*ಗೋಣಿಕೊಪ್ಪಲು, ಮೇ 19: ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ವೈದ್ಯರೊಬ್ಬರ ಮೇಲಿನ ಹಲ್ಲೆಯನ್ನು ವಿರೋಧಿಸಿ ಮಂಗಳೂರಿನಲ್ಲಿ ತಾ. 22ರಂದು ಹಮ್ಮಿಕೊಂಡಿರುವ ವೈದ್ಯಕೀಯ ಬಂದ್ಗೆ ಕೊಡಗಿನ ವೈದ್ಯರು ಬೆಂಬಲ ಸೂಚಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಭಾರತೀಯ ವೈದ್ಯಕೀಯ ಸಂಘದ ವೀರಾಜಪೇಟೆ ತಾಲೂಕು ಘಟಕದ ಅಧ್ಯಕ್ಷ ಡಾ.ಕಿರಣ್, ಉಪಾಧ್ಯಕ್ಷ ಡಾ. ನಾಜ್ಕುಮಾರ್, ಕಾರ್ಯದರ್ಶಿ ಡಾ.ಕೆ.ಎಂ. ಪೂಣಚ್ಚ ಇತ್ತೀಚಿನ ದಿನಗಳಲ್ಲಿ ಖಾಸಗಿ ಹಾಗೂ ಸರ್ಕಾರಿ ವೈದ್ಯರ ಮೇಲೆ ಕ್ಷುಲ್ಲಕ ಕಾರಣಗಳಿಗೆ ಸಾರ್ವಜನಿಕರಿಂದ ಹಲ್ಲೆ ನಡೆಯುತ್ತಿದೆ. ಇದರಿಂದ ವೈದ್ಯರ ಕರ್ತವ್ಯ ನಿರ್ವಹಣೆಗೆ ತೊಂದರೆಯಾಗುತ್ತಿದೆ. ಮಂಗಳೂರಿನ ಯಾನೆಪೋಯ ವೈದ್ಯಕೀಯ ಕಾಲೇಜಿನ ಶಸ್ತ್ರಚಿಕಿತ್ಸಾ ವಿಭಾಗದ ಸಹ ಪ್ರಾಧ್ಯಾಪಕ ಡಾ.ಅಭಿಜಿತ್ ಶೆಟ್ಟಿ ಅವರ ಮೇಲೆ ಗುಂಪೊಂದು ಹಲ್ಲೆ ನಡೆಸಿ ಅಪಹರಿಸಿದ ಘಟನೆ ಖಂಡನೀಯ ಎಂದು ಹೇಳಿದ್ದಾರೆ. ಪಾಲಿಬೆಟ್ಟದ ವೈದ್ಯ ಡಾ.ಸುಧಾಕರ್ ಶೆಟ್ಟಿ ಅವರ ಪುತ್ರರಾಗಿರುವ ಡಾ.ಅಭಿಜಿತ್ ಶೆಟ್ಟಿ ಅವರ ಮೇಲಿನ ಹಲ್ಲೆಯನ್ನು ಖಂಡಿಸಿ ಕೊಡಗು ಜಿಲ್ಲೆಯ ವೈದ್ಯರು 22ರಂದು ಸಾಂಕೇತಿಕವಾಗಿ ಕಪ್ಪುಪಟ್ಟಿ ಧರಿಸಿ ಕರ್ತವ್ಯನಿರ್ವಹಿಸುವಂತೆ ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.