ಸೋಮವಾರಪೇಟೆ, ಮೇ 20: ಇಲ್ಲಿನ ವಿರಕ್ತ ಮಠದ ಆಶ್ರಯದಲ್ಲಿ ತಾ.21ರಂದು (ಇಂದು) ಶ್ರೀ ಕ್ಷೇತ್ರದಲ್ಲಿ ಶ್ರೀ ಗುರುಸಿದ್ದ ಮಹಾ ಸ್ವಾಮಿಗಳ 30ನೇ ವರ್ಷದ ಪುಣ್ಯಾರಾಧನೆ ಮಹೋತ್ಸವ, ಬಸವೇಶ್ವರ ಜಯಂತಿ ಹಾಗೂ ವಟುಗಳಿಗೆ ಶಿವದೀಕ್ಷಾ ಕಾರ್ಯಕ್ರಮ ನಡೆಯಲಿದೆ ಎಂದು ಮಠಾಧೀಶರಾದ ವಿಶ್ವೇಶ್ವರ ಸ್ವಾಮೀಜಿ ತಿಳಿಸಿದರು.
ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. 21ರಂದು ಬೆಳಗ್ಗೆ ಅರ್ಚಕರಾದ ಮೋಹನ ಮೂರ್ತಿ ಶಾಸ್ತ್ರಿ ಮತ್ತು ಬಸವ ಕುಮಾರ್ ಶಾಸ್ತ್ರಿ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ಮತ್ತು ವೀರಶೈವ ವಟುಗಳಿಗೆ ಪೂಜ್ಯ ಸಿದ್ದಲಿಂಗ ಮಹಾಸ್ವಾಮೀಜಿ ಉಪಸ್ಥಿತಿಯಲ್ಲಿ ಶಿವದೀಕ್ಷಾ ಸಂಸ್ಕಾರಗಳು ನಡೆಯಲಿವೆ ಎಂದರು.
ಬೆಳಿಗ್ಗೆ 7 ಗಂಟೆಗೆ ಷಟುಷ್ಥಲ ಧ್ವಜಾರೋಹಣ ನಡೆಯಲಿದ್ದು, ವಿವಿಧ ಮಠದ ಮಠಾಧೀಶರುಗಳಾದ ಮಹಾಂತ ಸ್ವಾಮೀಜಿ, ಸದಾಶಿವ ಸ್ವಾಮೀಜಿ, ರುದ್ರಮುನಿ ಸ್ವಾಮೀಜಿ, ಮಲ್ಲೇಶ ಸ್ವಾಮೀಜಿ, ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಮಹಾಂತ ಶಿವಲಿಂಗ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ಸಭಾ ಕಾರ್ಯಕ್ರಮದ ನಂತರ ಅರಸೀಕೆರೆ ತಾಲೂಕು ಹೊಸಳ್ಳಿ ಮತ್ತು ನಾಗತಿಹಳ್ಳಿ ಗ್ರಾಮದ ಭಜನಾ ಮಂಡಳಿಯವರಿಂದ ಭಜನೆ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭ 2016ರ ಡಿಸೆಂಬರ್ ತಿಂಗಳಲ್ಲಿ ಶ್ರೀ ಮಠದಲ್ಲಿ ಜರುಗಿದ ಶಿವಾನುಭವ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಗುತ್ತದೆ. 2016-17ರಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ವೀರಶೈವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಗುವದು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುವದು ಎಂದು ಸ್ವಾಮೀಜಿ ತಿಳಿಸಿದರು.
ಧಾರ್ಮಿಕ ಸಭಾ ಕಾರ್ಯಕ್ರಮದ ನಂತರ ಶ್ರೀ ಮಠದ 156ನೇ ಶಿವಾನುಭವ ಗೋಷ್ಠಿ ಸಮ್ಮೇಳನ ನಡೆಯಲಿದ್ದು, ದಾವಣಗೆರೆ ಹೆಬ್ಬಾಳು ವಿರಕ್ತ ಮಠದ ಮಹಾಂತ ರುದ್ರೇಶ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ. ಶಾಸಕರಾದ ಅಪ್ಪಚ್ಚು ರಂಜನ್ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಅರಕಲಗೂಡು ಸರ್ಪಭೂಷಣ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಉಪನ್ಯಾಸ ನೀಡಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ವೀರಶೈವ ಸಮಾಜದ ಶೆಟ್ರು ಕೆ.ಎನ್. ತೇಜಸ್ವಿ, ಅಕ್ಕನಬಳಗದ ಅಧ್ಯಕ್ಷರಾದ ಜಲಜಾಶೇಖರ್, ಸಮಾಜದ ಪ್ರಮುಖರಾದ ಜೆ.ಸಿ. ಶೇಖರ್, ಎಸ್.ಸಿ. ಚಿರಂತ್, ಬಿ.ಪಿ. ಶಿವಕುಮಾರ್, ಮೃತ್ಯುಂಜಯ ಉಪಸ್ಥಿತರಿದ್ದರು.