ಮಡಿಕೇರಿ, ಮೇ 21: ಭ್ರಷ್ಟರು, ಶ್ರೀಮಂತರು ಮತ್ತು ರಾಜಕಾರಣಿಗಳು ಆಳುತ್ತಿರುವ ವ್ಯವಸ್ಥೆಯಲ್ಲಿ ಅಸಮಾನತೆ ಹೆಚ್ಚುತ್ತಿದೆ ಎಂದು ಮಂಗಳೂರಿನ ಹಿರಿಯ ನ್ಯಾಯವಾದಿ ಮಾನವ ಹಕ್ಕು ಹೋರಾಟಗಾರ ದಿನೇಶ್ ಹೆಗ್ಡೆ ಉಳೇಪಾಡಿ ಹೇಳಿದ್ದಾರೆ. ಅವರು ಇಂದು ಮಡಿಕೇರಿಯ ಹೆರಿಟೇಜ್ ಹೊಟೇಲ್ ಸಭಾಂಗಣದಲ್ಲಿ ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಕೊಡಗು ವಿಭಾಗ ಏರ್ಪಡಿಸಿದ್ದ “ನಾಗರಿಕ ಹಕ್ಕುಗಳ ಜಾಗೃತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು. ನಾಗರಿಕÀ ಹಕ್ಕುಗಳ ಅರಿವು ಪ್ರತಿಯೊಬ್ಬರಿಗೂ ಘನತೆಯ ಬದುಕನ್ನು ನೀಡುತ್ತದೆ. ನಾಗರಿಕರ ಹಕ್ಕುಗಳ ಸಂರಕ್ಷಣೆ ಎಂಬದು ಆಯಾ ಸರಕಾರಗಳ ಕರ್ತವ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಬೆಂಗಳೂರಿನ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸಹಾಯಕರಾದ ಅಕ್ಬರಲಿಯವರು ಮಾತನಾಡಿ, ಭ್ರಷ್ಟಮುಕ್ತ ಪಾರದರ್ಶಕ ವ್ಯವಸ್ಥೆ ತರುವಲ್ಲಿ ನಾಗರಿಕರ ಪಾಲು ಬಹುಮುಖ್ಯ. ನಾಗರಿಕರು ತಮ್ಮ ಹಕ್ಕುಗಳನ್ನು ಪಡೆಯುವಲ್ಲಿ ಶಕ್ತಿಶಾಲಿಗಳಾಗಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ವಕೀಲರ ಸಂಘದ ಉಪಾಧ್ಯಕ್ಷ ಕೆ.ಡಿ. ದಯಾನಂದ ಅವರು ಮಾತನಾಡಿ, ಪ್ರತಿಯೊಬ್ಬರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವಂತಾಗಬೇಕು. ಇನ್ನೊಬ್ಬರ ಹಕ್ಕನ್ನು ಗೌರವಿಸಬೇಕು. ಹಾಗಾದಾಗ ಮಾತ್ರ ವ್ಯಕ್ತಿತ್ವಕ್ಕೆ ಬೆಲೆ ಬಂದಂತಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎ.ಪಿ.ಸಿ.ಆರ್. ಕೊಡಗು ಘಟಕದ ಅಧ್ಯಕ್ಷ ಕೆ.ಎಂ. ಕುಂಞ ಅಬ್ದುಲ್ಲಾ ವಹಿಸಿದ್ದರು.