ಶ್ರೀಮಂಗಲ, ಮೇ 19: ದಿಡ್ಡಳ್ಳಿ ಪ್ರಕರಣದಲ್ಲಿ ಕೆಲವರ ಸಮಸ್ಯೆಯನ್ನು ಬಗೆಹರಿಸುವ ಬದಲು ನಿರಾಶ್ರಿತರನ್ನು ಪ್ರಚೋದಿಸುವ ಮೂಲಕ ಹಾದಿ ತಪ್ಪಿಸುವ ಕೆಲಸ ಮಾಡಿದರು. ಆದರೆ ದಿಡ್ಡಳ್ಳಿಯ ನಿರಾಶ್ರಿತ ಆದಿವಾಸಿಗಳಿಗೆ ನಿವೇಶನ ಕಲ್ಪಿಸುವ ಮೂಲಕ ರಾಜ್ಯದ ಕಾಂಗ್ರೆಸ್ ಸರಕಾರ ಬಡ ಜನರ ಸಮಸ್ಯೆ ಬಗ್ಗೆ ಪ್ರಾಮಾಣಿಕ ಕಾಳಜಿ ತೋರಿದೆ ಎಂದು ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ ಅಭಿಪ್ರಾಯಪಟ್ಟರು.

ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಫಲಾನುಭವಿಗಳಿಗೆ ನಿಗಮದ ಅನುದಾನದಲ್ಲಿ ಉಚಿತ ಅಡುಗೆ ಅನಿಲ-ಸಿಲಿಂಡರ್ ಹಾಗೂ ಸ್ಟವ್ ವಿತರಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕಂದಾಯ ಇಲಾಖೆ ಸಮಸ್ಯೆ, ವನ್ಯಪ್ರಾಣಿ ಮಾನವ ಸಂಘರ್ಷ, ವಿದ್ಯುತ್ ಸಮಸ್ಯೆ ಸರಿಪಡಿಸಲು ಸಂಬಂಧಿಸಿದ ಸಚಿವರೊಂದಿಗೆ ಮಾತುಕತೆ ನಡೆಸುವದಾಗಿ ಭರವಸೆ ನೀಡಿದರು.

ರಾಜ್ಯ ಅರಣ್ಯ ಕೈಗಾರಿಕೆ ಅಭಿವೃದ್ಧಿ ನಿಗಮದ ಸದಸ್ಯರಾದ ಚಕ್ಕೆರ ವಾಸು ಕುಟ್ಟಪ್ಪ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ. ಅದ್ಯಕ್ಷೆ ಮತ್ರಂಡ ರೇಖಾ ಪೊನ್ನಪ್ಪ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪಿ.ಕೆ. ಪೊನ್ನಪ್ಪ, ಪ್ರಮುಖ ಮಳವಂಡ ಅರವಿಂದ್ ಕುಟ್ಟಪ್ಪ, ನಿಗಮದ ಯೋಜನೆ ಉಸ್ತುವಾರಿ ಅಧಿಕಾರಿ ಮೋಗಣ್ಣ ಗೌಡ, ಗ್ರಾ.ಪಂ. ಉಪಾಧ್ಯಕ್ಷೆ ಸುನಿತಾ, ಸದಸ್ಯರಾದ ಮೀದೇರಿರ ನವೀನ್, ಚಂಗುಲಂಡ ಸೂರಜ್, ಪ್ರಮುಖರಾದ ಕೋಡಂಗಡ ರೋಶನ್, ನಳಂದ, ಬಯವಂಡ ಕಿಶೋರ್, ಕಾಳಿಮಾಡ ನವೀನ್, ಗ್ರಾ.ಪಂ. ಮಾಜಿ ಅಧ್ಯಕ್ಷ ಎ.ಎಸ್. ಮೋಹನ್, ಮಂಡಂಗಡ ಡಿನ್ಸು, ಪವಿ, ಕವಿನ್, ಚಂಗುಲಂಡ ಪಾಪ, ಈಶ, ಗ್ರಾ.ಪಂ. ಮಾಜಿ ಸದಸ್ಯ ಆಲಿರ ಸಾದಲಿ ಮತ್ತಿತರರು ಹಾಜರಿದ್ದರು.