ಮಡಿಕೇರಿ, ಮೇ 20: ಜಿಲ್ಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಹಾಗೂ ತ್ಯಾಜ್ಯ ನಿರ್ವಹಣೆ ಬಗ್ಗೆ ತಾ. 26 ರಿಂದ 28 ರವರೆಗೆ ಗ್ರಾ.ಪಂ. ಮಟ್ಟದಲ್ಲಿ ಮೂರು ದಿನಗಳ ಕಾಲ ವಿಶೇಷ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿ.ಪಂ. ಸಿಇಓ ಚಾರುಲತಾ ಸೋಮಲ್ ತಿಳಿಸಿದ್ದಾರೆ. ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಜಿ.ಪಂ. ಈಗಾಗಲೇ ಸ್ವಚ್ಛ ಭಾರತ್ ಅಭಿಯಾನದಡಿ ಪ್ರಶಸ್ತಿ ಪಡೆದಿದೆ. ಆ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಸಂಪೂರ್ಣವಾಗಿ ನಿಷೇಧ ಮಾಡಿರುವದರಿಂದ ಇನ್ನಷ್ಟು ಜಾಗೃತಿ ಕಾರ್ಯಕ್ರಮಗಳು ನಡೆಯಬೇಕಿದೆ. ಆದ್ದರಿಂದ ಗ್ರಾ.ಪಂ. ಮಟ್ಟದಲ್ಲಿ ಯಾವದಾದರೂ ಗ್ರಾಮವನ್ನು ಆಯ್ಕೆ ಮಾಡಿಕೊಂಡು ಪ್ಲಾಸ್ಟಿಕ್ ನಿಷೇಧ ಹಾಗೂ ತ್ಯಾಜ್ಯ ನಿರ್ವಹಣೆ ಬಗ್ಗೆ ಅರಿವು ಮೂಡಿಸುವಂತೆ ಗ್ರಾ.ಪಂ. ಪಿಡಿಓಗಳಿಗೆ ಸೂಚನೆ ನೀಡಿದರು.
ಈ ಸಂದರ್ಭ ಮಾತನಾಡಿದ ಗೋಗ್ರೀನ್ ಸಂಸ್ಥೆಯ ಅರುಣ್ ಅಪ್ಪಚ್ಚು, ಜಿಲ್ಲೆಯಲ್ಲಿ ವಿವಿಧ ಸಂದರ್ಭಗಳಲ್ಲಿ ಪ್ಲಾಸ್ಟಿಕ್ನ್ನು ಬಳಸುತ್ತಾರೆ. ಇದನ್ನು ನಿಷೇಧ ಮಾಡಬೇಕು. ಈ ಬಗ್ಗೆ ಜಾಗೃತಿ ಮೂಡಿಸುವದು ಅಗತ್ಯ ಎಂದರು.
ಪ್ಲಾಸ್ಟಿಕ್ ನಿಷೇಧ ಬಗ್ಗೆ ಜಾಗೃತಿ ಮೂಡಿಸುವದರ ಜೊತೆಗೆ ಕಾನೂನು ಉಲ್ಲಂಘನೆ ಮಾಡುವವರ ವಿರುದ್ಧ ಶಿಕ್ಷೆ ವಿಧಿಸುವಂತಾಗಬೇಕು. ಇದರಿಂದ ಎಚ್ಚೆತ್ತುಕೊಳ್ಳಲು ಸಾಧ್ಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಚೇಂಬರ್ ಆಫ್ ಕಾಮರ್ಸ್ನ ನಿರ್ದೇಶಕಿ ಮೋಂತಿ ಗಣೇಶ್ ಮಾತನಾಡಿ, ಹಸಿ ಕಸ ಮತ್ತು ಒಣ ಕಸ ಬೇರ್ಪಡಿಸುವ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು.
ಸರ್ಕಾರ ಎಲ್ಲರಿಗೂ ಒಂದಲ್ಲ ಒಂದು ರೀತಿಯ ಸೌಲಭ್ಯ ಕಲ್ಪಿಸುತ್ತಿದೆ. ಆದರೆ ಕರ್ತವ್ಯಗಳನ್ನು ಪಾಲನೆ ಮಾಡುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಸಮಾಜದಲ್ಲಿ ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ಸರ್ಕಾರದ ಜೊತೆ ಸರ್ಕಾರೇತರ ಸಂಸ್ಥೆಗಳು ಕೈಜೋಡಿಸಿದಾಗ ಮಾತ್ರ ಸ್ವಚ್ಛ ಪರಿಸರ ಕಾಣಲು ಸಾಧ್ಯ.
ಆ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿ.ಪಂ. ಉಪ ಕಾರ್ಯದರ್ಶಿ ವಿಶ್ವನಾಥ ಪೂಜಾರಿ, ಜಿ.ಪಂ. ಮುಖ್ಯ ಯೋಜನಾಧಿಕಾರಿ ಸತ್ಯನ್, ಉಪ ಕಾರ್ಯದರ್ಶಿ ಶ್ರೀಕಂಠ ಮೂರ್ತಿ, ತಾ.ಪಂ. ಇಒಗಳಾದ ಪಡ್ನೇಕರ್, ಜೀವನ್ ಕುಮಾರ್, ಸುನೀಲ್, ಗ್ರಾ.ಪಂ.ಗಳ ಪಿಡಿಓಗಳು ಇದ್ದರು.
ಅಭಿಯಾನದ ಸಂದರ್ಭದಲ್ಲಿ ಗಡಿ ಭಾಗದ ಪ್ರವೇಶ ದ್ವಾರದಲ್ಲಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ತಂಡಗಳ ರಚನೆ. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಸ್ವಯಂ ಸೇವಕರ ತಂಡದ ಮಾಹಿತಿ ಪಡೆದುಕೊಳ್ಳುವದು.
ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿ ಮತ್ತು ಸಂಘ-ಸಂಸ್ಥೆಗಳ ಸ್ವಯಂ ಸೇವಕರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೋರುವದು. ಲಯನ್ಸ್, ರೋಟರಿ, ಜಿಸಿಐ, ಜಿಲ್ಲಾ ಹೊಟೇಲ್ ಮಾಲೀಕರ ಸಂಘ, ಜಿಲ್ಲಾ ಹೋಂ ಸ್ಟೇ ಮಾಲೀಕರ ಸಂಘದ ಪಾಲ್ಗೊಳ್ಳುವಿಕೆ ಬಗ್ಗೆ.
ಸಾಂಪ್ರದಾಯಿಕ ಕಸ ಹಾಕುವ ಜಾಗದ ಸುಂದರೀಕರಣ (ಸ್ವಚ್ಛತೆ ಹಾಗೂ ಚಿತ್ರೀಕರಣ): ಗ್ರಾ.ಪಂ. ಒಂದು ಸ್ಥಳವನ್ನು ಆಯ್ಕೆ ಮಾಡಿಕೊಂಡು ಸ್ಥಳವನ್ನು ಸ್ವಚ್ಛಗೊಳಿಸುವದು. ಗ್ರಾ.ಪಂ. ಆಯ್ಕೆ ಮಾಡಿಕೊಂಡ ಸ್ಥಳದಲ್ಲಿ ಸಣ್ಣ ಪುಟ್ಟ ದುರಸ್ತಿ ಇದ್ದಲ್ಲಿ ಸರಿಪಡಿಸುವದು. ಕಲಾಗಾರರ ಕುಂಚದಿಂದ ಚಿತ್ರ ಬಿಡಿಸಿ ಸ್ವಚ್ಛತೆಯ ಬಗ್ಗೆ ಜಾಗೃತಿ ಬರಹ ಬರೆಸುವದು (ಮೊದಲಿನ ಸ್ಥಿತಿ-ಕಾರ್ಯಕ್ರಮದಿಂದ ಬದಲಾದ ಸ್ಥಿತಿ).
ಶ್ರಮದಾನ: ಗ್ರಾಮದ ದಾರಿ ಸ್ವಚ್ಛಗೊಳಿಸುವದು. ಅಂಗನವಾಡಿ, ಶಾಲೆ, ಸರ್ಕಾರಿ ಕಚೇರಿಗಳು, ಅಂಗಡಿ ಮುಂಗಟ್ಟು, ಹೊಟೇಲ್ಗಳ ಮಾಲೀಕರು ಸ್ವತಃ ತ್ಯಾಜ್ಯ ವಿಂಗಡಿಸಿಡುವದು. ಗ್ರಾ.ಪಂ. ವತಿಯಿಂದ ಕಸ ವಿಂಗಡಣೆ ಪ್ರತ್ಯಕ್ಷಿಕೆ ಬಿಳಿ, ಹಸಿರು, ಕೆಂಪು ಬಕೆಟ್ಗಳು, ಕೈ ಕವಚ, ಮುಖ ಕವಚ, ಇನ್ನಿತರ ಅವಶ್ಯಕ ಪರಿಕರಗಳ ವ್ಯವಸ್ಥೆ ಮಾಡುವದು.
ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಪ್ರೇಕ್ಷಣೀಯ ಸ್ಥಳಗಳಲ್ಲಿ ಜಾಗೃತಿ ಮೂಡಿಸುವದು, ಸ್ವಚ್ಛತೆಯ ಫಲಕವನ್ನು ಅಳವಡಿಸುವದು, ಶ್ರಮದಾನವನ್ನು ಕೈಗೊಳ್ಳುವದು. ಸ್ವಚ್ಛತೆಯ ಕುರಿತು ಜಾಥಾಗಳು, ಬೀದಿ ನಾಟಕ, ಧ್ವನಿವರ್ಧಕದ ಮುಖಾಂತರ ಮಾಹಿತಿ ನೀಡುವದು.
ಮನೆ ಮನೆಗಳಿಗೆ ಭೇಟಿ ನೀಡಿ ಕಸ ಪ್ರತ್ಯೇಕಿಸುವ ಬಗ್ಗೆ ಜನ ಜಾಗೃತಿ ಮೂಡಿಸುವದು ಮತ್ತು ಅಂಗಡಿ ಮುಂಗಟ್ಟುಗಳಿಗೆ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಮಾಹಿತಿ ಒದಗಿಸುವದು ಕುರಿತು ಚರ್ಚಿಸಲಾಯಿತು.