ಮಡಿಕೇರಿ, ಮೇ 20: ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಬರುವ ಕೊಡಗು ಜಿಲ್ಲೆ ಕೃಷಿ ಪ್ರಧಾನವಾದ ಪ್ರದೇಶವಾಗಿದೆ. ಇಲ್ಲಿನ ಆರ್ಥಿಕತೆಯ ಬೆನ್ನೆಲುಬು ಪ್ರಮುಖವಾಗಿ ಕಾಫಿ ಹಾಗೂ ಇದರೊಂದಿಗೆ ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿ ಕಾಣುತ್ತಿರುವ ಕರಿಮೆಣಸು ಮಾತ್ರ. ಕೃಷಿ ಪ್ರಧಾನ ಜಿಲ್ಲೆಯಲ್ಲಿ ಈ ಎರಡು ಬೆಳೆಗಳು ಪ್ರಾಮುಖ್ಯತೆ ಕಾಣುವ ಮುನ್ನ ಇದ್ದದ್ದು ಭತ್ತದ ಕೃಷಿ ಮಾತ್ರ. ಗಮನಿಸಬೇಕಾದ ವಿಚಾರವೆಂದರೆ ಈ ಮೂರೂ ಬೆಳೆಗಳನ್ನು ವಾರ್ಷಿಕವಾಗಿ ಕೊಡಗಿನಲ್ಲಿ ಒಮ್ಮೆ ಮಾತ್ರ ಪಡೆಯಲು ಸಾಧ್ಯ. ಇಂತಹ ಪರಿಸ್ಥಿತಿಯಲ್ಲಿ ಇಲ್ಲಿನ ಸಾಂಪ್ರದಾಯಿಕ ಬೆಳೆಯೊಂದಿಗೆ ಪರ್ಯಾಯ ಬೆಳೆಗಳ ಮೂಲಕ ಆರ್ಥಿಕವಾಗಿ ಸುಭದ್ರತೆ ಕಾಣಲು ಹಾಗೂ ಹೊಸ ಆವಿಷ್ಕಾರಗಳನ್ನು ಬೆಳೆಗಾರರಿಗೆ ಪರಿಚಯಿಸಿ ಈ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಆಯೋಜಿಸ ಲಾಗಿರುವ ಮೂರು ದಿನಗಳ ಅವಧಿಯ ರಾಷ್ಟ್ರೀಯ ಸಮ್ಮೇಳನ ಹೊಸ ಪ್ರಯತ್ನವಾಗಿದ್ದು, ಚೇತೋಹಾರಿ ಫಲಿತಾಂಶ ಕಾಣುವ ನಿರೀಕ್ಷೆ ಮೂಡಿಸುತ್ತಿದೆ.
ನಗರದ ಗಾಂಧಿ ಮೈದಾನದಲ್ಲಿ ಚೆಟ್ಟಳ್ಳಿಯ ತೋಟಗಾರಿಕಾ ಪ್ರಾಯೋಗಿಕಾ ಕೇಂದ್ರವು ಐ.ಸಿ.ಆರ್., ಐ.ಐ.ಹೆಚ್.ಆರ್. ಬೆಂಗಳೂರು ಮತ್ತು ತೋಟಗಾರಿಕಾ ಅಭಿವೃದ್ಧಿ ಸೊಸೈಟಿಯ ಸಹಕಾರದೊಂದಿಗೆ ಜಿಲ್ಲೆಯ ಪ್ರಮುಖ ಬೆಳೆಗಳಾದ ಕಾಫಿ ಮತ್ತು ಕರಿಮೆಣಸಿನೊಂದಿಗೆ ಇದಕ್ಕೆ ಪೂರಕವಾಗಿ ಪರ್ಯಾಯವಾಗಿ ತೋಟಗಾರಿಕಾ ಬೆಳೆಗಳನ್ನು ಬೆಳೆದು ಆರ್ಥಿಕ ಸಬಲೀಕರಣದ ಬಗ್ಗೆ ಜಾಗೃತಿ - ಕಾಳಜಿ ಮೂಡಿಸಲು ಮೂರು ದಿನಗಳ ಅವಧಿಯ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿದೆ.
ದೇಶದ ವಿವಿಧೆಡೆಗಳಲ್ಲಿ ಹಾಗೂ ವಿದೇಶಗಳಲ್ಲಿನ ವಿವಿಧ ತೋಟ ಗಾರಿಕಾ ಬೆಳೆಗಳ ತಳಿಗಳನ್ನು ಇಲ್ಲಿ ಪರಿಚಯಿಸಲಾಗುತ್ತಿದೆ. ವಿವಿಧ ರೀತಿಯ ಹಣ್ಣು ಹಂಪಲುಗಳು, ತರಕಾರಿಗಳು, ಕೀಟನಾಶಕ, ಗೊಬ್ಬರ, ಯಂತ್ರೋಪಕರಣಗಳು, ಜೇನು ಕೃಷಿ, ಬೀಜ ಹಾಗೂ
(ಮೊದಲ ಪುಟದಿಂದ) ಕಸಿ ಗಿಡಗಳು ಇತ್ಯಾದಿಗಳನ್ನು ಇಲ್ಲಿ ಪ್ರಾತ್ಯಕ್ಷಿತೆಯೊಂದಿಗೆ ವಿವರ ಮಾಹಿತಿ ಸಹಿತ ಬೆಳೆಗಾರರಿಗೆ ಪರಿಚಯಸಲಾಗುತ್ತಿದೆ. ಬೇರೆ ಬೇರೆ ಕಡೆಗಳಲ್ಲಿ ವಿವಿಧ ಸಂಶೋಧನಾ ಸಂಸ್ಥೆಗಳು, ವಿಜ್ಞಾನಿಗಳು, ಅನುಭವಿ ಕೃಷಿಕರು ಬೆಳೆದಿರುವ, ಸಂಶೋಧನೆ ಮಾಡಿರುವ ಅಂಶಗಳನ್ನು ಇಲ್ಲಿ ಪ್ರತ್ಯಕ್ಷವಾಗಿ ಪ್ರದರ್ಶಿಸುವದರೊಂದಿಗೆ ಆಸಕ್ತರಿಗೆ ಅಗತ್ಯ ಮಾಹಿತಿಗಳನ್ನು ಒದಗಿಸಲಾಗುತ್ತಿದೆ. ಜಿಲ್ಲೆಯ ಪ್ರಮುಖ ಬೆಳೆಗಳಾದ ಕಾಫಿ, ಕರಿಮೆಣಸು ಧಾರಣೆ ಕುಸಿಯುತ್ತಿದೆ. ಇಂತಹ ಸನ್ನಿವೇಶದಲ್ಲಿ ಸಾಂಪ್ರದಾಯಿಕವಾದ ಈ ಬೆಳೆಗಳೊಂದಿಗೆ ಪರ್ಯಾಯವಾಗಿ ಇತರ ತೋಟಗಾರಿಕಾ ಬೆಳೆಗಳನ್ನು ಅಭಿವೃದ್ಧಿಪಡಿಸಿದರೆ ಆರ್ಥಿಕವಾಗಿ ಸದೃಢಗೊಳ್ಳಬಹುದು ಎಂಬದು ಆಯೋಜಕರ ಚಿಂತನೆಯಾಗಿದೆ.
ಕೊಡಗು ಸೇರಿದಂತೆ ವಿವಿಧೆಡೆಗಳ 12 ಸಂಶೋಧನಾ ಕೇಂದ್ರಗಳ ಸಂಶೋಧನೆಗಳನ್ನು ಪ್ರತಿಬಿಂಬಿಸುವ 41 ಮಳಿಗೆಗಳು ಇಲ್ಲಿ ಗಮನ ಸೆಳೆಯುತ್ತಿವೆ. ಈ ಪ್ರದರ್ಶನ - ಮಾರಾಟ ಮಳಿಗೆಗಳ ಮೂಲಕ ಆಸಕ್ತರು ಇದರ ಪ್ರಯೋಜನ ಪಡೆದುಕೊಳ್ಳುವ ಅವಕಾಶವಿದ್ದು, ಈ ಸಮ್ಮೇಳನ ಸೋಮವಾರದ ತನಕ ಮುಂದುವರಿಯಲಿದೆ. ಅನುಭವಿಗಳು, ವಿಜ್ಞಾನಿಗಳು, ಅಧಿಕಾರಿಗಳು ಈ ಬಗ್ಗೆ ವಿಚಾರ ಸಂಕಿರಣಗಳ ಮೂಲಕವೂ ಮಾಹಿತಿ ಒದಗಿಸುತ್ತಿದ್ದಾರೆ. ವಿವಿಧ ರೀತಿಯಲ್ಲಿ ಬೆಳೆದಿರುವ ವಿವಿಧ ತಳಿಗಳ ಉತ್ಪನ್ನಗಳು ಗಮನ ಸೆಳೆಯುತ್ತಿವೆ. ದೇಶದ ವಿವಿಧೆಡೆಗಳಲ್ಲಿ ಹಲವಾರು ರೀತಿಯ ಸಂಶೋಧನೆಗಳು ನಡೆದಿವೆ. ಈ ಸಂಶೋಧನೆಗಳು ವಿಮರ್ಶೆ - ಸಲಹೆಗಳ ಮೂಲಕ ಯಶಸ್ವಿಯಾಗಿ ಅನುಷ್ಠಾನಗೊಳ್ಳಬೇಕಿದ್ದು, ಬೆಳೆಗಾರರ ಪಾಲ್ಗೊಳ್ಳುವಿಕೆ ಪ್ರಮುಖ ಎಂಬದು ಆಯೋಜಕರ ಅಭಿಮತ.
ಸಮ್ಮೇಳನ ಉದ್ಘಾಟನೆ : ಹೊಸ ಪ್ರಯತ್ನದ ಕಾರ್ಯಕ್ರಮ ಇಂದು ನಗರದ ಗಾಂಧಿ ಮೈದಾನದಲ್ಲಿ ಉದ್ಘಾಟನೆಗೊಂಡಿತು.
‘ತೋಟಗಾರಿಕಾ ಕ್ಷೇತ್ರದಲ್ಲಿ ಶೇ 30ರಿಂದ ಶೇ 40ರಷ್ಟು ಮಾತ್ರ ಗುಣಮಟ್ಟದ (‘ಎ’ ದರ್ಜೆ) ಉತ್ಪನ್ನವನ್ನು ಬೆಳೆಯಲಾಗುತ್ತದೆ’ ಎಂದು ಭಾರತೀಯ ಕೃಷಿ ಅನುಸಂಧಾನ ಸಂಸ್ಥೆಯ ಉಪ ಮಹಾ ನಿರ್ದೇಶಕ (ತೋಟಗಾರಿಕಾ ವಿಭಾಗ) ಡಾ.ಎ.ಕೆ. ಸಿಂಗ್ ವಿಷಾದಿಸಿದರು.
‘ಪೂರ್ಣ ಪ್ರಮಾಣದಲ್ಲಿ ಎ ದರ್ಜೆಯ ಉತ್ಪನ್ನವನ್ನು ಬೆಳೆಯಲು ಪ್ರಯತ್ನಿಸಬೇಕು. ಆಗ ಮಾತ್ರ ಬೆಳೆಗಾರರು ಲಾಭ ಗಳಿಸಲು ಸಾಧ್ಯವಿದೆ. ರೈತರ ಆದಾಯ ಹಾಗೂ ಬೆಳೆಗಳ ಇಳುವರಿಯನ್ನು ದುಪ್ಪಟ್ಟು ಮಾಡಬೇಕೆಂಬದು ಪ್ರಧಾನಿ ನರೇಂದ್ರ ಮೋದಿ ಕನಸು. ಆ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆಯೂ ಪ್ರಯತ್ನಿಸಬೇಕು’ ಎಂದು ಕಿವಿಮಾತು ಹೇಳಿದರು.
‘ಪಶ್ಚಿಮಘಟ್ಟವು ತೋಟಗಾರಿಕೆ ಬೆಳೆಗಳಿಗೆ ಸೂಕ್ತ ಸ್ಥಳ. ಸಾಂಪ್ರದಾಯಿಕ ಕೃಷಿ ವಿಧಾನದೊಂದಿಗೆ ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡರೆ ವರದಾನವಾಗಲಿದೆ. ಬರೀ ಬೆಳೆಯುವದು ಮಾತ್ರ ಕೆಲಸವಲ್ಲ; ಗ್ರಾಹಕರಿಗೆ ತಾಜಾ ಹಣ್ಣುಗಳನ್ನು ತಲುಪಿಸುವದೂ ಅಷ್ಟೇ ಪ್ರಮುಖ’ ಎಂದು ಎಚ್ಚರಿಸಿದರು.
‘50 ವರ್ಷಗಳಿಂದ ತೋಟಗಾರಿಕಾ ಪ್ರಾಯೋಗಿಕ ಕೇಂದ್ರವು ರೈತರ ಅಭ್ಯುದಯಕ್ಕೆ ಹೊಸ ಸಂಶೋಧನೆಗಳನ್ನು ಮಾಡುತ್ತಿದೆ. ಕೆಲವು ಸಂಶೋಧನೆಗಳು ಆಯಾ ಪ್ರದೇಶದ ಹವಾಗುಣಕ್ಕೆ ಒಗ್ಗಿಕೊಳ್ಳುವ ಸಾಧ್ಯತೆ ಕಡಿಮೆ ಇರಬಹುದು. ಆಗ ರೈತರಲ್ಲಿ ಅರಿವು ಮೂಡಿಸುವದು ಅಗತ್ಯ. ತೋಟಗಾರಿಕೆ ಬೆಳೆ ಬೆಳೆಯಲು ಸಾಕಷ್ಟು ಸೌಲಭ್ಯಗಳಿದ್ದು ರೈತರು ಅವುಗಳನ್ನು ಪಡೆದುಕೊಂಡು ಉತ್ಕೃಷ್ಟವಾದ ಬೆಳೆ ಮಾಡಬೇಕು. ಕೃಷಿ ಸಂಶೋಧಕರ ಸಲಹೆ, ಸೂಚನೆ ಪಡೆದುಕೊಳ್ಳಬೇಕು’ ಎಂದು ಹೇಳಿದರು.
ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಎಂ.ಆರ್. ದಿನೇಶ್ ಮಾತನಾಡಿ, ‘ಕೊಡಗಿನ ಪ್ರಮುಖ ವಾಣಿಜ್ಯ ಬೆಳೆ ಕಾಫಿ. ಹಿಂದೆಲ್ಲ ಕಿತ್ತಳೆಯಿಂದಲೂ ಆದಾಯ ಬರುತ್ತಿತ್ತು. ಆದರೆ, ನಾನಾ ಕಾರಣಕ್ಕೆ ಕಿತ್ತಳೆ ಮಾಯವಾಗಿದೆ. ಇದಕ್ಕೆಲ್ಲಾ ಕಾರಣ ಪರಿಸರ ಸ್ನೇಹಿ ಕೃಷಿ ವಿಧಾನ ಅಳವಡಿಸಿಕೊಳ್ಳದೇ ಇರುವದು. ಪರಿಸರ ಸ್ನೇಹಿ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಆದಾಯ ಹೆಚ್ಚಳದ ಜತೆಗೆ, ಉತ್ತಮ ಇಳುವರಿಯೂ ಸಿಗಲಿದೆ’ ಎಂದು ಸಲಹೆ ನೀಡಿದರು.
‘ಕಾಫಿ, ಕಾಳುಮೆಣಸಿನೊಂದಿಗೆ ಜೇನುಕೃಷಿಯನ್ನು ಕೊಡಗಿನಲ್ಲಿ ಮಾಡಲಾಗುತಿತ್ತು. ಇದೀಗ ಜೇನುಕೃಷಿ ಕಡಿಮೆ ಆಗಿದೆ. ಬಹುಬೆಳೆ ಪದ್ಧತಿಯನ್ನು ಅಳವಡಿಸಿಕೊಂಡರೆ ಆದಾಯ ಜತೆಗೆ, ಬೇರೆ ಬೆಳೆಗಳಿಗೂ ಪೂರಕ ವಾತಾವರಣ ಸಿಗಲಿದೆ. ಕೃಷಿ ವಿಜ್ಞಾನಿಗಳ ಸಂಶೋಧನೆಗೆ ರೈತರಿಂದ ವಿಮರ್ಶೆ ಬರಬೇಕು. ಆಗಮಾತ್ರ ಮತ್ತಷ್ಟು ಪರಿಣಾಮಕಾರಿ ಸಂಶೋಧನೆ ತರಲು ಸಾಧ್ಯವಿದೆ. ರೈತರು ಸಂಶೋಧನಾ ಕೇಂದ್ರಗಳಿಗೆ ಆಗಾಗ್ಗೆ ಭೇಟಿ ನೀಡಬೇಕು’ ಎಂದು ಕೋರಿದರು.
ಪ್ರಗತಿಪರ ಕೃಷಿಕ ಬೋಸ್ ಮಂದಣ್ಣ ಮಾತನಾಡಿ, ಕಾಫಿಯೊಂದಿಗೆ ಬಹುಬೆಳೆ ಪದ್ಧತಿ ಅನುಸರಿಸುವದು ಒಳ್ಳೆಯದು. ಭತ್ತದ ಬೆಳೆದ ಬಳಿಕ ಆರು ತಿಂಗಳು ಗದ್ದೆಗಳು ಖಾಲಿ ಉಳಿಯುತ್ತವೆ. ಈ ಸಂದರ್ಭದಲ್ಲಿ ನೀರಾವರಿ ವ್ಯವಸ್ಥೆ ಕಲ್ಪಿಸಿಕೊಂಡು ತರಕಾರಿ, ಹೂವಿನ ಬೆಳೆ ಮಾಡಲು ಸಾಧ್ಯವಿದೆ. ಪ್ರತಿ ವಾರ ಆದಾಯ ಬರುವಂತೆ ನೋಡಿಕೊಳ್ಳಬೇಕು. ಆಗ ಮಾತ್ರ ಪ್ರಗತಿಪರ ಕೃಷಿಕರಾಗಲು ಸಾಧ್ಯವಿದೆ’ ಎಂದು ನುಡಿದರು.
ಸಹಾಯಕ ಮಹಾ ನಿರ್ದೇಶಕ (ತೋಟಗಾರಿಕಾ ವಿಭಾಗ) ಡಾ.ಜಾನಕಿ ರಾಮ್, ಪಾರ್ಥ ಸಾರಥಿ, ಚೆಂಗಪ್ಪ, ಸೋಮ್‍ದತ್ ಹಾಜರಿದ್ದರು. ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ, ಪ್ರಗತಿಪರ ಕೃಷಿಕರಾದ ಛಾಯಾ ನಂಜಪ್ಪ, ವೀರಅರಸು, ಪ್ರೇಮಾ ಗಣೇಶ್ ಅವರನ್ನು ಸನ್ಮಾನಿಸಲಾಯಿತು.