ಮಡಿಕೇರಿ, ಮೇ 20: ಸರಕಾರ ದಿಂದ ದೊರೆಯುವ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಮೊಗೇರ ಸಮಾಜ ಬಾಂಧವರು ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಕರೆ ನೀಡಿದರು. ವೀರಾಜಪೇಟೆ ತಾಲೂಕಿನ ಸಿದ್ದಾಪುರ ಶಾಖೆಯ ಅಮೃತ ಯುವ ಮೊಗೇರ ಸೇವಾ ಸಮಾಜ ಇವರ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಮೈದಾನದಲ್ಲಿ ನಡೆದ ಪ್ರಥಮ ವರ್ಷದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಜಿಲ್ಲೆಯ ವಿವಿಧೆಡೆ ನಡೆಯುವ ಕ್ರೀಡಾಕೂಟಗಳು ಕೊಡಗು ಜಿಲ್ಲೆ ಕ್ರೀಡೆಯ ತವರೂರು ಎಂಬದನ್ನು ಸಾಭೀತುಪಡಿಸುತ್ತಿದ್ದು, ಜನಾಂಗದ ಒಗ್ಗಟ್ಟು ಹಾಗೂ ಅಭಿವೃದ್ಧಿಗೆ ಸಹಕಾರಿ ಯಾಗಿದೆ ಎಂದರು.

(ಮೊದಲ ಪುಟದಿಂದ) ಕ್ರೀಡಾಕೂಟಗಳನ್ನು ನಡೆಸುವ ಸಂದರ್ಭ ಹಣಕಾಸು ಮುಖ್ಯ. ಜಿಲ್ಲಾ ಪಂಚಾಯಿತಿ ವತಿಯಿಂದ ಕ್ರೀಡಾಕೂಟಕ್ಕೆಂದು ಅನುದಾನ ಒದಗಿಸಲು ಪ್ರಯತ್ನಿಸಲಾಗುವದು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಮಾಜದ ಜಿಲ್ಲಾಧ್ಯಕ್ಷ ಬಿ. ಶಿವಪ್ಪ, ಕ್ರೀಡಾಕೂಟವನ್ನು ಹಮ್ಮಿಕೊಳ್ಳುವ ಮೂಲಕ ಜನಾಂಗವನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಪ್ರಯತ್ನಿಸಲಾಗುತ್ತಿದೆ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ ಹರೀಶ್ ಮಾತನಾಡಿ, ಕ್ರೀಡಾ ಕೂಟವನ್ನು ಹಮ್ಮಿಕೊಳ್ಳುವದು ಉತ್ತಮ ಬೆಳವಣಿಗೆ ಆಗಿದ್ದು, ಜಿಲ್ಲಾ ಪಂಚಾಯಿತಿ ವತಿಯಿಂದ ಕ್ರೀಡಾ ಕೂಟಕ್ಕೆ ಅನುದಾನ ನೀಡಲಾಗುವದು ಎಂದರು.

ಸಮಾಜದ ಗೌರವ ಅಧ್ಯಕ್ಷ ಪಿ.ಎಂ ರವಿ ಮಾತನಾಡಿ, ನಾವು ಗ್ರಾಮೀಣ ಮಟ್ಟದಿಂದ ಸಂಘಟನೆ ಯಾದಲ್ಲಿ ಆರ್ಥಿಕವಾಗಿ ಕೂಡ ಸಬಲರಾಗಲು ಸಾಧ್ಯವಿದೆ. ಇದಕ್ಕೆ ಜನಾಂಗದ ಪ್ರತಿಕುಟುಂಬವೂ ಕೈ ಜೋಡಿಸಬೇಕು ಎಂದರು.

ಸ್ಥಾಪಕ ಅಧ್ಯಕ್ಷ ಸದಾನಂದ ಮಾಸ್ತರ್, ನಗರಸಭೆ ಸದಸ್ಯೆ ಲೀಲಾ ಶೇಷಮ್ಮ ವೇದಿಕೆಯಲ್ಲಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿದ್ದಾಪುರ ಅಮೃತ ಮೊಗೇರ ಸೇವಾ ಸಮಾಜದ ಅಧ್ಯಕ್ಷ ಪಿ.ಎಂ ರಘು ವಹಿಸಿದ್ದರು.

ಎರಡು ದಿನಗಳ ಕಾಲ ನಡೆಯಲಿರುವ ಕ್ರೀಡಾಕೂಟದಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿದೆ. ಕ್ರಿಕೆಟ್ ಪಂದ್ಯಾಟದಲ್ಲಿ ಚಿಕ್ಕಮಂಗಳೂರು, ಸಕಲೇಶಪುರ ಸೇರಿದಂತೆ 50 ತಂಡಗಳು ಪಾಲ್ಗೊಳ್ಳಲಿದೆ. ಹಗ್ಗಜಗ್ಗಟದಲ್ಲಿ 20, ಥ್ರೋಬಾಲ್ 10, ಕಬ್ಬಡಿ 25, ವಾಲಿಬಾಲ್‍ನಲ್ಲಿ 25 ತಂಡಗಳು ಹೆಸರು ನೊಂದಾಯಿಸಿಕೊಂಡಿದೆ.