ಮಡಿಕೇರಿ, ಮೇ 19: ತಲೆಯ ಮೇಲೆ ಸೂರಿದೆ..., ಆದರೆ ಅದು ಯಾವಾಗ ತಲೆಮೇಲೆ ಬೀಳುವದೋ ಎಂಬ ಭೀತಿ..., ಗೂಡು ಸೇರಬೇಕಾದರೆ ಮತ್ತೊಂದು ಮನೆಯಂಗಳದಿಯ ಹಾದಿ..., ಹನಿ ನೀರಿಗೆ ಫರ್ಲಾಂಗಿನಷ್ಟು ಪಾದ ಸವೆಸಬೇಕು..., ಇದು ಇಲ್ಲಿನ ಪರಿಸ್ಥಿತಿ..., ಈ ಕಾಲದಲ್ಲೂ ಇಂತಹ ಪರಿಸ್ಥಿತಿ ಇದೆಯೇ ಎಂದು ಹುಬ್ಬೇರಿಸಿದರೂ ಇದು ಸತ್ಯ.ಈ ಕಾಲೋನಿಯ ಹೆಸರು ರಾಟೆಮನೆ ಕಾಲೋನಿ. ಪ್ರತಿಷ್ಠಿತ ಜನಪ್ರತಿನಿಧಿಗಳ ಬೀಡು ಎಂದೇ ಹೇಳಲಾಗುವ ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಈ ಕಾಲೋನಿಯಲ್ಲಿ ಸುಮಾರು 20 ಮನೆಗಳಿದ್ದು, ಬಹುತೇಕ ಮನೆಗಳು ಇಂದೋ, ನಾಳೆಯೋ ನೆಲಕಚ್ಚುವ ಸ್ಥಿತಿಯಲ್ಲಿವೆ. ಪರಿಶಿಷ್ಟರು, ಕೂಲಿಕಾರ್ಮಿಕರೇ ನೆಲೆಸಿರುವ ಈ ಕಾಲೋನಿ ವಾಸಿಗಳಿಗೆ ಹಕ್ಕುಪತ್ರ ದೊರಕದೇ ಇರುವ ಕಾರಣ ಇಲ್ಲಿ ಯಾವದೇ ಅನುದಾನ, ಮೂಲಭೂತ ಸೌಕರ್ಯವಾಗಲಿ ಕಲ್ಪಿಸಲು ಯಾವದೇ ಜನಪ್ರತಿನಿಧಿಗಳಿಂದಲೂ ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳ ‘ಸಿಂಹಾಸನ'ದಡಿಯಲ್ಲಿ ಕಡತಗಳು ಕೊಳೆಯುತ್ತಿದ್ದು, ಹಕ್ಕುಪತ್ರಕ್ಕಾಗಿ ಕಳೆದ 17 ವರ್ಷಗಳಿಂದ ಕಚೇರಿಗಳಿಗೆ ಎಡತಾಕುತ್ತಿದ್ದರೂ ‘ಕಂದಾಯ' ಇಲಾಖೆಯಲ್ಲಿರುವ ಕಡತಗಳು ಮಾತ್ರ ಕದಲುತ್ತಿಲ್ಲ.

ಮಕ್ಕಂದೂರು ಗ್ರಾ.ಪಂ. ವ್ಯಾಪ್ತಿಯ ಹೆಮ್ಮೆತ್ತಾಳು ಗ್ರಾಮ ವ್ಯಾಪ್ತಿಗೆ ಒಳಪಡುವ ರಾಟೆಮನೆ ಪೈಸಾರಿಯಲ್ಲಿ ಈ ಹಿಂದೆ ಸರಕಾರದ ವತಿಯಿಂದ ನವಗ್ರಾಮ ಯೋಜನೆಯಡಿ ಆಶ್ರಯ ಮನೆಗಳನ್ನು ನಿರ್ಮಿಸಿ, ಹಲವರಿಗೆ ಹಂಚಲಾಗಿತ್ತು. 20 ಮನೆಗಳನ್ನು ಯಾರ್ಯಾರಿಗೋ ಹಂಚಿದ ಹಿನ್ನೆಲೆಯಲ್ಲಿ ಕೆಲವರು ಮಾತ್ರ ಬಂದು ನೆಲೆಸಿದ್ದರು. ಆದರೆ, ಅಲ್ಲಿಗೆ ರಸ್ತೆ, ನೀರು, ವಿದ್ಯುತ್ ಸೇರಿದಂತೆ ಯಾವದೇ ಸೌಲಭ್ಯಗಳಿಲ್ಲದ್ದರಿಂದ ಬಂದು ನೆಲೆಸಿದವರೆಲ್ಲ ವಾಪಸ್ ಮರಳಿದರು. ನಂತರದಲ್ಲಿ ಖಾಲಿ ಬಿದ್ದಿದ್ದ ಮನೆಗಳಿಗೆ ಸೂರಿಲ್ಲದವರು ಬಂದು ಸೇರಿಕೊಂಡರು. ತಮ್ಮ ಕೈಲಾದಷ್ಟು ಮನೆ ಸರಿಪಡಿಸಿಕೊಂಡು ಜೀವನ ಸಾಗಿಸತೊಡಗಿದರು. ತಮಗೇನಾದರೂ ಸೌಲಭ್ಯ ದೊರಕಬಹುದೆಂದು ಪಂಚಾಯಿತಿಗೆ ಸಾಲು - ಸಾಲಾಗಿ ಅರ್ಜಿ ಗುಜರಾಯಿಸುತ್ತಲೇ ಬರುತ್ತಿದ್ದರಾದರೂ ಹಕ್ಕುಪತ್ರ ಇಲ್ಲದ ಕಾರಣ ಇದುವರೆಗೆ ಯಾವದೇ ಸೌಲಭ್ಯ ಇವರುಗಳ ಪಾಲಿಗೆ ಲಭಿಸಿಲ್ಲ.

17 ವರ್ಷಗಳ ಬಳಿಕ ಇದೀಗ ಪಂಚಾಯಿತಿ ವತಿಯಿಂದ ಕಾಂಕ್ರಿಟ್ ರಸ್ತೆ, ನೀರಿನ ಬಾವಿ, ಸಾರ್ವಜನಿಕ ಸ್ಮಶಾನ ನಿರ್ಮಾಣವಾಗಿದೆ. ಆದರೆ ವಿದ್ಯುತ್ ವೋಲ್ಟೇಜ್ ಕಡಿಮೆ ಇರುವದರಿಂದ ಬಾವಿಯಿಂದ ನೀರು ಮೇಲೇರುತ್ತಿಲ್ಲ. ಹಾಗಾಗಿ ಅರ್ಧ ಕಿ.ಮೀ. ದೂರದಲ್ಲಿರುವ ನದಿಯಿಂದ ಏರಿಳಿತದ ಹಾದಿಯಲ್ಲಿ ತಲೆಯ ಮೇಲೆ ನೀರು ಹೊತ್ತು ತರುವ ಪರಿಸ್ಥಿತಿ ಇಲ್ಲಿದೆ.

ದಾಖಲೆ ಕೊರತೆ

ಈ ವಿಭಾಗದಿಂದ ಸ್ಪರ್ಧಿಸಿ ಜಯಗಳಿಸಿದ ಪ್ರತಿನಿಧಿಗೆ ಇವರುಗಳಿಗೆ ಏನಾದರೂ ಸೌಲಭ್ಯ ಒದಗಿಸಬೇಕೆಂಬ ಆಸಕ್ತಿ ಇದೆಯಾದರೂ ಹಕ್ಕುಪತ್ರ ಇಲ್ಲದ ಕಾರಣ ಯಾವದೇ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ.

ವಿಭಾಗದ ಪ್ರತಿನಿಧಿಯಾಗಿರುವ ಬಿ.ಎನ್. ರಮೇಶ್ ಸುವರ್ಣ ಅವರು ಈ ನಿಟ್ಟಿನಲ್ಲಿ ಉಸ್ತುವಾರಿ ಸಚಿವರ, ವಿಧಾನಪರಿಷತ್ ಸದಸ್ಯರುಗಳ ಮೂಲಕ ಪ್ರಯತ್ನಿಸಿದ್ದು, ವಿಧಾನಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು ಜಿಲ್ಲಾಧಿಕಾರಿಗಳು ಹಾಗೂ ಕಂದಾಯಾಧಿಕಾರಿಗಳಿಗೆ ಲಿಖಿತ ಪತ್ರ ಬರೆದು ಹಕ್ಕುಪತ್ರ ನೀಡುವ ಬಗ್ಗೆ ವಿವರಣೆ ಕೋರಿದ್ದಾರಾದರೂ ಇದುವರೆಗೂ ಯಾವದೇ ಸ್ಪಂದನ ಇಲ್ಲದಂತಾಗಿದೆ.

ಸರ್ವೆ ಆಗಿದೆ

ಈ ಹಿಂದಿನ ಉಪವಿಭಾಗಾಧಿಕಾರಿ ಗಳು ಇಲ್ಲಿನ ಸಮಸ್ಯೆ ಅರಿತು ಸ್ಥಳಕ್ಕೆ ಭೇಟಿ ನೀಡಿ ಸರ್ವೆ ಮಾಡಿ ಹಕ್ಕುಪತ್ರ ವಿತರಣೆಗೆ ಕ್ರಮಕೈಗೊಳ್ಳುವಂತೆ ಆದೇಶಿಸಿದ ಮೇರೆಗೆ ಕಂದಾಯಾಧಿಕಾರಿಗಳು ಸರ್ವೆ ಮಾಡಿದ್ದಾರೆ. ಕಾಲೋನಿ ವಾಸಿಗಳ ಭಾವಚಿತ್ರ ತೆಗೆದು ಹೇಳಿಕೆ ಪಡೆದುಕೊಂಡಿದ್ದಾರೆ. ಆದರೆ ಇನ್ನೂ ಕಡತಕ್ಕೆ ಚಾಲನೆ ದೊರೆತಿಲ್ಲ.

ಇದೀಗ 17 ವರ್ಷಗಳು ಸಂದಿವೆ. ಈ ಬಡವರು ಇಲ್ಲಿ ನೆಲೆನಿಂತು ಕಚೇರಿಗಳಿಗೆ ಅಲೆದಲೆದು ಬೇಸತ್ತು ಹೋಗಿದ್ದಾರೆ. ಸರಕಾರಿ ಅಧಿಕಾರಿಗಳ ಕಾರ್ಯವೈಖರಿಗೆ ತತ್ತರಿಸಿಹೋಗಿದ್ದು, ಮುಂದಿನ 1 ತಿಂಗಳೊಳಗೆ ಹಕ್ಕುಪತ್ರ ವಿತರಣೆಗೆ ಯಾವದೇ ಕ್ರಮ ಆಗದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಕೈಗೊಳ್ಳುವದಾಗಿ ಎಚ್ಚರಿಕೆಯಿತ್ತಿದ್ದಾರೆ. ಕಂದಾಯ ಇಲಾಖಾಧಿಕಾರಿಗಳು, ಜಿಲ್ಲಾಡಳಿತ ಇತ್ತ ಗಮನ ಹರಿಸಿ

‘ಕಂದಾಯ ಕಚೇರಿಯಲ್ಲಿ ಬಡವರ ಕಡತಗಳಿಗೆ, ಮನವಿಗಳಿಗೆ ಬೆಲೆ ಇಲ್ಲದಂತಾಗಿದೆ. ಇಲ್ಲಿ ಏನಿದ್ದರೂ ಮಧ್ಯವರ್ತಿಗಳಿಗೆ ಮಣೆ ಹಾಕಲಾಗುತ್ತಿದೆ. ಗ್ರಾಮಲೆಕ್ಕಿಗರ ಕಚೇರಿಯಲ್ಲಂತೂ ಹಣವಿಲ್ಲದೆ ಕೆಲಸವೇ ಆಗುವದಿಲ್ಲ. ತಾನೇ ಖುದ್ದಾಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಲ್ಲಿ ಮನವಿ ಮಾಡಿಕೊಂಡ ಸಂದರ್ಭ ಕಡತವನ್ನು ತಂದಿದ್ದ ಅಧಿಕಾರಿ ನಂತರ ಅದೇನಾಗಿದೆಯೋ ಎಂಬದು ಗೊತ್ತಿಲ್ಲ' ಎಂದು ವಿಭಾಗದ ಸದಸ್ಯ ಬಿ.ಎನ್. ರಮೇಶ್ ಅಸಮಾಧಾನದಿಂದ ಹೇಳುತ್ತಾರೆ. ‘ಎರಡು ವರ್ಷಗಳಿಗೂ ಅಧಿಕ ವರ್ಷ ಒಂದೇ ಮನೆಯಲ್ಲಿ ವಾಸವಿದ್ದವರಿಗೆ ಹಕ್ಕುಪತ್ರ ನೀಡಬಹುದು. ಇಲ್ಲವಾದಲ್ಲಿ 94ಸಿ ಅಡಿಯಲ್ಲಿ ನೀಡಲು ಅವಕಾಶವಿದೆ. ಅಧಿಕಾರಿಗಳು ಮನಸು ಮಾಡಬೇಕಷ್ಟೆ' ಎಂದು ಹೇಳುತ್ತಾರೆ. ಒಂದು ತಿಂಗಳೊಳಗೆ ಕಡತಕ್ಕೆ ಜೀವ ಬರದಿದ್ದಲ್ಲಿ ಕಾಲೋನಿ ವಾಸಿಗಳೊಂದಿಗೆ ತಾವೂ ಕೂಡ ಪ್ರತಿಭಟನೆಗಿಳಿಯುವದಾಗಿ ಹೇಳಿದ್ದಾರೆ.(ಮೊದಲ ಪುಟದಿಂದ) ಹಕ್ಕುಪತ್ರ ವಿತರಿಸಿ, ಮೂಲಭೂತ ಸೌಲಭ್ಯ ಕಲ್ಪಿಸುವದರೊಂದಿಗೆ ನೆಲಕಚ್ಚಲು ತಯಾರಾಗಿರುವ ಮನೆಗಳ ದುರಸ್ತಿಗೆ ನೆರವಾಗಬೇಕಿದೆ. ಇನ್ನೀಗ ಮಳೆಗಾಲ ಎದುರಾಗಲಿದ್ದು, ಅವಘಡ ಸಂಭವಿಸುವ ಮುನ್ನ ಜಾಗೃತಗೊಳ್ಳುವದೊಳಿತೆಂಬದೇ ಆಶಯ.