ಕುಶಾಲನಗರ, ಮೇ 19: ಕುಶಾಲನಗರದ ಕಾವೇರಿ ನಿಸರ್ಗ ಧಾಮದ ಒಳಭಾಗದಲ್ಲಿ ನಿಯಮ ಬಾಹಿರವಾಗಿ ಕಟ್ಟಡ ಕಾಮಗಾರಿ ನಡೆಯುತ್ತಿರುವ ಆರೋಪದ ಹಿನ್ನಲೆಯಲ್ಲಿ ಕುಡಾ ಅಧ್ಯಕ್ಷ ಮಂಜುನಾಥ್ ಗುಂಡೂರಾವ್ ಭೇಟಿ ನೀಡಿ ಪರಿಶೀಲಿಸಿದರು.

ನಿಸರ್ಗಧಾಮದ ಒಳಗಡೆ ಕಾವೇರಿ ನದಿ ತಟದ ಅಂಚಿನಲ್ಲಿಯೇ ಬೃಹತ್ ಡೈನಿಂಗ್ ಹಾಲ್ ಕಾಮಗಾರಿ ಕೈಗೊಂಡಿರುವ ಬಗ್ಗೆ ಆರೋಪಗಳು ಕೇಳಿಬಂದ ಹಿನ್ನಲೆಯಲ್ಲಿ ಕುಡಾ ಹಾಗೂ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವತಿಯಿಂದ ಜಂಟಿಯಾಗಿ ಪರಿಶೀಲನೆ ನಡೆಯಿತು. ಈ ಸಂದರ್ಭ ಅರಣ್ಯ ಇಲಾಖೆ ಸಂಬಂಧಪಟ್ಟ ಸ್ಥಳೀಯ ಆಡಳಿತದಿಂದ ಯಾವುದೇ ರೀತಿಯ ಅನುಮತಿ ಪಡೆಯದೆ ಕಾಮಗಾರಿ ನಡೆಸುತ್ತಿರುವ ಅಂಶ ಬೆಳಕಿಗೆ ಬಂದಿದೆ ಎಂದು ಮಂಜುನಾಥ್ ಗುಂಡೂರಾವ್ ತಿಳಿಸಿದ್ದಾರೆ.

ಕಾವೇರಿ ನಿಸರ್ಗಧಾಮದ ಒಳಭಾಗದಲ್ಲಿ ನಡೆಯುತ್ತಿರುವ ಶಾಶ್ವತ ಕಟ್ಟಡ ಕಾಮಗಾರಿಗೆ ಕಾನೂನು ಬಾಹಿರವಾಗಿ ಬಫರ್ ಜೋನ್ ಉಲ್ಲಂಘಿಸಿ ನದಿ ತಟದಲ್ಲೇ ನಿರ್ಮಾಣ ಕಾಮಗಾರಿ ಕೈಗೊಳ್ಳ ಲಾಗಿದೆ. ಅರಣ್ಯ ಇಲಾಖೆ ಯಾವುದೇ ರೀತಿಯ ಅನುಮತಿ ಪಡೆಯದೆ ಕಾಮಗಾರಿ ನಡೆಸುತ್ತಿರುವ ಹಿನ್ನಲೆಯಲ್ಲಿ ಕಾಮಗಾರಿಯನ್ನು ಸ್ಥಗಿತಗೊಳಿಸಲು ಸೂಚಿಸಲಾಗಿದೆ. ಸ್ಥಳ ಪರಿಶೀಲನೆ ಬರುವ ವಿಚಾರ ತಿಳಿಸಿದ್ದರೂ ಸಂಬಂಧಪಟ್ಟ ಅರಣ್ಯ ಇಲಾಖಾ ಅಧಿಕಾರಿಗಳು ಸ್ಥಳಕ್ಕೆ ಧಾವಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ತಿಳಿಸಿದ ಅವರು, ಈ ಬಗ್ಗೆ ಸರಕಾರಕ್ಕೆ ಮಾಹಿತಿ ಒದಗಿಸ ಲಾಗುವದು ಎಂದು ತಿಳಿಸಿದ್ದಾರೆ. ಇಲಾಖೆ ಹಾಗೂ ಸರಕಾರದ ನಿಯಮಗಳನ್ನು ಉಲ್ಲಂಘಿಸಿ ಕಾಮಗಾರಿ ನಡೆಸುತ್ತಿರುವ ಅಧಿಕಾರಿಗಳ ಮೇಲೆ ಇಲಾಖಾ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಕಾವೇರಿ ನಿಸರ್ಗಧಾಮದ ಹಸಿರೀಕರಣದ ಬದಲು ಕಾಂಕ್ರಿಟೀಕರಣ ಮಾಡುತ್ತಿದ್ದಾರೆ. ಒಳಭಾಗದಲ್ಲಿ ಸಿಮೆಂಟ್ ಕಾಂಕ್ರಿಟ್ ಬಳಸಿ ಶಾಶ್ವತ ಕಟ್ಟಡಗಳನ್ನು ನಿರ್ಮಿಸುವ ಮೂಲಕ ಪರಿಸರದ ನಾಶಕ್ಕೆ ಅಧಿಕಾರಿಗಳು ಮುಂದಾಗಿರುವದು ಕಂಡುಬಂದಿದೆ ಎಂದು ಅವರು ತಿಳಿಸಿದ್ದಾರೆ. ಕಾವೇರಿ ನಿಸರ್ಗಧಾಮದ ಪ್ರವೇಶದ್ವಾರದಲ್ಲಿ ವಾಹನ ನಿಲುಗಡೆ ಶುಲ್ಕ ಸಂಗ್ರಹದಲ್ಲಿಯೂ ಸಮರ್ಪಕವಾಗಿ ರಶೀದಿಗಳನ್ನು ನೀಡುವಲ್ಲಿ ಇಲಾಖಾ ಅಧಿಕಾರಿಗಳು ವಿಫಲರಾಗಿದ್ದಾರೆ. ಈ ಬಗ್ಗೆ ಇಲಾಖೆ ಗಮನಹರಿಸಬೇಕಾಗಿದೆ ಎಂದು ಮಂಜುನಾಥ್ ಆಗ್ರಹಿಸಿದ್ದಾರೆ.

ಈ ಸಂದರ್ಭ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮೇಶ್, ಕುಡಾ ಅಭಿಯಂತರ ಅಪ್ಸರ್ ಅಹಮ್ಮದ್ ಇದ್ದರು.