ಮಡಿಕೇರಿ, ಮೇ 19: ಪ್ರತಿಯೋರ್ವನ ಜೀವನದಲ್ಲೂ ಒತ್ತಡಗಳಿರುತ್ತದೆ. ಸಂಗೀತ ಲೋಕದಿಂದ ಮಾತ್ರ ಮನಸ್ಸಿಗೆ ನಿರಾಳತೆ ದೊರಕಲಿದೆ ಎಂದು ‘ಶಕ್ತಿ’ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅಭಿಪ್ರಾಯಪಟ್ಟರು.

ಕೊಡಗು ಪತ್ರಕರ್ತರ ವೇದಿಕೆಯ ಆರಂಭೋತ್ಸವದ ಪ್ರಯುಕ್ತ ಇಲ್ಲಿನ ಕಾವೇರಿ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದ್ದ ‘ಭಾವಾಭಿಯಾನ’ - ನಾಡು-ನುಡಿ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಒತ್ತಡ ಯಾರನ್ನೂ ಬಿಡಲಿಲ್ಲ. ಎಲ್ಲಾ ವರ್ಗದ ಜನತೆಯಲ್ಲೂ ಒತ್ತಡ ಇದ್ದೇ ಇರುತ್ತದೆ. ಒತ್ತಡ ಕಡಿಮೆ ಮಾಡಿ, ಮನಸಿಗೆ ನಿರಾಳತೆ ಒದಗಿಸಲು ಸಂಗೀತ ಲೋಕದಿಂದ ಮಾತ್ರ ಸಾಧ್ಯವೆಂದು ಹೇಳಿದರು. ಸಂಗೀತಕ್ಕೆ ತನ್ಮಯಗೊಳಿಸುವ ಮಾಂತ್ರಿಕ ಶಕ್ತಿ ಇದೆ ಎಂದರು.

ಅತಿಥಿಯಾಗಿದ್ದ ಅಖಿಲ ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಮಾದಲಗೆರೆ ಆನಂದ್ ಮಾತನಾಡಿ, ಸಾಂಸ್ಕøತಿಕ ಸಂಬಂಧಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಈ ಸಂಬಂಧ ವೈಯಕ್ತಿಕ ಸಂಬಂಧಗಳಿಗಿಂತ ಮಹತ್ವದ್ದಾಗಿದೆ. ಸಂಗೀತ, ಸಾಹಿತ್ಯ ಲೋಕಕ್ಕೆ ಗಡಿಯೆಂಬ ನಿರ್ದಿಷ್ಟ ಚೌಕಟ್ಟಿಲ್ಲವೆಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭ ನಾಡಿನ ಹಿರಿಯ ಗಾಯಕಿ ಬಿ.ಕೆ. ಸುಮಿತ್ರ 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅವರನ್ನು ಜಿಲ್ಲೆಯ ಪರವಾಗಿ ಜಿ. ರಾಜೇಂದ್ರ ಅವರು ಸನ್ಮಾನಿಸಿ ಗೌರವಿಸಿದರು. ಬಳಿಕ ಸುಮಿತ್ರ ಅವರು ಜನಪ್ರಿಯ ಗೀತೆಗಳನ್ನು ಹಾಡಿ ರಂಜಿಸಿದರು. ವೇದಿಕೆಯಲ್ಲಿ ಮೈಸೂರು ಉಪತಹಶೀಲ್ದಾರ್ ಸಂತೋಷ್, ಕಸಾಪ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಪತ್ರಿಕಾಭವನ ಟ್ರಸ್ಟಿ ಬಿ.ಎನ್. ಮನುಶೆಣೈ, ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಕೇಶವ ಕಾಮತ್, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಇದ್ದರು.

ರೇಖಾ ಶ್ರೀಧರ್ ಪ್ರಾರ್ಥಿಸಿದರೆ, ಪತ್ರಕರ್ತರ ವೇದಿಕೆಯ ಅಧ್ಯಕ್ಷ ಶ್ರೀಧರ್ ನೆಲ್ಲಿತ್ತಾಯ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಡ್ಯದ ಡೇವಿಡ್ ನಿರೂಪಿಸಿದರು. ಬಳಿಕ ಸ್ಥಳೀಯ ಕಲಾವಿದರಾದ ಜಿ. ಚಿದ್ವಿಲಾಸ್, ಸಂಧ್ಯಾ ಚಿದ್ವಿಲಾಸ್, ಲಿಯಾಕತ್ ಆಲಿ ಹಾಗೂ ರಾಜ್ಯದ ವಿವಿಧ ಗಾಯಕರುಗಳಿಂದ ಹಾಡುಗಾರಿಕೆ ನಡೆಯಿತು.

ರಫೀಕ್ ತೂಚಮಕೇರಿ