ಕೂಡಿಗೆ, ಮೇ 20: ಕೂಡುಮಂಗಳೂರು ಮತ್ತು ಕೂಡ್ಲೂರು ಗ್ರಾಮಗಳ ಜಂಟಿ ಆಶ್ರಯದಲ್ಲಿ ದೊಡ್ಡಮ್ಮ ತಾಯಿಯ ರಥೋತ್ಸವ ಹಾಗೂ ಜಾತ್ರೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ಎರಡು ಗ್ರಾಮಗಳಿಂದ ಎರಡು ರಥಗಳು ವಿದ್ಯುತ್ ದೀಪ ಅಲಂಕೃತಗೊಂಡು ರಥದಲ್ಲಿ ದೇವಿಯ ವಿಗ್ರಹವನ್ನು ಕುಳ್ಳಿರಿಸಿದ ನಂತರ ರಥೋತ್ಸವವು ಮಧ್ಯ ರಾತ್ರಿಯಲ್ಲಿ ಚಾಲನೆಗೊಂಡು ದೇವಾಲಯದ ಬನದವರೆಗೆ ಗ್ರಾಮಸ್ಥರು ಮಂಗಳವಾದ್ಯ ಮತ್ತು ನಾಣವಾದ್ಯ ಮದ್ದುಗುಂಡುಗಳ ರಭಸದೊಂದಿಗೆ ದೇವಾಲಯದ ಬನ ಸೇರಿತು.

ಈ ಸಂದರ್ಭ ದೇವಾಲಯದ ಆವರಣದಲ್ಲಿ ಬೆಳಗಿನಿಂದಲೇ ಹೋಮ ಹವನಗಳು ನಡೆದವು. ಸಂಜೆ 7.30 ಗಂಟೆಗೆ ಅಗ್ನಿ ಕೊಂಡಕ್ಕೆ ಗ್ರಾಮದ ಪ್ರಮುಖರು ಬೆಂಕಿ ಹಂಚಿಸುವ ಮೂಲಕ ಚಾಲನೆ ನೀಡಿದರು. ಕೂಡುಮಂಗಳೂರು ಮತ್ತು ಕೂಡ್ಲೂರು ಗ್ರಾಮಗಳ ಮಧ್ಯೆ ಇರುವ ದೊಡ್ಡಮ್ಮ ತಾಯಿಯ ದೇವಸ್ಥಾನವು ವಿವಿಧÀ ಭಂಗಿಯ ದೇವರುಗಳ ವಿಗ್ರಹ ಒಳಗೊಂಡಂತೆ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿತ್ತು.

2 ಗ್ರಾಮಗಳ ಕೆಲವು ಮಂದಿ ಹರಕೆ ಹೊತ್ತ ಭಕ್ತಾದಿಗಳು ಮಧ್ಯರಾತ್ರಿಯಲ್ಲಿ ದೇವಾಲಯದ ಬಣದಲ್ಲಿ ಬೆಂಕಿ ಕೊಂಡವನ್ನು ಹಾಯುವ ಮೂಲಕ ಹರಕೆ ತೀರಿಸುವದರ ಮೂಲಕ ಭಕ್ತಿ ಮೆರೆದರು. ನಂತರ ರಾತ್ರಿ 3 ಗಂಟೆಯ ಸಂದರ್ಭಕ್ಕೆ ತಮ್ಮ ತಮ್ಮ ಹರಕೆಯ ಕುರಿಗಳನ್ನು ಬಲಿ ಕೊಡಲಾಯಿತು. ಈ ರಥೋತ್ಸವ ಮತ್ತು ಜಾತ್ರೋತ್ಸವ ಕಾರ್ಯಕ್ರಮಕ್ಕೆ ಜಿಲ್ಲೆಯ ಜನರು ಸೇರಿದಂತೆ ಅಕ್ಕ ಪಕ್ಕದ ಮೈಸೂರು ಮತ್ತು ಹಾಸನ ಜಿಲ್ಲೆಯ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.