ಮಡಿಕೇರಿ, ಮೇ 21: ನಗರದ ಗಾಂಧಿಮೈದಾನದಲ್ಲಿ ಆಯೋಜಿತ ತೋಟಗಾರಿಕಾ ಬೆಳೆಗಳ ಪ್ರದರ್ಶನದಲ್ಲಿ ರಾಜ್ಯದ ವಿವಿಧೆಡೆಗಳ ತೋಟಗಾರಿಕೆ, ಕೃಷಿ ಸಂಬಂಧಿತ ಬೆಳೆಗಳು, ಯಂತ್ರೋಪಕರಣಗಳು ಜಿಲ್ಲೆಯ ಕೃಷಿಕರ ಗಮನ ಸೆಳೆದಿದೆ.ಕೊಡಗು ಜಿಲ್ಲೆಯಾದ್ಯಂತ ಕೃಷಿ ಸಂಬಂಧಿತ ವಿವಿಧ ಸಂಸ್ಥೆಗಳು, ಇಲಾಖೆಗಳ ಪ್ರದರ್ಶನ ಮಳಿಗೆಗಳು ಎರಡನೇ ದಿನವೂ ಕಿಕ್ಕಿರಿದು ಕೃಷಿಕರ ಮನ ಸೆಳೆಯಿತು. ಶಿವಮೊಗ್ಗದ ಕೃಷಿ ತೋಟಗಾರಿಕಾ ವಿಶ್ವವಿದ್ಯಾನಿಲಯ ಮತ್ತು ಪೆÇನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಮಳಿಗೆಯಲ್ಲಿ ಮೂಲ ಜೇನು, ಲಿಚಿ ಜೇನು, ನೇರಳೆ ಜೇನು ಸೇರಿದಂತೆ ವಿವಿಧ ರೀತಿಯ ಜೇನಿನ ಪ್ರದರ್ಶನ, ಜೇನು ಪೆಟ್ಟಿಗೆಗಳು ಕೂಡ ಗಮನ ಸೆಳೆಯಿತು.

ತುಮಕೂರಿನ ಹೀರೆಹಳ್ಳಿಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ವತಿಯಿಂದ ಅಪರೂಪದ ಸಿಹಿ ಹಲಸು ಸಂದರ್ಶಕರ ಬಾಯಲ್ಲಿ ನೀರೂರಿಸಿದರೆ, ಡ್ರಾಗನ್ ಫ್ರ್ರೂಟ್ ಎಂಬ ಹಣ್ಣಿನ ತಳಿಯು ತನ್ನ ವಿಭಿನ್ನತೆಯ ಮೂಲಕ ಆಕರ್ಷಿಸಿತು. ವಿವಿಧ ರೀತಿಯ ಹಣ್ಣುಗಳು ಈ ಕೇಂದ್ರದ ಮಳಿಗೆಯಲ್ಲಿ ಕಂಡುಬಂದವು.

ಅಪ್ಪಂಗಳದ ಭಾರತೀಯ ಸಂಬಾರ ಮಂಡಳಿಯ ಮಳಿಗೆಯಲ್ಲಿ ಜಾಯಿಕಾಯಿ, ಕರಿಮೆಣಸು, ಏಲಕ್ಕಿ, ಸರ್ವ ಸಂಬಾರ, ಕಾಚಂಪುಳಿ ಸೇರಿದಂತೆ ವಿವಿಧ ರೀತಿಯ ಹಣ್ಣು, ಸಂಬಾರ ಪದಾರ್ಥಗಳು ಪ್ರದರ್ಶಿಸಲ್ಪಟ್ಟವು.

ಕೊಡಗು ಜಿಲ್ಲೆಯ ಅರಣ್ಯ ಇಲಾಖೆಯ ಮಳಿಗೆಯಲ್ಲಿ ಶಿವಾನಿ, ನೇರಳೆ, ಮಹಾಗನಿ, ಸಲೇಸಿಯಾ,ಕಿರಾಲ ಬೋಗಿ ಸೇರಿದಂತೆ ಅನೇಕ ಅಪರೂಪದ ವೃಕ್ಷಗಳಿಗೆ ಸಂಬಂಧಿಸಿದಂತೆ ಸಸಿಗಳನ್ನು ಪ್ರದರ್ಶಿಸಲಾಗಿತ್ತು.

ಕೊಡಗು ಜಿಲ್ಲೆಯ ತೋಟಗಾರಿಕಾ ಇಲಾಖೆಯಿಂದ ಜಿಲ್ಲೆಯಲ್ಲಿನ ವಿವಿಧ ತೋಟಗಾರಿಕಾ ಬೆಳೆಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡಲಾಯಿತು. ಗೋಣಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರದಿಂದ ಇತ್ತೀಚಿನ ಸಂಶೋಧನೆಗೆ ಸಂಬಂಧಿಸಿದಂತೆ ಮಾಹಿತಿ, ಪ್ರದರ್ಶನ ಕೂಡ ರೈತರ ಗಮನ ಸೆಳೆಯಿತು.

ಪರಿಸರ ಸ್ನೇಹಿಯಾದ ಹೂಕುಂಡಗಳ ಪ್ರದರ್ಶನವೂ ವಿಭಿನ್ನವಾಗಿತ್ತು. ಗಟ್ಟಿಯಾದ ಸೆಣಬು ನಾರಿನಿಂದ ತಯಾರಿಸಿದ ಹೂಕುಂಡಗಳು ಭವಿಷ್ಯದಲ್ಲಿ ಮಣ್ಣಿನ ಕುಂಡಗಳಿಗೆ ಪ್ರಬಲ ಪೈಪೆÇೀಟಿ ನೀಡುವ ಸಾಧ್ಯತೆಯೂ ವ್ಯಕ್ತವಾಗುವಂತೆ ಸೆಣಬು, ತೆಂಗಿನ ನಾರಿನ ಕುಂಡಗಳು ಮನಸೆಳೆದವು. ಯಂತ್ರಗಳಿಂದ ತಯಾರಾದ ನಾರಿನ ಉತ್ಪನ್ನಗಳ ಪೈಕಿ ಮಹಿಳೆಯರ ಕೈಚೀಲ, ತಟ್ಟೆಗಳು, ಕೃಷಿ ಸಂಬಂಧಿತ ವಸ್ತುಗಳು ವಿಭಿನ್ನವಾಗಿದ್ದವು.

ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಕೃಷಿಯೋಗದ ಮಹತ್ವದ ಬಗ್ಗೆ ಸಂದರ್ಶಕರಿಗೆ ಅರಿವು ಮೂಡಿಸಲಾಯಿತು. ಕೃಷಿ ಯೋಗಪದ್ದತಿಯಿಂದ ಹೆಚ್ಚಿನ ಕೃಷಿ ಫಸಲು ಸಾಧ್ಯ ಎಂಬ ಮಾಹಿತಿ ನೀಡಲಾಯಿತು. ಕೊಡಗಿನಲ್ಲಿ ದಶಕಗಳ ಇತಿಹಾಸ ಹೊಂದಿರುವ ಕಾಫಿ- ಕರಿಮೆಣಸು ಸಂಸ್ಕರಣಾ ಘಟಕ ಆದಂ ಸಂಸ್ಥೆಯ ಮಳಿಗೆಯೂ ಪ್ರದರ್ಶನದಲ್ಲಿತ್ತು. ಎಲ್ಲಕ್ಕಿಂತ ವಿಶೇಷವಾಗಿ ಬೆಂಗಳೂರು ತೋಟಗಾರಿಕಾ ಕೇಂದ್ರದ ಮಾವಿನ ಪ್ರದರ್ಶನ ಸಂದರ್ಶಕರನ್ನು ಆಕರ್ಷಿಸಿತು. 220 ವಿವಿಧ ರೀತಿಯ ಮಾವಿನ ತಳಿಗಳನ್ನು ಪ್ರದರ್ಶನದಲ್ಲಿರಿಸಲಾಗಿದ್ದು, ಇದರೊಂದಿಗೆ ಜರ್ಬೇರಾ, ಸುಗಂಧರಾಜ, ಆರ್ಕಾ ಅಶ್ವ, ಆರ್ಕಾ ಕೃಷಿಕ, ಆರ್ಕಾ ನೇಸರ ಮುಂತಾದ ಪುಪ್ಪಗಳ ತಳಿಗಳೂ ವಿಭಿನ್ನವಾಗಿದೆ. 1.50 ಕೆ.ಜಿ. ತೂಕವಿರುವ ಮಾವಿನ ಹಣ್ಣಿನ ಪ್ರದರ್ಶನವೂ ಇಲ್ಲಿದೆ. ಮಾವು ಕೃಷಿಗೆ ಆದ್ಯತೆ ನೀಡಲಾಗಿದೆ ಎಂದು ವಿಭಾಗದ ಮುಖ್ಯಸ್ಥೆ ಡಾ.ಕೆ. ಅಚಲಪರಿಪೂರ್ಣ ಮಾಹಿತಿ ನೀಡಿದರು.

ಕೊಡಗಿನ ಗೃಹ ಉತ್ಪನ್ನಗಳು, ಕೃಷಿ ಯಂತ್ರೋಪಕರಣಗಳು, ರಾಸಾಯನಿಕ ಸೇರಿದಂತೆ ಬೆಳೆಗಳಿಗೆ ಸಂಬಂಧಿಸಿದಂತೆ ವಿವಿಧ ರೀತಿಯ 41 ಮಳಿಗೆಗಳು ತೋಟಗಾರಿಕಾ ಪ್ರದರ್ಶನದಲ್ಲಿ ಸಾರ್ವಜನಿಕರನ್ನು ಆಕರ್ಷಿಸುತ್ತಿದೆ. ಚೆಟ್ಟಳ್ಳಿ ತೋಟಗಾರಿಕಾ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಐ.ಎನ್. ದೊರೆಯಪ್ಪ ಗೌಡ, ತುಮಕೂರಿನ ಹೀರೆಹಳ್ಳಿಯ ತೋಟಗಾರಿಕಾ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ಕರುಣಾಕರ್, ಚೆಟ್ಟಳ್ಳಿಯ ವಿಜ್ಞಾನಿಗಳಾದ ಡಾ.ಸೆಂಥಿಲ್. ಡಾ.ಶಂಕರ್, ಮುರಳೀಧರ್, ಪ್ರಶಾಂತ್ ಸೇರಿದಂತೆ ತೋಟಗಾರಿಕಾ ತಜ್ಞರು ಪ್ರದರ್ಶನ ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ತೋಟಗಾರಿಕಾ ಬೆಳೆಗಳ ಪ್ರದರ್ಶನ ತಾ. 22ರಂದು (ಇಂದು) ಮುಕ್ತಾಯಗೊಳ್ಳಲಿದೆ.