ಕುಶಾಲನಗರ, ಮೇ 20: ಜಲಮೂಲಗಳ ಸಂರಕ್ಷಣೆಗೆ ಪ್ರತಿಯೊಬ್ಬ ನಾಗರಿಕನು ಕೈಜೋಡಿಸಬೇಕಾಗಿದೆ ಎಂದು ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಕರೆ ನೀಡಿದ್ದಾರೆ.
ಕುಶಾಲನಗರದಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಮತ್ತು ಯುವಬ್ರಿಗೇಡ್ ಕಾರ್ಯಕರ್ತರ ಆಶ್ರಯದಲ್ಲಿ ಕಾವೇರಿ ನದಿ ಸ್ವಚ್ಛತೆ ಹಾಗೂ ಗಿಡ ನೆಡುವ ಮೈತ್ರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕೊಳವೆ ಬಾವಿಗಳ ಬಳಕೆಯ ನಂತರದ ದಿನಗಳಲ್ಲಿ ನದಿ ಮೂಲಗಳ ಅವನತಿ ಪ್ರಾರಂಭಗೊಂಡಿರುವದು ಆತಂಕ ತಂದಿದೆ. ನೀರಿನ ಮೌಲ್ಯದ ಅರಿವು ಕ್ಷೀಣಿಸುತ್ತಿರುವದು ಇತ್ತೀಚಿನ ದಿನಗಳ ದುರಂತ ವಿಷಯವಾಗಿದೆ ಎಂದರು.
ನೀರು ರಾಷ್ಟ್ರೀಯ ಸಂಪತ್ತು ಎಂದು ಪರಿಗಣಿಸಲಾಗಿದ್ದು ಅದರ ದುರುಪಯೋಗ ಸಲ್ಲದು. ಜನರು ಸರಕಾರದ ಯೋಜನೆಗಳಿಗೆ ಕಾಯದೆ ಜಲಸಂಪತ್ತಿನ ರಕ್ಷಣೆ ಮಾಡಬೇಕಾಗಿದೆ. ಸರಕಾರ ದಂಡ, ಶಿಕ್ಷೆ ವಿಧಿಸುವ ಮೂಲಕ ನೀರನ್ನು ಕಲುಷಿತಗೊಳಿಸುವ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್ ಮಾತನಾಡಿ, ಸಂಘ ಸಂಸ್ಥೆಗಳ ಮೂಲಕ ಜನರಿಗೆ ನದಿ ಹಾಗೂ ಪರಿಸರದ ಜಾಗೃತಿ ಮೂಡಿಸುವ ಕೆಲಸವಾಗಬೇಕಾಗಿದೆ. ಕೊಡಗು ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿಸುವ ಯೋಜನೆ ಅರಣ್ಯ ಇಲಾಖೆ ಕೈಗೆತ್ತಿಕೊಂಡಿದ್ದು ಮುಂದಿನ 3 ವರ್ಷಗಳ ಅವಧಿಯೊಳಗೆ ಸ್ವಚ್ಛ ಕಾವೇರಿ ನಿರ್ಮಾಣವಾಗುವ ಸಾಧ್ಯತೆ ಬಗ್ಗೆ ಆಶಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸಂಚಾಲP ಎಂ.ಎನ್. ಚಂದ್ರಮೋಹನ್ ಮಾತನಾಡಿ, ಕೊಡಗು ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಪರಿಸರದ ಬಗ್ಗೆ ವೈಯಕ್ತಿಕವಾಗಿ ಕಾಳಜಿ ವಹಿಸಬೇಕಾಗಿದೆ. ಜಿಲ್ಲೆಯ ಪರಿಸರ ಸಂರಕ್ಷಣೆಯಲ್ಲಿ ತಮ್ಮ ಜವಾಬ್ದಾರಿ ನಿಭಾಯಿಸಬೇಕಾಗಿದೆ ಎಂದರು.
ಈ ಸಂದರ್ಭ ತಮಿಳುನಾಡು ರಾಜ್ಯದ ಹಲವೆಡೆ ಸೇರಿದಂತೆ ಬೆಂಗಳೂರು, ಮೈಸೂರು, ಮಂಗಳೂರು ಭಾಗಗಳಿಂದ ಆಗಮಿಸಿದ ಯುವ ಬ್ರಿಗೇಡ್ ಕಾರ್ಯಕರ್ತರು ಬೆಳಿಗ್ಗೆ 6 ಗಂಟೆಯಿಂದಲೇ ಕೊಪ್ಪ ಸೇತುವೆ ಬಳಿ ಕಾವೇರಿ ನದಿಯಲ್ಲಿ ಎಸೆಯಲಾಗಿದ್ದ ತ್ಯಾಜ್ಯಗಳನ್ನು ಸಂಗ್ರಹಿಸಿ ನದಿಯ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡರು. ಸುಮಾರು 3 ಟ್ರ್ಯಾಕ್ಟರ್ಗಳಷ್ಟು ಬಟ್ಟೆ ಬರೆ, ಪೂಜಾ ಸಾಮಗ್ರಿಗಳು ನದಿಯ ಒಡಲಿನಿಂದ ತೆರವುಗೊಳಿಸಲಾಯಿತು. ಕುಶಾಲನಗರ ಪಟ್ಟಣ ಪಂಚಾಯಿತಿ ಮತ್ತು ಕೊಪ್ಪ ಗ್ರಾಮ ಪಂಚಾಯಿತಿ ಕಚೇರಿಗಳ ಪೌರ ಕಾರ್ಮಿಕರು ನದಿಯಿಂದ ಹೊರಹಾಕಿದ ತ್ಯಾಜ್ಯಗಳನ್ನು ಸಾಗಿಸಲು ಸಹಕರಿಸಿದರು.
ನಂತರ ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ಮೈತ್ರಿ ಯೋಜನೆ ಅಡಿಯಲ್ಲಿ ಕಾವೇರಿ ನದಿ ತಟದಲ್ಲಿ ನೂರಾರು ಗಿಡಗಳನ್ನು ನೆಡಲಾಯಿತು. ಯುವಬ್ರಿಗೇಡ್ ಹಾಗೂ ನದಿ ಸ್ವಚ್ಛತಾ ಆಂದೋಲನದ 75 ಕ್ಕೂ ಅಧಿಕ ಕಾರ್ಯಕರ್ತರು ಶ್ರಮದಾನದಲ್ಲಿ ದಿನವಿಡೀ ತಮ್ಮನ್ನು ತೊಡಗಿಸಿಕೊಂಡಿದ್ದರು.