ಸುಂಟಿಕೊಪ್ಪ, ಮೇ 19: ರಾತ್ರಿವೇಳೆ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವರಿಗೆ ಬಸ್ ನಿರ್ವಾಹಕನೇ ಲೈಂಗಿಕ ದೌರ್ಜನ್ಯ ನಡೆಸಲು ಮುಂದಾಗಿ ರೋಚ್ಚಿಗೆದ್ದ ಮಹಿಳೆ ಚಪ್ಪಲಿ ಸೇವೆ ಪ್ರಯೋಗಿಸಿದ ಘಟನೆ ನಡೆದಿದೆ. ಸೋಮವಾರಪೇಟೆಯಿಂದ ಕತ್ತಲೆ ವೇಳೆ ಕುಶಾಲನಗರಕ್ಕೆ ತೆರಳುತ್ತಿದ್ದ ಬಸ್ಸಿಗೆ ಕೋವರ್‍ಕೊಲ್ಲಿಯಿಂದ ಮಹಿಳೆಯೋರ್ವರು ಹತ್ತಿದ್ದಾರೆ. ರಾತ್ರಿ ವೇಳೆಯಾದುದರಿಂದ ಮಹಿಳೆ ಸೇರಿದಂತೆ 5 ಮಂದಿ ಪ್ರಯಾಣಿಕರು ಮಾತ್ರ ಬಸ್ಸಿನಲ್ಲಿದ್ದರು ಕೋವರ್‍ಕೊಲ್ಲಿಯಿಂದ ಒಬ್ಬಂಟಿ ಮಹಿಳೆ ಖಾಸಗಿ ಬಸ್ಸನ್ನು ಏರಿ ಯಡವನಾಡಿಗೆ ಟಿಕೇಟು ಮಾಡಿದ್ದಾರೆ. ದಾರಿ ಮಧ್ಯೆ ಬೇಳೂರು ಕಾರೆಕೊಪ್ಪದಲ್ಲಿ ಬಸ್ಸಿನಲ್ಲಿದ್ದ ಪ್ರಯಾಣಿಕರು ಇಳಿದಿದ್ದಾರೆ. ಉಳಿದಿದ್ದು ಬಸ್ಸಿನಲ್ಲಿ ಈ ಮಹಿಳೆಯೋರ್ವಳೆ. ಚಿಗುರು ಮೀಸೆಯ ಯೌವ್ವನದ ಮದವೇರಿದ ಖಾಸಗಿ ಬಸ್ಸಿನ ನಿರ್ವಾಹಕನಿಗೆ ಏನೋ ಅನಿಸಿದೆ. ಚಾಲಕನಿಗೆ ಬಸ್ಸಿನ ಲೈಟ್ ಆಫ್ ಮಾಡಲು ಸೂಚಿಸಿದ್ದು, ನೇರವಾಗಿ ಹೋಗಿ ಮಹಿಳೆ ಕುಳಿತ್ತಿದ್ದ ಸೀಟಿನಲ್ಲಿ ಬಂದು ಕುಳಿತು ‘ಚೇಷ್ಟೆ’ ಶುರು ಮಾಡಿದ್ದಾನೆ. ಮಹಿಳೆ ಈ ನಿರ್ವಾಹಕನ ಲೈಂಗಿಕ ಚೇಷ್ಟೆಯನ್ನು ಹಿಂಸೆಯಿಂದಲೇ ಸಹಿಸಿದ್ದಾಳೆ.

ರೌದ್ರಾವತಾರ ತಾಳಿದ ಮಹಿಳೆ : ಇನ್ನೇನು ಯಡವನಾಡು ಬಸ್ ನಿಲ್ದಾಣ ಬಂದಾಗ ಜೋರಾಗಿ ಕಿರುಚಾಡಿದ ಮಹಿಳೆ ಚಾಲಕನಿಗೆ ಲೈಟ್ ಹಾಕಿ ಬಸ್ ನಿಲ್ಲಿಸಲು ಹೇಳಿದ್ದಾಳೆ. ತಕ್ಷಣವೇ ಬಸ್ ನಿಂತಿದೆ ನಾರಿ ಮುನಿದರೆ ಮಾರಿ ಎಂಬಂತೆ ಚಪ್ಪಲಿಯಿಂದ ನಿರ್ವಾಹಕನಿಗೆ ಧರ್ಮದೇಟು ನೀಡಿದ್ದಲ್ಲದೆ ಬಸ್ಸಿನಿಂದ ಇಳಿದು ಮನೆಗೆ ತೆರಳಿದ್ದಾಳೆ

ಚಪ್ಪಲಿ ಪೆಟ್ಟುತಿಂದ ನಿರ್ವಾಹಕ ‘ಕೆಟ್ಟ ಘಳಿಗೆಯಲ್ಲಿ ಏನೋ ಆಯಿತು ಯಾರಿಗೂ ವಿಷಯ ತಿಳಿಸಬೇಡಿ’ ಎಂದು ಬಸ್ ಚಾಲಕನಲ್ಲಿ ವಿನಂತಿಸಿಕೊಂಡಿದ್ದಾನೆ.