ಸೋಮವಾರಪೇಟೆ, ಮೇ 19: ಕರ್ತವ್ಯನಿರತ ಪೊಲೀಸ್ ಪೇದೆ ಮೇಲೆ ಮದ್ಯಪಾನ ಮಾಡಿದ್ದ ಯುವಕರ ತಂಡವೊಂದು ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ತಾ.17ರ ತಡರಾತ್ರಿ ನಗರದಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ಪೊಲೀಸ್ ಠಾಣೆಯ ಸಿಬ್ಬಂದಿ ಸಿದ್ದರಾಮ ಎಂಬವರು ಗೃಹರಕ್ಷಕ ಸಿಬ್ಬಂದಿ ಅರುಣ್ ಎಂಬವರೊಂದಿಗೆ ನಿನ್ನೆ ರಾತ್ರಿ 1 ಗಂಟೆ ಸುಮಾರಿಗೆ ಕಕ್ಕೆಹೊಳೆ ಜಂಕ್ಷನ್ ಬಳಿ ಗಸ್ತಿನಲ್ಲಿದ್ದ ಸಂದರ್ಭ ಬೈಕ್‍ನಲ್ಲಿ ಮೂವರು ಆಗಮಿಸಿದ್ದಾರೆ.

ಇವರನ್ನು ತಡೆದು ಮೂವರು ಬೈಕ್‍ನಲ್ಲಿ ತೆರಳುತ್ತಿರುವ ಬಗ್ಗೆ ವಿಚಾರಿಸಿದಾಗ ಇವರು, ಪೊಲೀಸ್ ಟೋಪಿ ಹಾಗೂ ಕೈಯಲ್ಲಿದ್ದ ಪುಸ್ತಕವನ್ನು ಕಿತ್ತು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಬೈಕ್ ತಡೆದು ವಿಚಾರಣೆ ನಡೆಸುತ್ತಿದ್ದ ಸಂದರ್ಭ ತಾಕೇರಿ ಗ್ರಾಮದ ಪುನೀತ್, ಮಾಟ್ನಳ್ಳಿ ಗ್ರಾಮದ ದರ್ಶನ್, ತಾಕೇರಿಯ ಸಂಕೇತ್, ತಲ್ತರೆಶೆಟ್ಟಳ್ಳಿಯ ದರ್ಶನ್, ಅಭಿಮಠ ಬಾಚಳ್ಳಿಯ ಆದರ್ಶ್, ತಾಕೇರಿಯ ಚೇತನ್ ಅವರುಗಳು ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿದ್ದು, ನಂತರ ಕಾರಿನಲ್ಲಿ ಪೇದೆಯನ್ನು ಕರೆದೊಯ್ದಿದ್ದಾರೆ.

ಈ ಬಗ್ಗೆ ಗೃಹರಕ್ಷಕ ಸಿಬ್ಬಂದಿ ಅರುಣ್ ಅವರು ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ತೆರಳಿದ ಪೊಲೀಸರು ಆಂಜನೇಯ ದೇವಾಲಯ ಬಳಿ ಆರೋಪಿಗಳ ಕಾರನ್ನು ಅಡ್ಡಗಟ್ಟಿ, ಪೊಲೀಸ್ ಪೇದೆಯನ್ನು ಕರೆತಂದಿದ್ದಾರೆ.

ಈ ಬಗ್ಗೆ ಸಿಬ್ಬಂದಿ ಸಿದ್ದರಾಮ ಅವರು ನೀಡಿದ ದೂರಿನ ಮೇರೆ ಇಂದು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಅಭಿಮಠ ಬಾಚಳ್ಳಿಯ ಆದರ್ಶ್ ಹಾಗೂ ತಾಕೇರಿಯ ಚೇತನ್ ಅವರುಗಳು ತಲೆಮರೆಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.