ಶ್ರೀಮಂಗಲ, ಮೇ 21: ಜಿಲ್ಲಾ ಭಾರತೀಯ ಕಿಸಾನ್ ಸಂಘದ ಮನವಿಗೆ ಸ್ಪಂದಿಸಿ,ಉಸ್ತುವಾರಿ ಸಚಿವರ ಆಪ್ತಸಹಾಯಕ ಕದ್ದಣಿಯಂಡ ಹರೀಶ್ ಬೋಪಣ್ಣ ಅವರ ಪ್ರಯತ್ನದಿಂದ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಅವರು ವೀರಾಜಪೇಟೆ ತಾಲೂಕಿನ ನೂತನ ತಹಶೀಲ್ದಾರ್‍ರಾಗಿ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಯಾಗಿರುವ ಗೋವಿಂದರಾಜು ಅವರನ್ನು ನೇಮಿಸಲಾಗಿದೆ.

ಜಿಲ್ಲಾ ಭಾರತೀಯ ಕಿಸಾನ್ ಸಂಘದ ವತಿಯಿಂದ ತಾಲೂಕಿನ ತಹಶೀಲ್ದಾರ್ ಆಗಿರುವ ಮಹದೇವಸ್ವಾಮಿ ಅವರ ಆದೇಶಗಳನ್ನು ತಮ್ಮ ಅಧೀನದ ಅಧಿಕಾರಿ, ಸಿಬ್ಬಂದಿಗಳು ಪಾಲಿಸುತ್ತಿಲ್ಲ. ಅಧಿಕಾರಿ, ಸಿಬ್ಬಂದಿಗಳನ್ನು ನಿಯಂತ್ರಿಸಲು ಆಗುತ್ತಿಲ್ಲ. ಈ ಹಿನ್ನಲೆಯಲ್ಲಿ ಕಡತ ವಿಲೇವಾರಿ ಹಿನ್ನಡೆ ಮತ್ತು ನಾಪತ್ತೆ ಪ್ರಕರಣ ನಡೆದಿದ್ದು, ಇಲಾಖೆಯಲ್ಲಿ ದಲ್ಲಾಳಿಗಳ ಹಾವಳಿ ನಿಯಂತ್ರಿಸಲು ವಿಫಲರಾಗಿದ್ದು, ಈ ಬಗ್ಗೆ ತಹಶೀಲ್ದಾರ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಇದರಿಂದ ಜನರಿಗೆ ತೊಂದರೆಯಾಗಿದೆಯೆಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಅಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ ನೇತೃತ್ವದಲ್ಲಿ ಉಸ್ತುವಾರಿ ಸಚಿವರಿಗೆ, ಅವರ ಆಪ್ತ ಸಹಾಯಕ ಕದ್ದಣಿಯಂಡ ಹರೀಶ್ ಬೋಪಣ್ಣ ಅವರ ಮೂಲಕ ಮನವಿ ಸಲ್ಲಿಸಲಾಗಿತ್ತು. ಹರೀಶ್ ಬೋಪಣ್ಣ ಅವರ ಪ್ರಯತ್ನದಿಂದ ಮನವಿಗೆ ಸ್ಪಂದಿಸಿದ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಅವರು ಹೊಸ ತಹಶೀಲ್ದಾರ್ ಅವರನ್ನು ಇಂದಿನಿಂದಲೇ ಕರ್ತವ್ಯಕ್ಕೆ ನಿಯೋಜಿಸಿದ್ದಾರೆ ಎಂದು ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ರಾಜೀವ್ ಬೋಪಯ್ಯ ತಿಳಿಸಿದ್ದಾರೆ.