ಆಲೂರುಸಿದ್ದಾಪುರ, ಮೇ 20: ಬೆಳ್ಳಂಬೆಳಗ್ಗೆಯೇ ಕಾಡಿನಿಂದ ನಾಡಿಗೆ ಬಂದ ಕಾಡಾನೆಗಳ ಹಿಂಡುಗಳನ್ನು ಕಂಡ ಗ್ರಾಮಸ್ಥರು ಗಾಬರಿಗೊಂಡು ನಂತರ ಕಾಡಾನೆ ಗಳನ್ನು ಕಾಡಿಗೆ ಅಟ್ಟಿದ ಘಟನೆ ಶನಿವಾರ ಬೆಳಗ್ಗೆ ಆಲೂರು ಸಿದ್ದಾಪುರದಲ್ಲಿ ನಡೆದಿದೆ. ಬೆಳಿಗ್ಗೆ 6.30 ಗಂಟೆ ಸುಮಾರಿಗೆ ಆಲೂರು ಸಿದ್ದಾಪುರದÀ ಮಾಲಂಬಿ ಮೀಸಲು ಅರಣ್ಯದಿಂದ 4 ಗಂಡಾನೆ, 2 ಹೆಣ್ಣಾನೆ ಮತ್ತು 1 ಮರಿಯಾನೆ ಸೇರಿದಂತೆ ಒಟ್ಟು 7 ಕಾಡಾನೆಗಳ ಹಿಂಡು ಜಾನಕಿ ಕಾಳಪ್ಪ ವಿದ್ಯಾಸಂಸ್ಥೆ ಬಳಿ ಕಾಣಿಸಿಕೊಂಡಿವೆ. ಅರಣ್ಯ ಬದಿಯಲ್ಲಿ ದೊಡ್ಡ ಕಂದಕವನ್ನು ನಿರ್ಮಿಸಿದ್ದು, ಈ ಕಾರಣದಿಂದ ಕಾಡಾನೆಗಳು ಕಂದಕವನ್ನು ದಾಟಿ ಬರುತ್ತಿರಲಿಲ್ಲ. ಇದರಿಂದ ಇಲ್ಲಿ ವಾಸ ಮಾಡುತ್ತಿದ್ದ ನಿವಾಸಿಗಳು ನಿಶ್ಚಿಂತೆಯಿಂದ ಇದ್ದರು. ಆದರೆ ಕಂದಕದೊಳಗೆ ಮಣ್ಣು ಕುಸಿದಿರುವ
(ಮೊದಲ ಪುಟದಿಂದ) ಸ್ಥಳದಿಂದ ಬಂದಿರುವ ಕಾಡಾನೆಗಳು ಗಾಬರಿಯಿಂದ ಜನರು ವಾಸ ಮಾಡುತ್ತಿದ್ದ ಮನೆಗಳ ಮುಂದೆ ಅಡ್ಡಾಡಿವೆ. ಈ ಸಮಯದಲ್ಲಿ ಅಕ್ಕಪಕ್ಕದ ಮನೆಯವರು ತಮ್ಮ ಮನೆಗಳ ಮುಂದೆ ಕಾಡಾನೆಗಳ ಹಿಂಡು ಓಡಾಡುತ್ತಿರುವದನ್ನು ಕಂಡು ಗಾಬರಿಗೊಂಡು ಮನೆಯೊಳಗೆ ಓಡಿ ಹೋಗಿದ್ದಾರೆ. ಮತ್ತೆ ಕೆಲವರು, ಚಿಕ್ಕ ಮಕ್ಕಳು ತಮ್ಮ ಮನೆಯ ಮಹಡಿ ಮೇಲೆ ನಿಂತು ಕುತೂಹಲದಿಂದ ಕಾಡಾನೆಗಳು ಅಡ್ಡಾಡುವದನ್ನು ವೀಕ್ಷಣೆ ಮಾಡಿ ತಮ್ಮ ಮೊಬೈಲ್ಗಳಲ್ಲಿ ಚಿತ್ರಿಸಿಕೊಂಡಿದ್ದಾರೆ.
ಜನರು ಕೂಗಿಕೊಂಡಾಗ ಕಾಡಾನೆಗಳು ಪಕ್ಕದ ಜಾನಕಿ ಕಾಳಪ್ಪ ವಿದ್ಯಾಸಂಸ್ಥೆಗೆ ಸೇರಿದ ಕುಡಿಯುವ ನೀರು ಒದಗಿಸಲು ಅಳವಡಿಸಿರುವ ಮೋಟಾರನ್ನು ತುಳಿದು ಹಾಕಿದೆ. ವಿದ್ಯಾಸಂಸ್ಥೆಯ ಸೂಚನಾ ಫಲಕವನ್ನು ಸಹ ಕಾಡಾನೆಗಳು ಎಳೆದು ಹಾಕಿವೆ. ನಂತರ ಇಲ್ಲಿನ ನಿವಾಸಿಗಳು ಸೇರಿಕೊಂಡು ಪಟಾಕಿ ಸಿಡಿಸಿ ಹಾಗೂ ಶಬ್ಧ ಬರುವ ಸಾಧನಗಳನ್ನು ಬಳಸಿ ಕಾಡಾನೆಗಳನ್ನು ಪಕ್ಕದ ಅರಣ್ಯಕ್ಕೆ ಓಡಿಸಿದ್ದಾರೆ.