಬಂದರೂ, ಬೆಳೆಗಾರರಿಂದ 10 ಸಾವಿರ ಮಂದಿಯಷ್ಟು ಸದಸ್ಯತ್ವ ಹೊಂದಿದ್ದರೂ, ಯಾವದೇ ಬೆಳೆಗಾರನ ನೆರವಿಗೆ ಧಾವಿಸುವಂತಹ ಸ್ಥಿತಿ ಅಥವಾ ಕಾಫಿ ಖರೀದಿಸುವ ಸಾಮಥ್ರ್ಯದಲ್ಲಿ ಇದ್ದಂತಿಲ್ಲ ! ಬದಲಾಗಿ ಸಂಘ ಹೊಂದಿರುವ ಸ್ವಂತ ಕಟ್ಟಡ ಮಳಿಗೆಗಳ ಬಾಡಿಗೆ, ಹೆಬ್ಬಾಲೆ ಹಾಗೂ ಹುಣಸೂರು ಪೆಟ್ರೋಲ್ ಬಂಕ್‍ಗಳಲ್ಲಿನ ಆದಾಯ ಇತ್ಯಾದಿಗಳಿಂದ ಉಸಿರಾಡುತ್ತಿದೆ.

ಸಂಘದ ಕಾಫಿ ಸಂಸ್ಕರಣ ಘಟಕ ಯಂತ್ರಗಳು ಓಬಿರಾಯನ ಕಾಲದಿದ್ದು, ಬೆಳೆಗಾರರು ಸಂಸ್ಕರಣಕ್ಕೆ ಬರುತ್ತಿದ್ದರೂ, ಇಲ್ಲಿ ಆದಾಯಕ್ಕಿಂತ ಖರ್ಚು ಜಾಸ್ತಿಯಾಗುವಂತಾಗಿದೆ. ಈ ದಿಸೆಯಲ್ಲಿ ಆಧುನಿಕ ಯಂತ್ರ ಅಳವಡಿಸುವ ಚಿಂತನೆ ಆಡಳಿತ ಮಂಡಳಿಗೆ ಇದ್ದರೂ, ಆರ್ಥಿಕ ಬಿಕ್ಕಟ್ಟು ಮತ್ತಷ್ಟು ಕಂಗೆಡಿಸಿದಂತಿದೆ.

ಚೇತರಿಕೆಗೆ ‘ಪೆಪ್ಪರ್ ಪಾರ್ಕ್’

ಪ್ರತಿಷ್ಠಿತ ಈ ಸಹಕಾರ ಸಂಘದ ಚೇತರಿಕೆ ಸಲುವಾಗಿ ಹೆಬ್ಬಾಲೆಯ ವಿಶಾಲ 10 ಎಕರೆ ಜಾಗದಲ್ಲಿ ಖಾಸಗಿಯವರ ಸಹಭಾಗಿತ್ವದೊಂದಿಗೆ ‘ಪೆಪ್ಪರ್ ಪಾರ್ಕ್’ (ಕಾಳುಮೆಣಸು ಸಂಸ್ಕರಣ ಘಟಕ) ರೂಪಿಸುವ ಯೋಜನೆಯೊಂದು ಆಡಳಿತ ಮಂಡಳಿ ಮುಂದಿದೆ. ಅಂದಾಜು ರೂ. 30 ಕೋಟಿ ವೆಚ್ಚದ ಈ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಅನುದಾನ ಶೇ. 90ರಷ್ಟು ಹೂಡಿಕೆಯ ಪ್ರಯತ್ನದೊಂದಿಗೆ ಶೇ. 10 ಪಾಲು ಹಣವನ್ನು ಸಂಘವೇ ಖಾಸಗಿಯವರ ನೆರವಿನಿಂದ ಹೂಡಲು ಗಮನ ಹರಿಸಿದೆ.

ಒಂದು ವೇಳೆ ಈ ಎಲ್ಲ ಆಲೋಚನೆಗಳು ಕಾರ್ಯರೂಪಕ್ಕೆ ಬಂದರೆ, ಕಾಫಿಯಷ್ಟೇ ಮಹತ್ವವಿರುವ ಕರಿಮೆಣಸು ಫಸಲನ್ನು ಜಿಲ್ಲೆಯ ಈ ಪ್ರತಿಷ್ಠಿತ ಸಹಕಾರ ಸಂಘುವು ಸಂಸ್ಕರಣಗೊಳಿಸಿ ಹೆಬ್ಬಾಲೆಯ ಘಟಕದಲ್ಲಿ ಬೆಳೆಗಾರ ಮತ್ತು ವ್ಯಾಪಾರಿಗಳಿಗೆ ಎಲ್ಲ ಸೌಲಭ್ಯದೊಂದಿಗೆ ವಿಶ್ವ ಮಾರುಕಟ್ಟೆಗೆ ನೇರ ರಫ್ತುಗೊಳಿಸುವ ದಿಸೆಯಲ್ಲಿ ಪ್ರಯತ್ನಶೀಲವಾಗಿದೆ.

ಪ್ರಸಕ್ತ ಆಡಳಿತ ಮಂಡಳಿಯ ಕೇಂದ್ರ ವಾಣಿಜ್ಯ ಸಚಿವಾಲಯದೊಂದಿಗೆ ವ್ಯವಹರಿಸಿ ಭಾರತೀಯ ಸಂಬಾರ ಮಂಡಳಿ ಹಾಗೂ ಇತರ ಇಲಾಖೆಗಳ ಪೂರ್ವಾನುಮತಿ ಪಡೆಯುವ ದಿಸೆಯಲ್ಲಿ ಮಾತುಕತೆ ಸಾಗಿದೆ. ಎಲ್ಲವೂ ಕೈಗೂಡಿದರೆ ಸಂಘವು ಚೇತರಿಸಿಕೊಳ್ಳಲಿದೆ ಎಂಬ ವಿಶ್ವಾಸವನ್ನು ಆಡಳಿತ ಮಂಡಳಿ ಅಧ್ಯಕ್ಷ ಎಂ.ಬಿ. ದೇವಯ್ಯ ವ್ಯಕ್ತಪಡಿಸಿದ್ದಾರೆ.

- ಶ್ರೀಸುತ