ಮಡಿಕೇರಿ, ಮೇ 20: ಸಾಲಭಾಧೆಯಿಂದ ಮೃತಪಟ್ಟ ರೈತರೊಬ್ಬರ ಕುಟುಂಬಕ್ಕೆ ಸರ್ಕಾರದ ಪರಿಹಾರವನ್ನು ದೊರಕಿಸಿಕೊಡುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಘಟಕದ ವತಿಯಿಂದ ಇಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರಿಗೆ ಮನವಿ ಸಲ್ಲಿಸಲಾಯಿತು.
ನಿಟ್ಟೂರು ಗ್ರಾಮದ ನಿವಾಸಿ ಅಣ್ಣಳಮಾಡ ಪ್ರೇಮಾ ಅವರು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಕುಟುಂಬ ಆತ್ಮಹತ್ಯೆ ಪ್ರಕರಣಕ್ಕೆ ಪರಿಹಾರ ಕೋರಿ ಅರ್ಜಿ ಸಲ್ಲಿಸಿತ್ತು. ಆದರೆ ಉಪವಿಭಾಗಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನಡೆದ ರೈತರ ಆತ್ಮಹತ್ಯೆ ಸಲಹಾ ಸಮಿತಿ ಸಭೆಯ ತೀರ್ಮಾನದಿಂದ ಮೃತನ ಕುಟುಂಬಕ್ಕೆ ಅನ್ಯಾಯವಾಗಿದೆ. ಪ್ರೇಮಾ ಸಣ್ಣ ರೈತ ಕುಟುಂಬ ವರ್ಗಕ್ಕೆ ಸೇರಿದವರಾಗಿದ್ದು, ಸೇನೆಯಲ್ಲಿ ಕರ್ತವ್ಯದಲ್ಲಿದ್ದರು. ದೇಶ ಸೇವೆ ಮಾಡಿದ ಇವರಿಗೆ ನ್ಯಾಯ ಸಿಗುವ ಬದಲು ಇಲ್ಲ ಸಲ್ಲದ ನೆಪಗಳನ್ನು ನೀಡಿ ಹರಿಹಾರಕ್ಕೆ ಅರ್ಹತೆ ಇದ್ದರೂ ಪರಿಗಣಿಸದೆ ಅನ್ಯಾಯವೆಸಲಾಗುತ್ತಿದೆ. ಪ್ರೇಮಾ ಅವರು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವದು ಪೊಲೀಸರ ಪ್ರಾಥಮಿಕ ವರದಿಯಲ್ಲಿ ನಮೂದಾಗಿದೆ. ಇವರು ರೈತರ ಆತ್ಮಹತ್ಯೆ ಪರಿಹಾರಕ್ಕೆ ಅರ್ಹರಾಗಿರುತ್ತಾರೆ. ಈ ಪ್ರಕರಣವನ್ನು ಮತ್ತೆ ಮರುಪರಿಶೀಲಿಸಿ ಮೃತರ ಕುಟುಂಬಕ್ಕೆ ದೊರಕಬೇಕಾದ ಸರ್ಕಾರದ ಪರಿಹಾರವನ್ನು ದೊರಕಿಸಲು ಕ್ರಮಕೈಗೊಳ್ಳಬೇಕೆಂದು ಮನವಿಯಲ್ಲಿ ಕೋರಲಾಗಿದೆ. ಮನವಿ ಸಲ್ಲಿಕೆ ಸಂದರ್ಭ ಸಂಘದ ಅಧ್ಯಕ್ಷ ಮನು ಸೋಮಯ್ಯ, ಕಾರ್ಯದರ್ಶಿ ಸುಜಯ್ ಬೋಪಯ್ಯ, ಗ್ರಾ.ಪಂ. ಸದಸ್ಯ ಸೂರ್ಯ, ಮೃತ ಪ್ರೇಮಾ ಅವರ ಪತ್ನಿ ಪದ್ಮ, ಸತ್ಯ ಮತ್ತಿತರರು ಇದ್ದರು.