ಕುಶಾಲನಗರ, ಮೇ 19: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಯ ಅಸಮರ್ಪಕ ಕಾರ್ಯವೈಖರಿಯಿಂದಾಗಿ ಪಂಚಾಯಿತಿಯ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳುತ್ತಿವೆ ಎಂದು ಪಂಚಾಯ್ತಿ ಸದಸ್ಯರು ಆರೋಪ ವ್ಯಕ್ತಪಡಿಸಿದ್ದಾರೆ.

ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಪಂಚಾಯಿತಿ ಸದಸ್ಯ ಎ.ಎಂ.ಲೋಕನಾಥ್ ಮಾತನಾಡಿ, ಪಂಚಾಯಿತಿ ಅಧ್ಯಕ್ಷರಾದ ಜೈನಬಾ ಹಾಗೂ ಪಿಡಿಓ ರಾಜೇಂದ್ರ ಅವರ ನಿರ್ಲಕ್ಷ್ಯದಿಂದಾಗಿ ಪಂಚಾಯಿತಿಗೆ ಬರಬೇಕಾದ ಅನುದಾನ ಮೊಟಕುಗೊಂಡಿದೆ. ಕಾಮಗಾರಿಗಳ ಬಗ್ಗೆ ಸದಸ್ಯರಿಗೆ ಸಮರ್ಪಕ ಮಾಹಿತಿ ಒದಗಿಸದೆ ಪಂಚಾಯಿತಿ ಸಭೆಗಳನ್ನು ನಡೆಸದೆ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ನರೇಗ ಯೋಜನೆಯಡಿ ಕೈಗೊಂಡ ಕಾಮಗಾರಿಗಳಿಗೆ ಅವಧಿ ಮುಗಿದಿದ್ದರೂ ಕೂಡ ಇದುವರೆಗೆ ಬಿಲ್ ಪಾವತಿಸಿಲ್ಲ. ಕೊಟ್ಟಿಗೆ ನಿರ್ಮಾಣ ಕೈಗೊಂಡ ಫಲಾನುಭವಿಗಳಿಗೂ ಹಣ ಪಾವತಿಸದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು. ಈವರೆಗಿನ ಪಂಚಾಯಿತಿ ಕೆಲಸ ಕಾರ್ಯಗಳ ಕುರಿತು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಮಾಹಿತಿ ಸಲ್ಲಿಸಲಾಗಿದೆ. ಮೊಟಕುಗೊಂಡಿರುವ ಅನುದಾನವನ್ನು ಮರಳಿ ಒದಗಿಸಿಕೊಡಲು ಕ್ರಮಕೈಗೊಳ್ಳಬೇಕು ಹಾಗೂ ಅಭಿವೃದ್ಧಿ ಅಧಿಕಾರಿಯ ಮೇಲೆ ಶಿಸ್ತು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸದಸ್ಯ ಟಿ.ಕೆ. ಸುಮೇಶ್ ಮಾತನಾಡಿ, ಪಂಚಾಯಿತಿ ಆಡಳಿತ ಚುಕ್ಕಾಣಿ ಹಿಡಿದು 2 ವರ್ಷಗಳು ಕಳೆದರೂ ಅಧ್ಯಕ್ಷರಿಗೆ ಪಂಚಾಯಿತಿ ಕಾಮಗಾರಿಗಳ ಬಗ್ಗೆ ಯಾವದೇ ರೀತಿಯ ಅರಿವು ಇಲ್ಲದಾಗಿದೆ. ಪಂಚಾಯ್ತಿ ಸಭೆಗಳಲ್ಲಿ ಕೈಗೊಂಡ ನಿರ್ಣಯಗಳನ್ನು ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿ ತಮಗಿಷ್ಟ ಬಂದ ರೀತಿಯಲ್ಲಿ ತಿರುಚುತ್ತಿದ್ದಾರೆ ಎಂದು ಆರೋಪಿಸಿದರು.

ಈಗಾಗಲೆ ಈ ಬಗ್ಗೆ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಯಾವದೇ ರೀತಿಯ ಕ್ರಮಕೈಗೊಂಡಿಲ್ಲ. ಕೂಡಲೆ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮಕೈಗೊಳ್ಳಬೇಕಿದೆ ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಪಂಚಾಯಿತಿ ಸದಸ್ಯರಾದ ಆರ್.ಸಿ. ಮಲ್ಲಿಗೆ, ಜೆ.ಸಿ.ತಮ್ಮಯ್ಯ ಇದ್ದರು.