ಮಡಿಕೇರಿ, ಮೇ 19: ಇಲಾಖೆಯ ಮಾರ್ಗದರ್ಶನದಂತೆ ಸಕಾಲದಲ್ಲಿ ಮಣ್ಣು ಪರೀಕ್ಷೆ ಮಾಡಿಸಿ, ಜಮೀನಿಗೆ ಗೊಬ್ಬರ ಮತ್ತು ಸುಣ್ಣ ಬಳಸಿದರೆ, ಗೊಬ್ಬರ ನಷ್ಟವಾಗದೆ ಉತ್ತಮ ಇಳುವರಿ ಪಡೆಯಬಹುದಾಗಿದೆ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಕರಡದಲ್ಲಿ ನಡೆದ ಕೃಷಿ ಇಲಾಖೆಯ ವಸ್ತು ಪ್ರದರ್ಶನ ಉದ್ಘಾಟಿಸಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಾಪೋಕ್ಲು ಹೋಬಳಿಯ ಕರಡ ಗ್ರಾಮದಲ್ಲಿ ಚೆಯ್ಯಂಡಾಣೆ ಪಂಚಾಯಿತಿ ಅಧ್ಯಕ್ಷೆ ಬೇಬಿ ಶಿವಪ್ಪ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ “ಕೃಷಿ ಅಭಿಯಾನ” ಕಾರ್ಯಕ್ರಮದಲ್ಲಿ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ಕಿರಣ್ ಕಾರ್ಯಪ್ಪ ಇಲಾಖೆಯವರ ಕಾರ್ಯಕ್ಷಮತೆಯನ್ನು ಶ್ಲಾಘಿಸುತ್ತಾ, ರೈತ ಬಾಂಧವರು ಸಕಾಲದಲ್ಲಿ ತಾಂತ್ರಿಕ ಮಾಹಿತಿ ಮತ್ತು ಅಗತ್ಯ ಕೃಷಿ ಪರಿಕರ ಪಡೆದುಕೊಂಡು ಲಾಭದಾಯಕ ಕೃಷಿ ಮಾಡುವಲ್ಲಿ ಯಶ್ವಸಿ ಕಾಣಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಮುರುಳಿ ಕರುಂಭಮಯ್ಯ ಅವರು ಹವಾಮಾನಕ್ಕೆ ಒಗ್ಗುವ ಬಿತ್ತನೆ ಬೀಜ, ಅವಶ್ಯಕತೆಯಿರುವ ಉಪಕರಣಗಳು, ಉತ್ತಮ ಗುಣಮಟ್ಟದ ಟಾರ್ಪಾಲಿನ್‍ಗಳು ಇಲಾಖೆಯಿಂದ ಸಿಗುವಂತಾಗಲೀ ಎಂದು ಆಶಿಸಿದರು.
ಕಡಂಗ ಸಹಕಾರ ಸಂಘದ ಅಧ್ಯಕ್ಷ ಕೋಡಿರ ತಮ್ಮಯ್ಯ ಕಾರ್ಯಕ್ರಮದಲ್ಲಿದ್ದು, ರೈತರ ಬಾಗಿಲಿಗೆ ಬಂದಿರುವ ಕೃಷಿ ಇಲಾಖಾಧಿಕಾರಿಗಳ ಸೇವೆಯನ್ನು ಬಳಸಿಕೊಳ್ಳಲು ರೈತರು ಮುಂದಾಗಬೇಕಿದೆ. ಮುಂದಿನ ದಿನಗಳಲ್ಲಿ ಇಲಾಖೆಯಿಂದ ಮಾಹಿತಿ ಪಡೆದುಕೊಂಡು ಬೆಳೆಯನ್ನು ಕಾಪಾಡುವಲ್ಲಿ ಮತ್ತು ಅಧಿಕ ಲಾಭ ಪಡೆಯುವಲ್ಲಿ ಮುಂದಾಗಬೇಕೆಂದು ಸಲಹೆಯಿತ್ತರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಸದಸ್ಯರಾದ ಉಮಾಪ್ರಭು, ಕೋಡಿಯಂಡ ಇಂದಿರಾ, ಮುಂಡೋಳಂಡ ರವಿ, ಸಹಾಯಕ ಕೃಷಿ ನಿರ್ದೇಶಕ ಡಾ. ರಾಜ್‍ಶೇಖರ್ ಉಪಸ್ಥಿತರಿದ್ದರು.
ವಿವಿಧ ಇಲಾಖೆಗಳು ಮತ್ತು ಯಂತ್ರೋಪಕರಣಗಳ ಮಾಹಿತಿ ಮತ್ತು ವಸ್ತು ಪ್ರದರ್ಶನ ಏರ್ಪಡಿಸಲಾಗಿದ್ದು, ರೈತರು ಮಾಹಿತಿ ಪಡೆದುಕೊಂಡರು. ತಾಂತ್ರಿಕ ಸಮಾವೇಶದಲ್ಲಿ ಕೊಡಗಿನಲ್ಲಿ ಜೇನು ಕೃಷಿ, ಕಾಳುಮೆಣಸು/ಹಣ್ಣಿನ ಬೆಳೆಗಳಲ್ಲಿ ನವೀನ ತಾಂತ್ರಿಕತೆಗಳು, ಮಣ್ಣು ಪರೀಕ್ಷೆಯ ಲಾಭಗಳ ಬಗ್ಗೆ ವಿಜ್ಞಾನಿಗಳಾದ ಡಾ. ಕೆಂಚಾರೆಡ್ಡಿ, ಡಾ. ಮುರುಳಿ ಮಾಹಿತಿ ನೀಡಿ, ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಮೈನಾ ಪ್ರಾರ್ಥಿಸಿದರು, ಇಲಾಖೆಯ ತಾಂತ್ರಿಕ ಅಧಿಕಾರಿ ಎ.ಸಿ. ಗಿರೀಶ್ ಸ್ವಾಗತಿಸಿದರು. ಕೃಷಿ ಅಧಿಕಾರಿ ಎಂ.ಕೆ. ಜಯರಾಂ ವಂದಿಸಿದರು.