ಸಿದ್ದಾಪುರ, ಮೇ 19: ಸಿದ್ದಾಪುರ ಹಾಗೂ ನೆಲ್ಯಹುದಿಕೇರಿ ಪಟ್ಟಣದಲ್ಲಿ ರಾತ್ರಿ ವೇಳೆ ಕಳ್ಳರು ತಮ್ಮ ಕೈಚಳಕ ಪ್ರದರ್ಶಿಸಿ ಕಳ್ಳತನ ನಡೆಸಿರುವ ಘಟನೆ ಗುರುವಾರ ಮದ್ಯರಾತ್ರಿ ನಡೆದಿದೆ.

ಗುರುವಾರ ರಾತ್ರಿ ವೇಳೆ ಮಳೆ, ಸಿಡಿಲು ಹಾಗೂ ಗಾಳಿ ಇದ್ದ ಸಮಯ ನೋಡಿ ಕಳ್ಳತನ ನಡೆಸಿದ ಕಳ್ಳರು ಸುಮಾರು 6 ಅಂಗಡಿಗಳ ಶಟರ್ಸ್ ಮುರಿದು ಕಳ್ಳತನ ಮಾಡಿದ್ದಾರೆ.

ಸಿದ್ದಾಪುರದ ವೀರಾಜಪೇಟೆ ರಸ್ತೆಯಲ್ಲಿರುವ ಜನತಾ ಸ್ಟೋರ್ಸ್, ನಾಯ್ಡು ವೈನ್ಸ್, ನೆಲ್ಯಹುದಿಕೇರಿಯ ನ್ಯಾಶನಲ್ ವೈನ್ಸ್, ಬ್ರಿಧಿ ಪಾರ್ಮಾ (ಮೆಡಿಕಲ್ಸ್), ದಿನಸಿ ಅಂಗಡಿ ಸೇರಿದಂತೆ ಒಟ್ಟು 6 ಅಂಗಡಿಗಳಲ್ಲಿ ಸರಣಿ ಕÀಳ್ಳತನವಾಗಿದ್ದು, ರಾತ್ರಿ ವೇಳೆ ಕಳ್ಳರು ಕೈಚಳಕ ತೋರಿದ್ದಾರೆ. ವಾಹನದ ಜ್ಯಾಕಿಯನ್ನು ಬಳಸಿಕೊಂಡು ಅಂಗಡಿಯ ಶೆಟರ್ಸ್ ಮುರಿದು ಕಳ್ಳತನವಾಗಿರುವದು ಬೆಳಕಿಗೆ ಬಂದಿದೆ. ವೀರಾಜಪೇಟೆ ರಸ್ತೆಯ ನಾಯ್ಡು ವೈನ್ಸ್‍ನಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ಕಳ್ಳತನದ ದೃಶ್ಯ ಸೆರೆಯಾಗಿದ್ದು, ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿದ್ದಾಪುರದ ಕರೀಂ ಎಂಬವರಿಗೆ ಸೇರಿದ ಜನತಾ ಸ್ಟೋರ್‍ನಲ್ಲಿ 800 ರೂ ಮೌಲ್ಯದ ಸಿಗರೇಟ್, ನಾಯ್ಡು ವೈನ್ಸ್‍ನಲ್ಲಿ 75 ಸಾವಿರ ರೂ ನಗದು ಸೇರಿದಂತೆ ಸಾವಿರಾರು ರೂ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ.

ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸಿದ್ದಾಪುರ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಬಂಧನಕ್ಕೆ ಒತ್ತಾಯ: ಸಿದ್ದಾಪುರ ಹಾಗೂ ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ಈ ಹಿಂದೆ ಹಲವಾರು ಕಳ್ಳತನ ಪ್ರಕರಣಗಳು ನಡೆದಿದ್ದು, ಆರೋಪಿ ಗಳನ್ನು ಪೊಲೀಸರು ಈವರೆಗೂ ಬಂಧಿಸಲಿಲ್ಲ. ಪೊಲೀಸ್ ಇಲಾಖೆ ವತಿಯಿಂದ ಹೊಸ ಬೀಟ್ ವ್ಯವಸ್ಥೆ ಜಾರಿಯಲ್ಲಿದ್ದರೂ ಕಳ್ಳತನವಾಗಿರುವ ಬಗ್ಗೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದು, ಕೂಡಲೇ ಕಳ್ಳರನ್ನು ಬಂಧಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.