ಮಡಿಕೇರಿ, ಮೇ 20: ಭಾರತದಲ್ಲಿ ನಿರಂತರವಾಗಿರುವ ಭಯೋತ್ಪಾದನೆ, ಅತ್ಯಾಚಾರ, ವರದಕ್ಷಿಣೆ ಪಿಡುಗು, ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ ಹೀಗೆ ಹತ್ತಾರು ಅನಿಷ್ಟಗಳನ್ನು ಸಂಹಾರ ಮಾಡಲು ಶಿವರೌದ್ರಾವತಾರ ತಾಳಿದರೆ ಹೇಗಿದ್ದೀತು?

ಇಂತಹ ವಿನೂತನ ಕಲ್ಪನೆ ಯನ್ನು ವೇದಿಕೆಯಲ್ಲಿ ಸತ್ಯಂಶಿವ ಸುಂದರಂ ಎಂಬ ನೃತ್ಯ ರೂಪಕವಾಗಿ ಪ್ರದರ್ಶಿಸಿ ಪಶ್ಚಿಮ ಬಂಗಾಳದ ನೇತಾಜಿ ಸುಭಾಷ್ ಚಂದ್ರಬೋಸ್ ವಿದ್ಯಾನಿಕೇತನದ ವಿದ್ಯಾರ್ಥಿಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ನಗರದ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ ಆಯೋಜಿತ ಭಾರತೀಯ ವಿದ್ಯಾಭವನ ಶಾಲೆಗಳ ರಾಷ್ಟ್ರೀಯ 8 ನೇ ಭಾವೈಕ್ಯತಾ ಏಕತಾ ಸಮಾವೇಶದ ನಾಲ್ಕನೇ ದಿನದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ದೇಶದ ಐಕ್ಯತೆ, ದೇಶಪ್ರೇಮ ಸಂದೇಶದ ವೈವಿಧ್ಯಮಯ ನೃತ್ಯಗಳು 30 ಶಾಲಾ ತಂಡಗಳಿಂದ ಪ್ರದರ್ಶಿತಗೊಂಡವು. ಒಂದಕ್ಕಿಂತ ಮತ್ತೊಂದು ಆಕರ್ಷಕವಾಗಿ ವೈವಿಧ್ಯತೆ ಮೆರೆದವು.

ಕೇರಳದ ಪಟ್ಟನ್ ಚಿತ್ತಾ ಶಾಲೆಯ ವಿದ್ಯಾರ್ಥಿಗಳು ಪರಿಸರ ಮಾಲಿನ್ಯ ಹೆಚ್ಚಾಗುತ್ತಿರುವದನ್ನು ಭೂಮಿಗೀತಾ ನೃತ್ಯದ ಮೂಲಕ ಪರಿಣಾಮಕಾರಿಯಾಗಿ ಬಿಂಬಿಸಿದರೆ, ಕೊಚ್ಚಿಯ ವಿದ್ಯಾರ್ಥಿ ತಂಡವು, ಭಾರತಕ್ಕೆ ಸ್ವಾತಂತ್ರ್ಯ ಬಂದು 68 ವರ್ಷಗಳೇ ಕಳೆದಿದ್ದರೂ ನಮ್ಮಲ್ಲಿನ್ನೂ ನಿರೀಕ್ಷಿತ ಒಗ್ಗಟ್ಟು ಮೂಡಿಲ್ಲ. ಇನ್ನಾದರೂ ಭಾರತ ಮಾತೆಯ ಗೌರವ ಸಂರಕ್ಷಿಸುವ ನಿಟ್ಟಿನಲ್ಲಿ ಭಾರತೀಯರೆಲ್ಲರೂ ಒಗ್ಗಟ್ಟಿನಿಂದ ಮೆರೆಯೋಣ, ಭಿನ್ನಾಭಿಪ್ರಾಯ ಮರೆಯೋಣ ಎಂಬ ಸಂದೇಶ ಸಾರಿದರು.

ನಾಗ್ಪುರದ ಭಾರತೀಯ ವಿದ್ಯಾಭವನದ ವಿದ್ಯಾರ್ಥಿಗಳು ವಿದ್ಯುದ್ದೀಪಗಳಲ್ಲಿಯೇ ರೂಪಿಸಲ್ಪಟ್ಟ ಭಾರತ ಭೂಪಟದ ಮೂಲಕ ಐಕ್ಯತೆಯ ಸಂದೇಶವನ್ನು ವಿಭಿನ್ನ ರೀತಿಯಲ್ಲಿ ಪ್ರದರ್ಶಿಸಿದರು.

ತಿರುವನಂತಪುರದ ವಿದ್ಯಾರ್ಥಿಗಳು, ಭಾರತದ ನೈಜ ರೂಪ ಎಂಬ ನೃತ್ಯರೂಪಕವನ್ನು ವಿಭಿನ್ನ ಕಥಾ ಹಂದರದ ಮೂಲಕ ಪ್ರದರ್ಶಿಸಿದರು. ಭಾರತದಲ್ಲಿ ಜಾತಿ, ಧರ್ಮ ಭೇದಗಳಿಂದಾಗಿಯೇ ಸಮಸ್ಯೆಗಳು ಜ್ವಲಂತವಾಗಿಯೇ ಇದೆ. ರಾಜಕಾರಣಿಗಳು, ಧಾರ್ಮಿಕ ಮುಖಂಡರು, ವಕೀಲರು, ಮಾಧ್ಯಮಗಳು ಹೀಗೆ ಯಾರು ಈ ಸಮಾಜದ ನೈಜ ರಕ್ಷಕರಾಗಬೇಕಿತ್ತೋ ಅವರೆಲ್ಲಾ ಒಟ್ಟಾಗಿ ಭಾರತೀಯನಲ್ಲಿನ ದೇಶಪ್ರೇಮಕ್ಕೆ ಧಕ್ಕೆ ತಂದಿದ್ದಾರೆ ಎಂಬ ನೀತಿ ಈ ರೂಪಕದಲ್ಲಿತ್ತು.

ದೇಶದ ವಿವಿಧೆಡೆಗಳ ಭಾರತೀಯ ವಿದ್ಯಾಭವನ ಶಾಲೆಗಳ ವಿದ್ಯಾರ್ಥಿ ಕಲಾ ತಂಡಗಳು ಅತ್ಯಾಕರ್ಷಕ ರೀತಿಯಲ್ಲಿ ಪ್ರದರ್ಶಿಸಿದ ನೃತ್ಯಗಳು, ಹಾಡುಗಾರಿಕೆಯಲ್ಲಿ ಭಾಷೆಗಳ ತೊಡಕಿರಲಿಲ್ಲ.

ಧರ್ಮ, ರಾಜ್ಯಗಳ ಭೇದವಿರಲಿಲ್ಲ. ಎಲ್ಲಾ ತಂಡಗಳ ಮೂಲ ಸಂದೇಶ ಭಾವೈಕ್ಯತೆಯೇ ಆಗಿತ್ತು. ಫಿರ್ ಬಿ ದಿಲ್ ಹೈ ಹಿಂದೂಸ್ತಾನಿ ಎಂಬ ನೀತಿಯಡಿಯಲ್ಲಿ ಭಾರತದಲ್ಲಿ ಎಲ್ಲರೂ ಸೌಹಾರ್ಧತೆ ಎಂಬ ಒಂದೇ ಸೂರಿನಡಿ ಜೀವಿಸಿದರೆ ಮಾತ್ರ ನೆಮ್ಮದಿ ಸಾಧ್ಯ ಎಂಬ ಪರಿಣಾಮಕಾರಿ ಸಂಕೇತವನ್ನು ನಾಲ್ಕು ಗಂಟೆಗಳ ಕಾಲದ ಈ ಎಲ್ಲಾ ಕಲಾ ಪ್ರದರ್ಶನಗಳು ಬಿಂಬಿಸಿದವು.