ಸುಂಟಿಕೊಪ್ಪ, ಮೇ 20: ಬ್ಲೂಬಾಯ್ಸ್ ಯೂತ್ ಕ್ಲಬ್ ವತಿಯಿಂದ ಜಿ.ಯಂ.ಪಿ. ಶಾಲಾ ಮೈದಾನದಲ್ಲಿ ಆಯೋಜಿತ ಗೊಂಡಿರುವ ಡಿ.ಶಿವಪ್ಪ ಸ್ಮಾರಕ ಫುಟ್ಬಾಲ್‍ನ ಅರ್ಹತಾ ಸುತ್ತಿನ ಪಂದ್ಯಾವಳಿಯಲ್ಲಿ ಉಪ್ಪಳ, ಶೀತಲ್ ಎಫ್.ಸಿ.ಮೈಸೂರು, ಮೈಸೂರು ಬ್ಲೂಸ್ ತಂಡಗಳು ಮುಂದಿನ ಸುತ್ತಿಗೆ ಪ್ರವೇಶಿಸಿವೆ.
ಇಂದಿನ ಪಂದ್ಯಾವಳಿಯು ಶೀತಲ್ ಎಫ್.ಸಿ ಮೈಸೂರು ಮತ್ತು ಆಮ್ಮೆಟ್ಟಿ ಎಫ್.ಸಿ ಗದ್ದೆಹಳ್ಳ ತಂಡಗಳ ನಡುವೆ ನಡೆದು ಮೊದಲಾರ್ಧದಲ್ಲಿ ಶೀತಲ್ ಎಫ್.ಸಿ. ತಂಡದ ಶರತ್ 3 ಗೋಲುಗಳನ್ನು ಗಳಿಸುವ ಮೂಲಕ ತಂಡಕ್ಕೆ ಮುನ್ನಡೆ ಒದಗಿಸಿಕೊಟ್ಟರು. ದ್ವಿತೀಯಾರ್ಧದಲ್ಲಿ ಎರಡು ತಂಡಗಳು ಸಮಬಲದ ಪ್ರದರ್ಶನವನ್ನು ತೋರುವ ಮೂಲಕ ಗದ್ದೆಹಳ್ಳದ ಆಮ್ಮೆಟ್ಟಿ ತಂಡಕ್ಕೆ ಹಲವು ಅವಕಾಶಗಳು ದೊರೆತರೂ ಗೋಲುಗಳಿಸುವ ತಂಡದ ಆಟಗಾರರು ವಿಫಲತೆ ಕಂಡುಕೊಂಡ ಹಿನ್ನಲೆ 3-0 ಗೋಲು ಗಳಿಂದ ಶೀತಲ್ ಎಫ್.ಸಿ.ಮೈಸೂರು ಗೆಲುವಿನ ನಗೆ ಬೀರಿತು.
ಹೊಯ್ಸಳ ಎಫ್.ಸಿ.ಹಾಸನ ತಂಡ ಕಾರಣಾಂತರಗಳಿಂದ ಬಾರದ ಹಿನ್ನೆಲೆಯಲ್ಲಿ ಸಿಟಿಜನ್ ಸ್ಪೋಟ್ರ್ಸ್ ಉಪ್ಪಳ ತಂಡಕ್ಕೆ ಮುನ್ನಡೆ ನೀಡಲಾಯಿತು.
ಕುಶಾಲನಗರ ಲಾವೆನ್ ಹಾಗೂ ಮೈಸೂರು ಬ್ಲೂಸ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೈಸೂರು ತಂಡದ ಮುನ್ನಡೆ ಆಟಗಾರ ಮೊಸೆಸ್ 10 ನೇ ನಿಮೀಷದಲ್ಲಿ 1 ಗೋಲು ದಾಖಲಿಸುವ ಮೂಲಕ ಮುನ್ನಡೆ ಒದಗಿಸಿದರು. ಕುಶಾಲನಗರ ಲಾವೆನ್ ತಂಡದ ಆಟಗಾರರು ಬಿರುಸಿನ ಆಟಕ್ಕೆ ಇಳಿಯುತ್ತಿದ್ದಂತೆ ಮುನ್ನಡೆ ಆಟಗಾರ ಹರೀಶ್ 15 ನೇ ನಿಮಿಷದಲ್ಲಿ ಎದುರಾಳಿ ತಂಡದ ಮೇಲೆ 1 ಗೋಲುಗಳಿಸುವ ಮೂಲಕ ಸಮಬಲಗೊಳಿಸಿದರು. ನಂತರ ಎರಡು ತಂಡಗಳ ಆಟಗಾರರು ಬಿರುಸಿನ ಆಟ ನಡೆಸುವ ಮೂಲಕ ನೆರೆದಿದ್ದ ಪ್ರೇಕ್ಷಕರಿಗೆ ಕ್ರೀಡಾರಸದೌತಣ ಉಣಬಡಿಸಿದರು.
ಮೈಸೂರು ತಂಡದ ಮೊಸೆಸ್ ಕೊನೆಯ ಕ್ಷಣದಲ್ಲಿ 1ಗೋಲನ್ನು ಗಳಿಸುವ ಮೂಲಕ ಕುಶಾಲನಗರ ತಂಡವನ್ನು ಮಣಿಸಿ ಮುಂದಿನ ಸುತ್ತಿಗೆ ಆರ್ಹತೆಗಳಿಸಿತು.
ಫುಟ್ಬಾಲ್ ಪಂದ್ಯಾವಳಿಯನ್ನು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಿ.ಆರ್.ಸುಕುಮಾರ್, ಮಾಜಿ ಅಧ್ಯಕ್ಷ ಎಂ.ಎ.ಉಸ್ಮಾನ್, ಗುತ್ತಿಗೆದಾರ ಎಂ.ಟಿ.ಧನು ಕಾವೇರಪ್ಪ, ಟಿಂಬರ್ ವ್ಯಾಪಾರಿ ಶಬೀರ್, ಬ್ಲೂಬಾಯ್ಸ್ ಅಧ್ಯಕ್ಷ ಮೊಣ್ಣಪ್ಪ ಪೂಜಾರಿ ಪದಾಧಿಕಾರಿಗಳು ಚೆಂಡು ಒದೆಯುವ ಮೂಲಕ ಉದ್ಘಾಟಿಸಿದರು.