ಮಡಿಕೇರಿ, ಮೇ 19: ಜನಪ್ರತಿ ನಿಧಿಗಳು ಪರಸ್ಪರ ಹೊಂದಾಣಿಕೆ ಹಾಗೂ ಪಾರದರ್ಶಕತೆ ಯೊಂದಿಗೆ ಮೌಲ್ಯಾಧಾರಿತ ರಾಜಕೀಯ ಮಾಡುವಂತೆ ಹಿರಿಯ ರಾಜಕೀಯ ಮುತ್ಸದ್ಧಿ ಹಾಗೂ ಕೊಡಗು ಜಿಲ್ಲಾ ಪರಿಷತ್ತಿನ ಪ್ರಥಮ ಅಧ್ಯಕ್ಷ ಜಮ್ಮಡ ಎ. ಕರುಂಬಯ್ಯ ಜನಪ್ರತಿನಿಧಿಗಳಿಗೆ ಕರೆ ನೀಡಿದರು.

ಜಿಲ್ಲಾ ಪಂಚಾಯತ್ ಹಾಗೂ ಕೊಡಗು ಪತ್ರಕರ್ತರ ವೇದಿಕೆ ವತಿಯಿಂದ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಜಿ.ಪಂ., ತಾ.ಪಂ.ಹಾಗೂ ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರಿಗೆ ಏರ್ಪಡಿಸಲಾಗಿದ್ದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

ಜನರ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸಿದಾಗ ಅಭಿವೃದ್ಧಿ ಕೆಲಸಗಳು ತಾನಾಗೆ ನಡೆಯುತ್ತವೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಹೊಂದಾಣಿಕೆಯಿಂದ ಕೆಲಸ ನಿರ್ವಹಿಸಬೇಕು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಬಣ್ಣಿಸಿದರು. ಸ್ವಾತಂತ್ರ್ಯ ದೊರೆತು 70 ವರ್ಷಗಳಾಗುತ್ತಾ ಬಂದಿದ್ದರೂ, ಸಮಗ್ರ ಗ್ರಾಮೀಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಕುಡಿಯುವ ನೀರು, ಶಿಕ್ಷಣ, ಆರೋಗ್ಯ, ರಸ್ತೆ, ವಿದ್ಯುತ್ ಹೀಗೆ ಕನಿಷ್ಠ ಮೂಲ ಬಗ್ಗೆ ಈಗ ಚರ್ಚೆ ಯಾಗುತ್ತಿರುವದು ವಿಷಾದನೀಯ. ಅದೇ ರೀತಿ ಆದ್ಯತಾ ಕ್ಷೇತ್ರಗಳಾದ ಕೃಷಿ, ತೋಟಗಾರಿಕೆ, ಪಶುಪಾಲನೆ, ಮೀನುಗಾರಿಕೆ, ಹಾಗೆಯೇ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಹೀಗೆ ಎಲರೂ ಒಟ್ಟುಗೂಡಿಯೇ ಗ್ರಾಮೀಣಾಭಿವೃದ್ಧಿ ಸಾಧ್ಯವಾಗುತ್ತದೆ.

(ಮೊದಲ ಪುಟದಿಂದ) ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಲ್ಲಿ ಸಹಭಾಗಿತ್ವ, ಸಮನ್ವಯತೆ ಅತೀ ಮುಖ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಭೆ ಹಾಗೂ ಕೆಡಿಪಿ ಸಭೆಗಳಲ್ಲಿ ನಡೆಯುವ ಚರ್ಚೆಗಳನ್ನು ಗಮನಿಸಿದರೆ ಬೇಸರವಾಗುತ್ತದೆ. ಯಾವ ವಿಚಾರವನ್ನು ಸಭೆಯಲ್ಲಿ ಇಟ್ಟಿರುತ್ತೇವೆ. ಅದನ್ನು ಬಿಟ್ಟು ಬೇರೆ ವಿಚಾರಗಳಿಗೆ ಒತ್ತು ನೀಡಿ ಇಡೀ ಸಮಯವನ್ನು ವ್ಯರ್ಥ ಮಾಡುತ್ತಿರುವದು ಕಂಡು ಬರುತ್ತಿದೆ. ಒಂದೇ ಕಾಮಗಾರಿಯನ್ನು ಎರಡು ಬಾರಿ ಉದ್ಘಾಟಿಸುವದು ಅಥವಾ ಶಂಕುಸ್ಥಾಪನೆ ನೆರವೇರಿಸುವದು ಸರಿಯಲ್ಲ. ಪ್ರತಿಷ್ಠೆ ಬದಿಗಿಟ್ಟು ಅಭಿವೃದ್ಧಿಯತ್ತ ಎಲ್ಲರೂ ಗಮನ ಹರಿಸಬೇಕಿದೆ ಎಂದು ನುಡಿದರು.

ದಕ್ಷಿಣ ಕನ್ನಡ ಜಿಲ್ಲೆಯ ಜಿ.ಪಂ.ಸಿಇಓ ಡಾ.ಎಂ.ಆರ್. ರವಿ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಪಾತ್ರ ಕುರಿತು ಮಾತನಾಡಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜೋಡಿ ಎತ್ತಿನಂತೆ ಕಾರ್ಯನಿರ್ವಹಿಸಬೇಕು. ಒಬ್ಬರಿಗೊಬ್ಬರ ಸಹಕಾರ ಇಲ್ಲದಿದ್ದರೆ ಯಾವುದೇ ಕಾರ್ಯಗಳು ಆಗುವದಿಲ್ಲ ಎಂದರು.

ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕಲ್ಪನೆಯನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಾಕಾರಗೊಳಿಸಬೇಕು. ಗ್ರಾಮೀಣ ಜನರ ಜೀವನ ಮಟ್ಟ ಸುಧಾರಿಸಬೇಕು ಎಂಬ ಉದ್ದೇಶದಿಂದ ಸ್ಥಳೀಯ ಆಡಳಿತ ಬಲಪಡಿಸಲಾಗಿದ್ದು, ಇದರ ಸದುಪಯೋಗ ಗ್ರಾಮೀಣ ಜನರಿಗೆ ತಲಪಬೇಕು. ಅಧಿಕಾರದಿಂದ ವಂಚಿತರಾದವರಿಗೆ ಅಧಿಕಾರ ನೀಡುವದೇ ಪ್ರಜಾಸತ್ತಾತ್ಮಕ ವ್ಯವಸ್ಥೆಯಾಗಿದ್ದು, ಆ ನಿಟ್ಟಿನಲ್ಲಿ ಎಲ್ಲರಿಗೂ ಎಲ್ಲಾ ಸೌಲಭ್ಯಗಳು ತಲುಪಬೇಕು. ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಸಮನ್ವಯತೆ, ಸ್ವಾವಲಂಬಿ ಸಮಾಜ ನಿರ್ಮಾಣ ಮಾಡುವದು, ಗ್ರಾಮೀಣ ಅಭಿವೃದ್ಧಿಯ ಧ್ಯೇಯವಾಗಿದೆ . ಸಾರ್ವಜನಿಕರು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಲ್ಲಿ ಬಹಳಷ್ಟು ನಿರೀಕ್ಷೆ ಇಟ್ಟು ಕೊಂಡಿದೆ. ರಾಜ್ಯ ನಿರ್ದೇಶಕ ತತ್ವಗಳನ್ನು ಪಾಲನೆ ಮಾಡುವದು, ಸಾರ್ವಜನಿಕ ಕ್ಷೇತ್ರಗಳಲ್ಲಿ ಸ್ಪಂದಿಸುವದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಪ್ರಜಾಪ್ರಭುತ್ವದಲ್ಲಿ ಅಭಿವೃದ್ಧಿ, ಚರ್ಚೆ ನಂತರ ಫಲಿತಾಂಶ ಕಾಣಬಹುದಾಗಿದೆ. ಶಿಸ್ತು ಹಾಗೂ ಸ್ವಚ್ಛತೆ ಇದ್ದಲ್ಲಿ ಅಭಿವೃದ್ಧಿ ಸಾಧಿಸಬಹುದು.

ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಾರ್ವಜನಿಕರ ಸೇವಕರಾಗಿದ್ದು, ಯಾವದೇ ಕಾರಣಕ್ಕೂ ಸಾರ್ವಜನಿಕರಿಗೆ ಮಾಸ್ಟರ್ ಆಗುವದಿಲ್ಲ. ಸಾರ್ವಜನಿಕರಿಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಉತ್ತರದಾಯಿತ್ವ ಹೊಂದಿರಬೇಕು ಎಂದರು.

ಕೊಡಗು ಜಿ.ಪಂ. ಸಿಇಓ ಚಾರುಲತಾ ಸೋಮಲ್ ಮಾತನಾಡಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಹಕಾರದಿಂದ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆಯಲು ಸಾಧ್ಯವಾಯಿತು. ಜಿ.ಪಂ.ಭವನ ನಿರ್ಮಾಣಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಜಿಲ್ಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡುವ ನಿಟ್ಟಿನಲ್ಲಿ ಜಿ.ಪಂ. ಮುಂದಾಗಿದ್ದು, ಇದಕ್ಕಾಗಿ ತಾ. 26 ರಿಂದ ಮೂರು ದಿನಗಳ ಕಾಲ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ಜಿಲ್ಲೆಯ ಸಂಪಾಜೆ ಮತ್ತು ಪಾಲಿಬೆಟ್ಟ ಗ್ರಾಮ ಪಂಚಾಯಿತಿಗಳು ಸ್ವಚ್ಛ ಭಾರತ ಅಭಿಯಾನದಡಿ ಪ್ರಶಸ್ತಿ ಪಡೆದಿರುವದು, ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆಯಾಗಿರುವದು ಹೀಗೆ ಸಮನ್ವಯತೆ ಮತ್ತು ಸಹಕಾರದಿಂದ ಈ ಎಲ್ಲಾ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗಿದೆ .

ಹಾಗೆಯೇ ನರೇಗಾ ಕಾರ್ಯಕ್ರಮ, ಶೌಚಾಲಯ ನಿರ್ಮಾಣ, ವಸತಿ ಯೋಜನೆಗಳು ಹೀಗೆ ಎಲ್ಲಾ ಕಾರ್ಯಗಳಿಗೂ ಜನಪ್ರತಿನಿಧಿಗಳ ಸಹಕಾರವಿದ್ದಲ್ಲಿ ಪ್ರಗತಿ ಸಾಧಿಸಲು ಸಾಧ್ಯ ಎಂದು ಹೇಳಿದರು. ಶಕ್ತಿ ದಿನಪತ್ರಿಕೆಯ ಸಂಪಾದಕ ಜಿ.ಚಿದ್ವಿಲಾಸ್ ಮಾತನಾಡಿ ಮಾಧ್ಯಮ ರಂಗದಲ್ಲಿಯೂ ಸಹ ರಾಜಕೀಯ ಪ್ರವೇಶವಾಗುತ್ತದೆ. ಜೊತೆಗೆ ಸಾಮಾಜಿಕ ಬದ್ಧತೆ ಮತ್ತು ಹೊಣೆಗಾರಿಕೆ ಕಡಿಮೆಯಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅಭಿಪ್ರಾಯಪಟ್ಟರು.

ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್ ಮಾತನಾಡಿ ಗ್ರಾಮೀಣಾಭಿವೃದ್ಧಿ, ಗ್ರಾಮ ವಿಕಾಸ ಕಾರ್ಯಕ್ರಮಗಳು ಗ್ರಾಮೀಣ ಜನರಿಗೆ ತಲಪಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿದಾಗ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ವಿಜು ಸುಬ್ರಮಣಿ, ಸದಸ್ಯರಾದ ಮುರಳಿ ಕರುಂಬಮ್ಮಯ್ಯ, ಭವ್ಯ, ಎ.ಎಂ.ಮಹೇಶ್, ಯಲದಾಳು ಪದ್ಮಾವತಿ, ಕಲಾವತಿ ಪೂವಪ್ಪ, ಕವಿತಾ ಪ್ರಭಾಕರ, ಕಿರಣ್ ಕಾರ್ಯಪ್ಪ, ಸರೋಜಮ್ಮ, ಸುನಿತಾ, ಕುಮುದ ಧರ್ಮಪ್ಪ, ಕೊಡಗು ಪತ್ರಕರ್ತರ ವೇದಿಕೆಯ ಅಧ್ಯಕ್ಷ ಶ್ರೀಧರ್ ನೆಲ್ಲಿತ್ತಾಯ, ಶ್ರೀಧರ್ ಹೂವಲ್ಲಿ ಹಾಗೂ ತಿಮ್ಮಪ್ಪ, ಉಳ್ಳಿಯಡ ಪೂವಯ್ಯ ಹಾಗೂ ಇನ್ನಿತರರು ಇದ್ದರು.

ವೇದಿಕೆಯಲ್ಲಿ ಪತ್ರಿಕಾ ಭವನದ ಮ್ಯಾನೇಜಿಂಗ್ ಟ್ರಸ್ಟಿ ಮನುಶೆಣೈ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ, ಕೊಡಗು ಪತ್ರಕರ್ತರ ವೇದಿಕೆಯ ಮಧೋಶ್ ಪೂವಯ್ಯ ಕಾರ್ಯಕ್ರಮ ನಿರೂಪಿಸಿ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ವಂದಿಸಿದರು.