ಮಡಿಕೇರಿ, ಮೇ 18: ಮಂಗಳೂರಿನಿಂದ ಬೆಂಗಳೂರಿಗೆ ಸಾಗಾಟಗೊಳಿಸುತ್ತಿದ್ದ ರೂ. 7.50 ಕೋಟಿ ವಂಚಿಸಿದ್ದ ಕೃತ್ಯವನ್ನು ಮಂಗಳೂರು ಪೊಲೀಸರು ದರೋಡೆ ಪ್ರಕರಣವೆಂದು ಪರಿಗಣಿಸಿ ತನಿಖೆ ಮುಂದುವರಿಸಿದ್ದಾರೆ.ಮೊನ್ನೆ ಸೋಮವಾರಪೇಟೆ ತಾಲೂಕು ಕುಂಬಾರಗಡಿಗೆ ಗ್ರಾಮದ ಕಾಡಿನಲ್ಲಿ ರೂ. 6.22 ಕೋಟಿ ನಗದು ಸಹಿತ ಬಂಧಿಸಿದ್ದ ಆರೋಪಿಗಳಾದ ಕಾಶಿ ಕಾರ್ಯಪ್ಪ, ಟಿ.ಎ. ಪೂವಣ್ಣ ಹಾಗೂ ಕರಿಬಸಪ್ಪ ಈ ಮೂವರನ್ನು ತಾ. 16 ರಂದು ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಲಯದಿಂದ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.ಆ ಮೇರೆಗೆ ಮಂಗಳೂರು ಪೊಲೀಸ್ ಹೆಚ್ಚುವರಿ ಆಯುಕ್ತೆ ಎನ್.ಎಸ್. ಶೃತಿ ಅವರ ನೇತೃತ್ವದಲ್ಲಿ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಕೊಡಗಿಗೆ ಕರೆ ತರಲಾಗಿದೆ. ಕಾಡಿನಲ್ಲಿ ಹಣ ಬಚ್ಚಿಟ್ಟಿದ್ದ ಸ್ಥಳ ಮಹಜರು ಸೇರಿದಂತೆ ತಲೆಮರೆಸಿಕೊಂಡಿರುವ ಟಿ.ಎ. ಭೀಮಯ್ಯ, ಟಿ.ಎ. ಉತ್ತಪ್ಪ, ಟಿ.ಪಿ. ಬಸಪ್ಪ ಈ ಮೂವರ ಸೆರೆಗಾಗಿ ಬಲೆ ಬೀಸಲಾಗಿದೆ ಎಂದು ಗೊತ್ತಾಗಿದೆ.ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿಗಳ ವಿರುದ್ಧ ವಂಚನೆ ಮಾತ್ರವಲ್ಲದೆ ದರೋಡೆ ಪ್ರಕರಣ ನಮೂದಿಸಿರುವದಾಗಿ ತಿಳಿದು ಬಂದಿದೆ.