*ಗೋಣಿಕೊಪ್ಪಲು, ಮೇ 18: ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ಭದ್ರಕಾಳಿ ಹಾಗೂ ಗುಂಡಿಯತ್ ಅಯ್ಯಪ್ಪ ದೇವರ ವಾರ್ಷಿಕ ಬೇಡು ಹಬ್ಬ ತಾ. 20 ಹಾಗೂ ತಾ. 21 ರಂದು ಎರಡು ದಿನಗಳ ಕಾಲ ನಡೆಯಲಿದೆ.

ತಾ. 20ರಂದು ಗುಂಡಿಯತ್ತ್ ಅಯ್ಯಪ್ಪ ದೇವರ ಅವುಲ್ ಹಾಗೂ ರಾತ್ರಿ ಮನೆ ಮನೆ ಕಳಿ ಊರು ತಕ್ಕರಾದ ಚಮ್ಮಟೀರ ಮನೆಯಿಂದ ಹೊರಡಲಿದೆ. ತಾ. 21ರಂದು ಭಾನುವಾರ ಕೃತಕವಾಗಿ ಶೃಂಗರಿಸಲಾದ ಒಂದು ಕುದುರೆ ಚಮ್ಮಟೀರ ಹಾಗೂ ಮತ್ತೊಂದು ಕುದುರೆ ಮೂಕಳೇರ ಕುಟುಂಬದ ಮನೆಯಿಂದ ಹೊರಟು ದೇವಸ್ಥಾನದ ಸಮೀಪ ಅಂಬಲದಲ್ಲಿ ಪರಸ್ಪರ ಕೆಸರು ಎರಚಾಟದ ನಂತರ ದೇವಸ್ಥಾನದಲ್ಲಿ ಹರಕೆ ಕಾಣಿಕೆ ಒಪ್ಪಿಸಲಾಗುತ್ತದೆ ಎಂದು ತಕ್ಕಮುಖ್ಯಸ್ಥ ಚಮ್ಮಟೀರ ಕುಶಾಲಪ್ಪ ತಿಳಿಸಿದ್ದಾರೆ.

ಹಬ್ಬದ ಪ್ರತೀತಿ;- ಶನಿವಾರ ಊರು ತಕ್ಕರಾದ ಚಮ್ಮಟೀರ ಕುಟುಂಬದ ಮನೆಯಿಂದ ಮೂಲ ನಿವಾಸಿಗಳಲ್ಲಿ ಒಬ್ಬರಾದ ಪಣಿಕ ಜನಾಂಗದಿಂದ ‘ಪೆÇಲವಂದೆರೆ’ ಹೊರಡುವ ಮೂಲಕ ಎರಡು ದಿನಗಳ ಹಬ್ಬಕ್ಕೆ ಚಾಲನೆ ದೊರೆಯಲಿದ್ದು, ನಂತರ ಊರಿನ ಮೂರು ನಿಗದಿತ ದೇವರ ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಪೆÇಲವಪ್ಪಂಡ ಕೋಟದಲ್ಲಿ (ದೇವಸ್ಥಾನ) ಊರಿನ ಜನರು, ಹೆಂಗಸರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುತ್ತಾರೆ ಇದಕ್ಕೆ ಮುಂಚೆ ಇಬ್ಬರು ಕೊಡವ ಪೂಜಾರಿಗಳು (ಒಬ್ಬರು ಚಮ್ಮಟೀರ ಹಾಗೂ ಮತ್ತೊಬ್ಬರು ಮೂಕಳೇರ) ಮೂಕಳೇರ ಬಲ್ಯಮನೆಯ ಹತ್ತಿರದ ದೇವರ ಕೆರೆಯಲ್ಲಿ ಸ್ನಾನ ಮಾಡಿ ವಿವಿಧ ವಿಧಿ ವಿಧಾನದೊಂದಿಗೆ ಭಂಡಾರ ಪೆಟ್ಟಿಗೆ ಶುದ್ಧಿಗೊಳಿಸಿ ನಂತರ ಕೆರೆಯ ಹತ್ತಿರದಲ್ಲಿ ಹೊಸ ಮಣ್ಣಿನ ಮಡಿಕೆಯಲ್ಲಿ ಭತ್ತವನ್ನು ಬೇಯಿಸಿ ಹದಗೊಳಿಸಿ ಇದನ್ನು ಕುಟ್ಟಿ ಅವಲಕ್ಕಿಯನ್ನು ಮಾಡಿ ದೇವರಿಗೆ ನೈವೇದ್ಯ ತಯಾರು ಮಾಡಲಾಗುತ್ತದೆ. ಈ ಇಬ್ಬರು ಪೂಜಾರಿಗಳು ಬೆಳಿಗ್ಗೆಯಿಂದಲೇ ಉಪವಾಸ ಹಾಗೂ ಬಹಳ ಕಟ್ಟು ನಿಟ್ಟಿನಲ್ಲಿರಬೇಕು. ನೀರು ಸಹ ಸೇವಿಸುವಂತಿಲ್ಲ. ಇವರು ಪೊಲವಪ್ಪಂಡ ಕೋಟ ಪ್ರವೇಶಿಸಿ ವಿಶೇಷ ಪೂಜೆ ಸಲ್ಲಿಸಿ ಅಲ್ಲಿ ನೆರೆದ ಭಕ್ತರಿಗೆ ಈ ಕುಟ್ಟಿ ತಯಾರಿಸಿದ ಅವಲಕ್ಕಿಗೆ ಬಾಳೆ ಹಣ್ಣು ಸೇರಿಸಿ ಅವುಲ್ ಮಾಡಿದನ್ನು ಪ್ರಸಾದವಾಗಿ ನೀಡುತ್ತಾರೆ. ಅಲ್ಲಿ ವಿಶೇಷ ಪೂಜೆಯ ನಂತರ ಸಂಜೆಯಾಗುತ್ತಿದ್ದಂತೆ ಜೋಡುಬೀಟಿಯಲ್ಲಿರುವ ಪ್ರಮುಖ ದೇವಾಲಯದಲ್ಲಿ ಒಂದಾದ ಗುಂಡಿಯತ್ ಅಯ್ಯಪ್ಪ ದೇವಸ್ಥಾನ ಪ್ರವೇಶಿಸುತ್ತಾರೆ. ಇಲ್ಲಿಗೆ ಹೆಂಗಸರು ಹೋಗುವಂತಿಲ್ಲ. ಹಾಗೂ ಈ ಎಲ್ಲಾ ದೇವಸ್ಥಾನಕ್ಕೂ ಬ್ರಾಹ್ಮಣರ ಪೂಜೆ ನಿಷೇಧವಾಗಿದೆ. ಈ ದೇವಸ್ಥಾನದ ಸುತ್ತ ಶುಚಿಗೊಳಿಸಿ ಇಲ್ಲಿ ವಿಶೇಷ ಪೂಜೆ ಸಲ್ಲಿಸಿ ನೈವೇದ್ಯ ಸಲ್ಲಿಸಲಾಗುತ್ತದೆ. ಈ ದೇವಸ್ಥಾನಕ್ಕೆ ಭಕ್ತರು ಕೂಡ ಅತ್ಯಂತ ಶುದ್ಧ ಮುದ್ರಿಕೆಯಲ್ಲಿ ಹೋಗಬೇಕಾಗಿದ್ದು, ಒಂದಿಷ್ಟು ಕೆಟ್ಟ ರೀತಿಯಿಂದ ನಡೆದುಕೊಂಡರೆ ಹೆಜ್ಜೇನು ಹಿಂಡು ಬೀಳುತ್ತದೆ ಎಂಬ ಪ್ರತೀತಿ ಇದೆ.

ಇಲ್ಲಿ ವಿಶೇಷ ಪೂಜೆಯ ನಂತರ ಹರಕೆ ಎಂಬಂತೆ ಸಾವಿರಾರು ತೆಂಗಿನಕಾಯಿಯನ್ನು ಈಡು ಕಾಯಿ ರೂಪದಲ್ಲಿ ಭಕ್ತರು ಒಡೆದು ಹರಕೆ ತೀರಿಸಿಕೊಳ್ಳುತ್ತಾರೆ. ನಂತರ ಇಲ್ಲಿಂದ ಹೊರಟು ಇಲ್ಲಿನ ಸಮೀಪದ ನಿಗಧಿತ ಜಾಗದಲ್ಲಿ ತೆಂಗಿನ ಕಾಯಿ, ಬಾಳೆಹಣ್ಣು ತಿನ್ನುವ ಮೂಲಕ ಪೂಜಾರಿಗಳು ಉಪವಾಸವನ್ನು ಅಂತ್ಯಗೊಳಿಸುತ್ತಾರೆ. ಇಲ್ಲಿಂದ ಹೊರಟು ಮೂಕಳೇರ ಬಲ್ಯಮನೆಯಲ್ಲಿ ಸಾಮೂಹಿಕ ಬೋಜನ ಮಾಡಿ ನಂತರ ಚಮ್ಮಟೀರ ಬಲ್ಯಮನೆಗೆ ತೆರಳಿ ಅಲ್ಲಿ ವಿವಿಧ ವೇಷದಲ್ಲಿ ದೇವರ ಕಳಿ ಹಾಕಿ ಮನೆ ಮನೆ ಹೊರಡುತ್ತಾರೆ. ಈ ಹಿಂದೆ ಊರಿನ ಮನೆಯನ್ನೆಲ್ಲಾ ಸುತ್ತುತ್ತಿದ್ದು, ಇದೀಗ ಚಮ್ಮಟೀರ ಮಚ್ಚಿಯಂಡ ಹಾಗೂ ಮೂಕಳೇರ ಬಲ್ಯಮನೆಯಲ್ಲಿ ಈ ಕಳಿ ರಾತ್ರಿಯಿಡಿ ಸುತ್ತಲಾಗುತ್ತದೆ.

ಭಾನುವಾರ (21) ಮಧ್ಯಾಹ್ನದ ಮೇಲೆ ಚಮ್ಮಟೀರ ಹಾಗೂ ಮೂಕಳೇರ ಮನೆಯಿಂದ ಒಂದೊಂದು ಕುದುರೆ ಹಾಗೂ ಮೊಗವನ್ನು ಶೃಂಗರಿಸಿ ಅದನ್ನು ಹೊತ್ತು ಊರಿನ ಪ್ರಮುಖ ದೇವಾಲಯವಾದ ಭದ್ರಕಾಳಿ ದೇವಸ್ಥಾನದ ಹತ್ತಿರದ ಅಂಬಲದಲ್ಲಿ ಸೇರಿ ಎರಡು ಕಡೆಯಿಂದ ತಲಾ ಒಂದೊಂದು ಕುದುರೆ (ಕೃತಕವಾಗಿ ತಯಾರಿಸಿದ್ದು) ಹಾಗೂ ಮೊಗ ಮುಖಾಮುಖಿ ಆಗುತ್ತಿದ್ದಂತೆ ಪರಸ್ಪರ ಊರಿನವರು ಅಲಂಗಿಸಿಕೊಂಡು ಅಂಬಲದ ಸಮೀಪದ ದೇವರ ಕೆರೆಯಿಂದ ಕೆಸರನ್ನು ತಂದು ಪರಸ್ಪರ ಕೆಸರು ಎರಚಾಡಿ ಕೊಳ್ಳುವುದು ಇಲ್ಲಿನ ವಿಶೇಷವಾಗಿದ್ದು ಹಿರಿಯರು ಕಿರಿಯರು ಮಕ್ಕಳು ಎಂಬ ಭೇದವಿಲ್ಲದೆ ಪರಸ್ಪರ ಕೆಸರು ಎರಚಾಡಿ ಅಲಂಗಿಸಿಕೊಳ್ಳುತ್ತಾರೆ. ಆದರೆ, ಇಲ್ಲಿ ಹೆಂಗಸರಿಗೆ ಹಾಗೂ ಪರ ಊರಿನವರಿಗೆ ಹಾಗೂ ನೆಂಟರಿಗೆ ಕೆಸರು ಎರಚುವಂತಿಲ್ಲ. ಆದರೆ ಪರ ಊರಿನವರಿಗೆ ಹಾಗೂ ನೆಂಟರಿಗೆ ಮುಕ್ತವಾಗಿ ಇಲ್ಲಿ ಕುಣಿಯಲು ಅವಕಾಶವಿದೆ. ಅಂತಹವರಿಗೆ ಒಂದೊಂದು ಬೆತ್ತದ ಕೋಲು ನೀಡಲಾಗುತ್ತದೆ ಆ ಕೋಲು ಹಿಡಿದವರಿಗೆ ಕೆಸರು ಎರಚುವಂತಿಲ್ಲ ನಂತರ ಭದ್ರಕಾಳಿ ದೇವಸ್ಥಾನದಲ್ಲಿ ಸೇರಿ ಮೂರು ಸುತ್ತು ಬಂದು ಕಾಣಿಕೆ ಹಾಕುವ ಮೂಲಕ ಹಬ್ಬಕ್ಕೆ ತೆರೆ ಎಳೆಯಲಾಗುತ್ತದೆ.