ಸುಂಟಿಕೊಪ್ಪ, ಮೇ 19: ಸುಂಟಿಕೊಪ್ಪ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಿಗೆ ತಂಡಗಳಾಗಿ ರಚಿಸಿಕೊಂಡು ದಾಳಿಗೆ ತೆರಳಿದ ತಂಡವು ಶಾಲೆಗಳಿಗೆ ಭೇಟಿ ನೀಡಿದ ತಂಬಾಕು ನಿಯಂತ್ರಣ ಮಂಡಳಿ ಅಧಿಕಾರಿಗಳು ಆರೋಗ್ಯ ಅಧಿಕಾರಿಗಳು ಪೊಲೀಸರ ಸಮ್ಮುಖದಲ್ಲಿ ಧಾಳಿ ನಡೆಸಿದ್ದು ಶಾಲೆಗಳಲ್ಲಿ ಧೂಮಪಾನ ನಿಷೇಧ ಎಂಬ ನಾಮಫಲಕ ಹಾಕದೆ ಇರುವ ಬಗ್ಗೆ ಪ್ರಶ್ನಿಸಿ ದಂಡ ವಿಧಿಸಿದರು. ಕಂದಾಯ ಕಚೇರಿ ಹಾಗೂ ಕೆಲ ಅಂಗಡಿಗಳು ಹೊಟೇಲ್, ಬಾರ್ ಅಂಡ್ ರೆಸ್ಟೋರೆಂಟ್‍ಗಳಿಗೆ ಧಾಳಿ ನಡೆಸಿ ದಂಡ ವಿಧಿಸಿ ನೋಟಿಸ್ ನೀಡಿದರು. ಕೆಲವು ಅಂಗಡಿಗಳಲ್ಲಿ ಕಾನೂನು ಬಾಹಿರವಾಗಿ ಶೇಖರಿಸಿಡಲಾಗಿದ್ದ ಸಿಗರೇಟುಗಳನ್ನು ವಶಪಡಿಸಿಕೊಂಡರು.

ಧಾಳಿ ಸಂದರ್ಭದಲ್ಲಿ ಸುಂಟಿಕೊಪ್ಪ ಪಿಡಿಓ ಮೇದಪ್ಪ, ಕುಶಾಲನಗರ ವೃತ್ತ ನಿರೀಕ್ಷP ಕ್ಯಾತೆಗೌಡ ಸುಂಟಿಕೊಪ್ಪ ಠಾಣಾಧಿಕಾರಿ ಬೋಜಪ್ಪ, ತಂಬಾಕು ನಿಯಂತ್ರಣ ಮಂಡಳಿ ಉನ್ನತಾಧಿಕಾರಿ ಜಾನ್ ಕೆನಡಿ ಆರೋಗ್ಯ ಅಧಿಕಾರಿ ಶಿವರಾಂ ಇದ್ದರು.

ವರ್ತಕರ ವಿರೋಧ: ಸುಂಟಿಕೊಪ್ಪ ಚೇಂಬರ್ ಆಫ್ ಕಾರ್ಮಸ್ ಅಧ್ಯಕ್ಷ ಡಿ. ನರಸಿಂಹ ಹಾಗೂ ಪ್ರಧಾನ ಕಾರ್ಯದರ್ಶಿ ಗಂಗಾಧರ ರೈ, ಸದಸ್ಯರುಗಳು ಶಾಲೆಗಳಲ್ಲಿ ಧೂಮಪಾನ ನಿಷೇಧದ ಬಗ್ಗೆ ನಾಮಫಲಕ ಹಾಕದಿರುವದಕ್ಕೆ ದಂಡ ವಿಧಿಸಿರುವದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರಲ್ಲದೆ ಮೊದಲೇ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.

ಕೆಲ ಅಂಗಡಿ ವರ್ತಕರು ದಂಡ ಕಟ್ಟಲು ನಿರಾಕರಿಸಿದ ಘಟನೆಯೂ ನಡೆಯಿತು.

ಎಲ್ಲರೂ ಕೈ ಜೋಡಿಸಿ : ತಂಬಾಕು ಕಾಯ್ದೆ ಅನುಷ್ಠಾನಕ್ಕೆ ಎಲ್ಲರೂ ಕೈಜೋಡಿಸುವ ಮೂಲಕ ತಂಬಾಕು ಮುಕ್ತ ಜಿಲ್ಲೆಯಾಗಿಸಲು ಮುಂದಾಗಬೇಕೆಂದು ತಂಬಾಕು ನಿಯಂತ್ರಣ ಮಂಡಳಿ ಅಧಿಕಾರಿ ಜಾನ್ ಕೆನಡಿ ಕರೆ ನೀಡಿದರು.

ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ತಂಬಾಕು ಸೇವನೆಯಿಂದ ಕ್ಯಾನ್ಸರ್ ಸೇರಿದಂತೆ ಆನೇಕ ಖಾಯಿಲೆಗಳು ಬರಲಿದೆ. ಗ್ರಾಮೀಣ ಮಟ್ಟದಲ್ಲೇ ತಂಬಾಕು ಸೇವನೆಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ, ಗ್ರಾ.ಪಂ.ಅಧ್ಯಕ್ಷರು, ಸದಸ್ಯರುಗಳ ಪಾತ್ರ ಮಹತ್ವದಾಗಿದೆ ಎಂದು ಹೇಳಿದರು.

ಜಿಲ್ಲಾ ಸರಕಾರಿ ಆಸ್ಪತ್ರೆ ಅಧಿಕಾರಿ ಶಿವರಾಂ ಮಾತನಾಡಿ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ನಿಷೇಧಿಸಲಾಗಿದೆ. ತಂಬಾಕು ಸೇವನೆ ಚಟವಿದ್ದವರು ಬಿಡುವ ಮೂಲಕ ಆರೋಗ್ಯ ಕಾಪಾಡಬೇಕೆಂದು ಹೇಳಿದರು.

ಸಭೆಯಲ್ಲಿ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಹೆಚ್.ಎಸ್.ಬೋಜಪ್ಪ, ಕೆನರಾ ಬ್ಯಾಂಕ್ ವ್ಯವಸ್ಥಾಪಕರು, ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕರು, ಸುಂಟಿಕೊಪ್ಪ, ಕೆದಕಲ್, ಕೊಡಗರಹಳ್ಳಿ, ಕಂಬಿಬಾಣೆ ಗ್ರಾ.ಪಂ. ಪಿಡಿಓಗಳು ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಪ್ರಾಣೇಶ್ ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.

ತಂಬಾಕು ನಿಯಂತ್ರಣ ಮಂಡಳಿಯ ತಂಡಗಳು ಪೊಲೀಸ್ ಅಧಿಕಾರಿ ಪಿಡಿಓ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಪಟ್ಟಣದ ವಿವಿಧ ಅಂಗಡಿ, ಬಾರ್ , ಹೋಟೆಲ್‍ಗಳಿಗೆ ದಿಢೀರನೆ ಭೇಟಿ ನೀಡಿ ಪರಿಶೀಲಿಸಿದ್ದು ತಂಬಾಕು ವಸ್ತುಗಳನ್ನು ನಿಯಮ ಪಾಲಿಸದೆ ಬಹಿರಂಗವಾಗಿ ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ್ದು 105 ಮಂದಿಗೆ ರೂ. 16,800 ದಂಡ ವಿಧಿಸಲಾಗಿದೆ ಸಿಗರೇಟು ಬೀಡಿ ಗುಟ್ಕಾ, ಹನ್ಸ್, ಪಾನ್‍ಪರಾಗ್, ಮೊದಲಾದ ವಸ್ತುಗಳನ್ನು ವಶಪಡಿಸಿಕೊಂಡು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.