ಮಡಿಕೇರಿ ಮೇ 20: ಕನ್ನಡೇತರ ವಿದ್ಯಾರ್ಥಿಗಳು ಕೇವಲ ಐದೇ ದಿನಗಳಲ್ಲಿ ಕನ್ನಡ ಕಲಿತು ಪ್ರದರ್ಶಿಸಿದ ವೈವಿಧ್ಯಮಯ ಕಲಾ ಕಾರ್ಯಕ್ರಮಗಳೊಂದಿಗೆ ನಗರದಲ್ಲಿ ಆಯೋಜಿಸಲ್ಪಟ್ಟಿದ್ದ ರಾಷ್ಟ್ರೀಯ ಭಾವೈಕ್ಯತಾ 8ನೇ ಸಮಾವೇಶ ಏಕತಾದ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಸಂಭ್ರಮದ ತೆರೆಬಿತ್ತು.ನಗರದ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ದಲ್ಲಿ ಶುಕ್ರವಾರ ರಾತ್ರಿ ಜರುಗಿದ ದೇಶದ ವಿವಿಧೆಡೆಗಳ ವಿದ್ಯಾರ್ಥಿ ತಂಡ ಪಾಲ್ಗೊಂಡಿದ್ದ ಸಾಂಸ್ಕøತಿಕ ವೈವಿಧ್ಯ ವಿಶಿಷ್ಟವಾಗಿ ಮೂಡಿಬಂತು. ಭಾರತದ ವಿವಿಧ ರಾಜ್ಯಗಳಿಂದ ಬಂದಿದ್ದ ಶಿಬಿರಾರ್ಥಿಗಳು ಕನ್ನಡ ನೆಲದ ಸಾಂಸ್ಕøತಿಕ ಕಲೆ ಕಲಿತು ಅಪೂರ್ವ ರೀತಿಯಲ್ಲಿ ಪ್ರದರ್ಶಿಸಿದರು,
ಸಂಗೀತಗಾರ ಬಳ್ಳಾರಿ ರಾಘವೇಂದ್ರ ಅವರಿಂದ ತರಬೇತಿ ಪಡೆದ 60 ವಿದ್ಯಾರ್ಥಿಗಳು ಜಯತಿ. ಜಯತಿ ಜಯಭಾರತ ಎಂಬ ಸಾಂಸ್ಕøತಿಕ ಕಾರ್ಯಕ್ರಮ ಪ್ರಾರಂಭಿಸಿದರು.
ಉತ್ತರ ಕರ್ನಾಟಕದ ಚಿತ್ತಾರ ಕಲಾವಿದ ಆರಾಧನಾ ಕಲೆಗಾಗಿ ರಾಷ್ಟ್ರಪ್ರಶಸ್ತಿ ಪಡೆದ ಈಶ್ವರನಾಯಕ್ ನಿರ್ದೇಶನದಲ್ಲಿ 44 ವಿದ್ಯಾರ್ಥಿಗಳು ತಾವು ಶಿಬಿರದಲ್ಲಿ ಕಲಿತು, ಚಿತ್ರಿಸಿದ ಚಿತ್ತಾರದ ಆಕರ್ಷಕ ಕಲೆಯನ್ನು ವೇದಿಕೆಯಲ್ಲಿ ಪ್ರದರ್ಶಿಸಿ ಚಪ್ಪಾಳೆ ಗಿಟ್ಟಿಸಿದರು.
ಕೊಡವ ಸಾಂಪ್ರದಾಯಿಕ ಉಮ್ಮತ್ತಾಟ್ ನೃತ್ಯವನ್ನೂ ಕೊಡವ ಸಾಂಪ್ರದಾಯಿಕ ಸೀರೆಯುಟ್ಟು ಅದ್ಬುತವಾಗಿ ಪ್ರದರ್ಶಿಸಿದ 61 ವಿದ್ಯಾರ್ಥಿನಿಯರ ತಂಡಕ್ಕೆ ಹೆಸರಾಂತ ಜಾನಪದ ಕಲಾವಿದೆ ಐಮುಡಿಯಂಡ ರಾಣಿ ಮಾಚಯ್ಯ ಮತ್ತು ತಂಡದ ನಿರ್ದೇಶನವಿತ್ತು.
ಬೊಟ್ಟೋಳಂಡ ಕಾಶಿ ಅಚ್ಚಯ್ಯ ನಿರ್ದೇಶನದಲ್ಲಿ ಕೊಡವರ ಸಾಂಪ್ರದಾಯಿತ ಬೊಳಕಾಟ್ನ್ನೂ 27 ಯುವ ವಿದ್ಯಾರ್ಥಿ ತಂಡ ಸುಂದರವಾಗಿ ಪ್ರದರ್ಶಿಸಿ ತಾವೂ ಕೊಡವ ಕಲೆಯನ್ನು ಕಲಿತ ಸಂಭ್ರಮದಲ್ಲಿ ಬೀಗಿದರು. ದುಡಿಕೊಟ್ಟ್ನಲ್ಲಿ ಚೊಟ್ಟೆಯಂಡ ಅಪ್ಪಾಜಿ, ನಾಪಂಡ ಈರಪ್ಪ ಸಹಕರಿಸಿದರು.
ಯಕ್ಷಗಾನ ಕಲಾವಿದ ಶ್ರೀನಿವಾಸ್ ಸಾಸ್ಥಾನ್ ನಿರ್ದೇಶನದಲ್ಲಿ 48 ಮಕ್ಕಳು ಕನ್ನಡನಾಡಿನ ಗಂಡು ಕಲೆಯಾದ ಯಕ್ಷಗಾನವನ್ನೂ ಅದ್ಬುತವಾಗಿ ಪ್ರದರ್ಶಿಸಿದರು.
ಕನ್ನಡ ನಾಡಿನ ಪ್ರಸಿದ್ಧ ಜಾನಪದವಾದ ಕಂಸಾಳೆಗೆ 47 ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು. ಮಲೆ ಮಹದೇಶ್ವರನನ್ನು ಸ್ಮರಿಸುವ ಚೆಲ್ಲಿದರು ಮಲ್ಲಿಗೆಯಾ ಎಂಬ ಹಾಡಿಗೆ ತಾಳ ಬೀಸುತ್ತಾ ನರ್ತಿಸಿದ ಪುಟಾಣಿ ಕಲಾವಿದರು ವಿವಿಧ ನೃತ್ಯ ಬಂಗಿಗಳ ಮೂಲಕ ಮನ ಸೆಳೆದರು. ಮಲೆ ಮಹದೇಶ್ವರ ಕಲಾ ಸಂಘದ ರೇವಣ್ಣ, ಪಾಪಣ್ಣ ತಂಡ ವಿದ್ಯಾರ್ಥಿಗಳಿಗೆ ಕಂಸಾಳೆ ತರಬೇತಿ ನೀಡಿತ್ತು. ನಿನಾಸಂ ನಿರ್ದೇಶಕ ಪ್ರಣೀತ್ ನಿರ್ದೇಶನ ಮತ್ತು ಪಯಸ್ವಿನಿ ಶೆಟ್ಟಿ ಸಹ ನಿರ್ದೇಶನದಲ್ಲಿ ಅಜ್ಜಿ ಕಥೆ ನಾಟಕ ಕೂಡ ಪ್ರದರ್ಶನದಲ್ಲಿ ಗಮನ ಸೆಳೆಯಿತು.
ಶಿಬಿರಾರ್ಥಿಗಳಿಗೆ ಐದು ದಿನ ಮುಂಜಾನೆ ಯೋಗಶಿಕ್ಷಕರಾಗಿದ್ದ ಹೆಸರಾಂತ ಯೋಗಶಿಕ್ಷಕ ಪ್ರದೀಪ್ ಅನೇಕ ಯೋಗ ಭಂಗಿಗಳ ಮೂಲಕ ಅತ್ಯಾಕರ್ಷಕ ಯೋಗ ಪ್ರದರ್ಶನ ನೀಡಿದರು.