ಶನಿವಾರಸಂತೆ, ಮೇ 20: ಅಕ್ರಮವಾಗಿ 2 ಬೀಟಿ, 2 ಹೊನ್ನೆ ಮರಗಳನ್ನು ಕಡಿದು ಸಾಗಿಸುತ್ತಿದ್ದ ವೇಳೆ ಶನಿವಾರಸಂತೆ ಅರಣ್ಯ ವಲಯಾಧಿಕಾರಿ ಕೆ. ಕೊಟ್ರೇಶ್ ನೇತೃತ್ವದಲ್ಲಿ ಸಿಬ್ಬಂದಿ ಧಾಳಿ ಮಾಡಿ ಮಾಲು- ಕೃತ್ಯಕ್ಕೆ ಬಳಸಿದ್ದ ವಾಹನಗಳ ಸಹಿತ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.ಕೊಡ್ಲಿಪೇಟೆ ಹೋಬಳಿಯ ಶಿವರಳ್ಳಿ ಗ್ರಾಮದ ಪ್ರದೀಪ್ ಎಂಬವರ ಕಾಫಿ ತೋಟದಲ್ಲಿ 2 ಬೀಟಿ, 2 ಹೊನ್ನೆ ಮರಗಳನ್ನು ಅಕ್ರಮವಾಗಿ ಕಡಿದು 2 ವಾಹನಗಳಲ್ಲಿ ಹೊಳೆನರಸೀಪುರಕ್ಕೆ ಸಾಗಿಸುತ್ತಿದ್ದಾಗ, ಗಸ್ತಿನಲ್ಲಿದ್ದ ಅರಣ್ಯ ಇಲಾಖೆಗೆ ದೊರೆತ ಮಾಹಿತಿಯ ಮೇರೆ ಮಿಂಚಿನ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆಯ ಸಿಬ್ಬಂದಿ ನಡುರಾತ್ರಿ ಹೆಬ್ಬುಲುಸೆ ಗ್ರಾಮದ ರಸ್ತೆಯಲ್ಲಿ ವಾಹನಗಳನ್ನು ತಡೆದಾಗ, ವಾಹನಗಳನ್ನು ಆರೋಪಿಗಳು ನಿಲ್ಲಿಸಲಿಲ್ಲ. ಈ ವೇಳೆ ಅರಣ್ಯ ಇಲಾಖೆಯ ಸಿಬ್ಬಂದಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಗಾಬರಿಗೊಂಡ ಆರೋಪಿಗಳು ವಾಹನಗಳನ್ನು ನಿಲ್ಲಿಸಿ ಓಡಿ ಪರಾರಿ ಯಾಗಲು ಯತ್ನಿಸಿದಾಗ ಆರೋಪಿಗಳಾದ ಒಡೆಯನಪುರ ಗ್ರಾಮದ ಹೆಚ್.ವಿ. ತ್ಯಾಗರಾಜು, ಶಿವರಳ್ಳಿ ಗ್ರಾಮದ ಎಸ್.ಜಿ. ಪ್ರದೀಪ್, ಹೊಳೆನರಸೀಪುರದ ಹೆಚ್.ಎಂ. ಪ್ರಕಾಶ್ ಹಾಗೂ ಎ.ಬಿ. ರುದ್ರಸ್ವಾಮಿ ಇವರುಗಳನ್ನು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ಗೋಪಾಲಪುರ ಸೇಲಂ ಅಲಿಯಾಸ್ ಚಿಮ್ಮಿ ಕತ್ತಲೆಯಲ್ಲಿ ಓಡಿ ತಲೆ ಮರೆಸಿಕೊಂಡಿದ್ದಾನೆ. 4 ವಾಹನಗಳು, 20 ಬೀಟಿ ದಿಮ್ಮಿ, 12 ಹೊನ್ನೆ ದಿಮ್ಮಿ ಹಾಗೂ ನಾಲ್ವರು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಕಾರ್ಯಾಚರಣೆಯಲ್ಲಿ ಫಾರೆಸ್ಟರುಗಳಾದ ಸುಕ್ಕೂರ್, ಗೋವಿಂದರಾಜ್, ಶ್ರೀನಿವಾಸ್, ಅರಣ್ಯ ಸಿಬ್ಬಂದಿಗಳಾದ ನಾಗರಾಜ್, ಶೇಖರ್ ಕೃಷ್ಣಮೂರ್ತಿ, ಕೃಷ್ಣಪ್ಪ, ರಾಮಕೃಷ್ಣಶೆಟ್ಟಿ, ಶಿವರಾಜ್, ಪ್ರಕಾಶ್, ವಿಜೇಂದ್ರ ಕುಮಾರ್, ತನುಜ, ಬಿ. ರುಕ್ಮಯ್ಯ, ವೆಂಕಟೇಶ್, ಲೋಹಿತ್, ಕಾರ್ಯಪ್ಪ, ಚಾಲಕರುಗಳಾದ ಹರೀಶ್ ಕುಮಾರ್, ಭರತ್ ಪಾಲ್ಗೊಂಡಿದ್ದರು.

-ನರೇಶ್ಚಂದ್ರ.