ಮಡಿಕೇರಿ, ಮೇ 20: ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ಮರಗೋಡು ಸ.ಮಾ.ಪ್ರಾ. ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಗೌಡ ಫುಟ್ಬಾಲ್ ಟ್ರೋಫಿ ಪಂದ್ಯಾಟದಲ್ಲಿ ಮುಕ್ಕಾಟಿ, ಪಾರೆಕುಂಜಿಲನ, ಅಯ್ಯಂಡ್ರ ಹಾಗೂ ಪಾಣತ್ತಲೆ ತಂಡಗಳು ಸೆಮಿಫೈನಲ್‍ಗೆ ಪ್ರವೇಶ ಪಡೆದಿದ್ದು, ಬಳಿಕ ಅಂತಿಮ ಹಣಾಹಣಿ ನಡೆಯಲಿದೆ.

ಇಂದಿನ ಪಂದ್ಯದಲ್ಲಿ ಇಟ್ಟಣಿಕೆ ಮತ್ತು ತೋಟಂಬೈಲು ತಂಡಗಳು ಸಮಬಲ ಸಾಧಿಸಿದ್ದು, ಬಳಿಕ ಪೆನಾಲ್ಟಿ ಶೂಟೌಟ್‍ನಲ್ಲಿ ಇಟ್ಟಣಿಕೆ 3-0 ಅಂತರದಿಂದ ಗೆಲುವು ಸಾಧಿಸಿತು.

ಪಾರೆಕುಂಜಿಲನ ತಂಡವು ಪಾರೆಮಜಲು ತಂಡದ ವಿರುದ್ಧ ಪೆನಾಲ್ಟಿ ಶೂಟೌಟ್‍ನಲ್ಲಿ ಜಯ ಸಾಧಿಸಿತು. ಇದಕ್ಕೂ ಮುನ್ನ ಯಾವದೇ ಗೋಲು ದಾಖಲಾಗದೆ ಸಮಬಲ ಸಾಧಿಸಿತ್ತು. ಮುಕ್ಕಾಟಿ ಬಿ. ತಂಡವು ಕಡ್ಯದ ತಂಡದ ವಿರುದ್ಧ ಪೆನಾಲ್ಟಿ ಶೂಟೌಟ್‍ನಲ್ಲಿ ಜಯಸಾಧಿಸಿತು. ಇದಕ್ಕೂ ಮುನ್ನ ಮುಕ್ಕಾಟಿ ಗಗನ್ ಹಾಗೂ ಕಡ್ಯದ ಪ್ರವೀಣ್ ತಲಾ ಒಂದೊಂದು ಗೋಲು ಬಾರಿಸಿ ಎರಡೂ ತಂಡಗಳೂ ಸಮಬಲ ಸಾಧಿಸಿತು.

ಬೆಳ್ಳೂರು ಮರದಾಳು ತಂಡವನ್ನು 1-0 ಗೋಲುಗಳಿಂದ ಮಣಿಸಿ ಜಯಸಾಧಿಸಿತು. ಅಯ್ಯಂಡ್ರ ತಂಡದ ವಿರುದ್ಧ 4-1 ಗೋಲುಗಳಿಂದ ಜಯಸಾಧಿಸಿತು. ಅಯ್ಯಂಡ್ರ ಪರ ಅಜಯ್, ಸಚಿನ್, ಮಿಥುನ್, ಗಗನ್ ತಲಾ ಒಂದೊಂದು ಗೋಲು ಬಾರಿಸಿದರು. ಬೆಪ್ಪುರನ ಕೊಂಪುಳಿರ ವಿರುದ್ಧ 1-0 ಗೋಲುಗಳಿಂದ ಜಯ ಸಾಧಿಸಿತು. ಪಾಣತ್ತಲೆ ಹಾಗೂ ದೇವಜನ 1-1 ಸಮಬಲ ಸಾಧಿಸಿದ್ದು, ಬಳಿಕ ಪೆನಾಲ್ಟಿ ಶೂಟೌಟ್‍ನಲ್ಲಿ ಪಾಣತ್ತಲೆ ಜಯ ಸಾಧಿಸಿತು.

ಪಾರೆಕುಂಜಿಲನ-ಇಟ್ಟಣಿಕೆ ವಿರುದ್ಧ 2-0 ಗೋಲುಗಳಿಂದ ಜಯಗಳಿಸಿತು. ಪಾರೆಕುಂಜಿಲನ ಪ್ರಶಾಂತ್, ವಿನು ಗೋಲು ದಾಖಲಿಸಿದ್ದಾರೆ. ಮುಕ್ಕಾಟಿ ತಂಡವು ಬೊಳ್ಳೂರು ವಿರುದ್ಧ 2-0 ಗೋಲುಗಳಿಂದ ಜಯಗಳಿಸಿತು.

ಅಯ್ಯಂಡ್ರ-ಪೊನ್ನಚ್ಚನ ವಿರುದ್ಧ 3-1 ಗೋಲುಗಳಿಂದ ಜಯ ಸಾಧಿಸಿತು. ಅಯ್ಯಂಡ್ರ ಮಿಥುನ್ 2, ಅಜಯ್ ಒಂದು ಗೋಲು ಬಾರಿಸಿ ಜಯಗಳಿಸಲು ಕಾರಣರಾದರು.

ಪಾಣತ್ತಲೆ-ಬೆಪ್ಪುರನ ವಿರುದ್ಧ 2-1 ಗೋಲುಗಳಿಂದ ಜಯ ಗಳಿಸಿತು. ಪಾಣತ್ತಲೆ ವಿಕ್ರಂ, ಮಧು ತಲಾ ಒಂದೊಂದು ಗೋಲು ಬಾರಿಸಿದರು.

ಇಂದು ಸಮಾರೋಪ

ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ದ್ವಿತೀಯ ವರ್ಷದ ಗೌಡ ಫುಟ್ಬಾಲ್ ಟ್ರೋಫಿಯ ಗೌಡ ಫುಟ್ಬಾಲ್ ಪಂದ್ಯಾಟದ ಸಮಾರೋಪ ಸಮಾರಂಭ ಇಂದು ನಡೆಯಲಿದ್ದು,

ಮಧ್ಯಾಹ್ನ 3 ಗಂಟೆಗೆ ನಡೆಯುವ ಸಮಾರೋಪ ಸಮಾರಂಭವನ್ನು ಬಿಬಿಎಂಪಿ ದಕ್ಷಿಣ ವಲಯ ಜಂಟಿ ಆಯುಕ್ತ ಪಾಣತ್ತಲೆ ಪಳಂಗಪ್ಪ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಗೌಡ ಫುಟ್ಬಾಲ್ ಅಕಾಡೆಮಿ ಅಧ್ಯಕ್ಷ ಕಟ್ಟೆಮನೆ ರಾಖೇಶ್ ಸಿದ್ದಾರ್ಥ ವಹಿಸಲಿದ್ದಾರೆ. ಅಂತಿಮ ಪಂದ್ಯವನ್ನು ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಡಿಕೇರಿ ಎಪಿಎಂಸಿ ಅಧ್ಯಕ್ಷ ಕಾಂಗೀರ ಎಸ್. ಸತೀಶ್, ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ, ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಹಾಗೂ ಇನ್ನಿತರರು ಭಾಗವಹಿಸಲಿದ್ದಾರೆ.

ಮಧ್ಯಾಹ್ನ 12 ಗಂಟೆಗೆ ಗೌಡ ಯುವತಿಯರಿಂದ ಫುಟ್ಬಾಲ್ ಪ್ರದರ್ಶನ ಪಂದ್ಯ, ಗಗನ್, ದೀಪ್ ಮತ್ತು ತಂಡದಿಂದ ಬೈಕ್ ಸ್ಟಂಟ್, ಮಹಿಳೆಯರಿಂದ ನಿಧಾನಗತಿಯ ಬೈಕ್ ರೇಸ್ ವಿಶೇಷ ಆಕರ್ಷಣೆಯನ್ನು ಏರ್ಪಡಿಸಲಾಗಿದೆ.