ಸೋಮವಾರಪೇಟೆ, ಮೇ 19: ಇಲ್ಲಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಹಾಗೂ ಬೆಂಗಳೂರಿನ ಕರ್ನಾಟಕ ಬಾಲ ಭವನ ವತಿಯಿಂದ ಸ್ಥಳೀಯ ತಾಲೂಕು ಸ್ತ್ರೀಶಕ್ತಿ ಭವನದಲ್ಲಿ ತಾ. 22 ರಿಂದ 31 ರವರೆಗೆ ಮಕ್ಕಳ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ 8 ರಿಂದ 15 ವರ್ಷದ ಒಳಗಿನ ಮಕ್ಕಳು ಭಾಗವಹಿಸಬಹುದು. ಶಿಬಿರವನ್ನು ಪೂರ್ವಾಹ್ನ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಸಲಾಗುವದು. ಚಿತ್ರಕಲೆ, ಕರಕುಶಲ ವಸ್ತುಗಳ ತಯಾರಿಕೆ, ಜೇಡಿ ಮಣ್ಣಿನ ಕಲೆ, ಕಸದಿಂದ ರಸ, ಸಮೂಹ ಸಂಗೀತ, ಸಮೂಹ ನೃತ್ಯ, ಯೋಗ, ಕರಾಟೆ ಚಟುವಟಿಕೆಗಳಲ್ಲಿ ಯಾವದಾದರೂ ಮೂರರಿಂದ ಐದು ಚಟುವಟಿಕೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಸ್ಥಳೀಯ ಬೇಡಿಕೆಗೆ ಅನುಗುಣವಾಗಿ ಇನ್ನಿತರ ಚಟುವಟಿಕೆಗಳಿದ್ದಲ್ಲಿ ಆದ್ಯತೆ ನೀಡಲಾಗುವದು ಎಂದು ಪ್ರಕಟಣೆ ತಿಳಿಸಿದೆ. ಆಸಕ್ತ ಮಕ್ಕಳು ತಮ್ಮ ಹೆಸರನ್ನು ಶಿಬಿರ ನಡೆಸುವ ಸ್ಥಳದಲ್ಲಿ ನೊಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಸೋಮವಾರಪೇಟೆಯ ಶಿಶು ಅಭಿವೃದ್ಧಿ ಯೋಜನಾ ಕಚೇರಿ ದೂರವಾಣಿ ಸಂಖ್ಯೆ-08276-282281ರಲ್ಲಿ ಸಂಪರ್ಕಿಸಬಹುದಾಗಿದೆ.