ಮಡಿಕೇರಿ, ಮೇ 20: ಜಿಲ್ಲೆಯಾದ್ಯಂತ ಕಾಡಾನೆಗಳ ಗಣತಿ ಕಾರ್ಯ ನಡೆಯುತ್ತಿದೆ. ಅರಣ್ಯ ಪ್ರದೇಶದಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಅಲೆದಾಡಿ ಗಣತಿ ಕಾರ್ಯ ಮಾಡುತ್ತಾ ಅಲ್ಲಲ್ಲಿ ಸಿಗುವ ಒಂದೆರಡು ಆನೆಗಳ ಲೆಕ್ಕ ಹಾಕುತ್ತಿದ್ದಾರೆ. ಆದರೆ ಗಜಪಡೆಗಳು ಮಾತ್ರ ರಾಜಾರೋಷವಾಗಿ ಕಾಫಿ ತೋಟಗಳಲ್ಲಿ ‘ನಾವಿಲ್ಲಿದ್ದೀವಿ’ ಅಂತ ಅಣಕಿಸುತ್ತಾ ಓಡಾಡುತ್ತಿವೆ. ‘ಶಾಲಾ ದಿನಗಳಲ್ಲಿ ಮೈದಾನದಲ್ಲಿ ಆಟವಾಡುತ್ತಿರುವ ಮಕ್ಕಳನ್ನು ಕಂಡು ಹಿಡಿಯುವ ಮಾಸ್ತರು ಬೆತ್ತ ಹಿಡಿದು ಮೆಲ್ಲನೆ ಹೋಗುವ ಸಂದರ್ಭ ಅವರ ಕಣ್ತಪ್ಪಿಸಿ ಶಾಲಾ ಹಿಂಭಾಗಕ್ಕಾಗಿ ಓಡಿ ಬಂದು ತರಗತಿ ಸೇರಿಕೊಳ್ಳುವ ಕಿಲಾಡಿ ಮಕ್ಕಳಂತೆ’ ಈ ಕಾಡಾನೆಗಳು ಕೂಡ ಅಧಿಕಾರಿಗಳ ದಂಡು ಕಾಡಿನೊಳಕ್ಕೆ ಕಾಲಿಡುವಂತೆ ಮತ್ತೆ ಮೆಲ್ಲನೆ ಓಡಿ ಬಂದು ತೋಟಗಳನ್ನು ಸೇರಿಕೊಂಡಿವೆ.

ಇದುವರೆಗೆ ಯಾವದೇ ಕಾಡಾನೆಗಳ ಕಾಟವಿಲ್ಲದಿದ್ದ ಅಭ್ಯತ್‍ಮಂಗಲ ವಿಭಾಗದಲ್ಲಿ ಈಗ ಎಲ್ಲೆಲ್ಲೂ ಆನೆಗಳು ಕಾಣಸಿಕ್ಕುತ್ತಿವೆ. ಇಲ್ಲಿ ಎ.ಎನ್. ಸುಧಿಕುಮಾರ್, ಕೃಷ್ಣಪ್ಪ, ಮಾದಪ್ಪ, ಕೆ.ಎನ್. ಗಣೇಶ್ ಅವರುಗಳ ತೋಟಗಳಲ್ಲಿ 11 ಆನೆಗಳು ಸೇರಿಕೊಂಡಿವೆ.

ಗ್ರೀನ್ ಫೀಲ್ಡ್ ತೋಟದಲ್ಲಿ 3 ಹಾಗೂ ಟಾಟಾ ಸಂಸ್ಥೆ ತೋಟದಲ್ಲಿ 5 ಆನೆಗಳಿವೆ. ಕೆಳಗೆಮನೆ ಇಂದ್ರಕುಮಾರ್, ವಾಸು ಅವರುಗಳ ತೋಟಗಳಲ್ಲಿಯೂ ಆನೆಗಳು ಬಂದು ಸೇರಿಕೊಂಡಿವೆ. ಗಣತಿದಾರರು ಕಾಡು ಬಿಟ್ಟು ಕಾಫಿ ತೋಟಗಳಲ್ಲಿ ಆನೆಗಳನ್ನು ಹುಡುಕಿದರೆ ಸರಿಯಾದ ಲೆಕ್ಕ ಸಿಗಬಹುದೆಂದು ಗ್ರಾಮಸ್ಥರು ಅಭಿಪ್ರಾಯ ಪಟ್ಟಿದ್ದಾರೆ. -ಸುಧಿ