ಮಡಿಕೇರಿ, ಮೇ 21: ಡಾ. ಬಿ.ಆರ್. ಅಂಬೇಡ್ಕರ್ ಅವರ 125 ನೇ ಜನ್ಮದಿನ ಹಾಗೂ ಬುದ್ಧ ಪೂರ್ಣಿಮೆಯ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ನಗರದ ಶ್ರೀಶಕ್ತಿ ವೃದ್ಧಾಶ್ರಮದ ಬಂಧುಗಳಿಗೆ ವಸ್ತ್ರ ವಿತರಿಸಲಾಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವ್ಯಾಂಡಮ್ ಎಂಟರ್ ಪ್ರೈಸಸ್‍ನ ಮಾಲೀಕ ದಾಮೋದರ್, ಬಡವರಿಗೆ ಹಾಗೂ ವಯೋವೃದ್ಧರಿಗೆ ಸಹಾಯ ಹಸ್ತ ಚಾಚುವದು ಪುಣ್ಯದ ಕಾರ್ಯವೆಂದರು. ದಲಿತ ಸಂಘರ್ಷ ಸಮಿತಿಯು ಕಳೆದ ಹಲವು ವರ್ಷಗಳಿಂದ ಈ ರೀತಿಯ ಸಾಮಾಜಿಕ ಕಳಕಳಿಯ ಕಾರ್ಯ ಕ್ರಮಗಳನ್ನು ನಡೆಸುವದರೊಂದಿಗೆ ಇತರ ಸಂಘ-ಸಂಸ್ಥೆಗಳಿಗೆ ಮಾದರಿ ಎಂದು ಶ್ಲಾಘಿಸಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಜಿಲ್ಲಾ ಆಸ್ಪತ್ರೆಯ ಸ್ತ್ರೀರೋಗ ತಜ್ಞ ಡಾ. ಸೌಮ್ಯ ಪ್ರಕಾಶ್, ಸಂಘಟನೆಯೊಂದು ಸರಕಾರಿ ಶಾಲೆಯ ಶಿಕ್ಷಕರುಗಳನ್ನು ಹಾಗೂ ವೃದ್ಧಾಶ್ರಮದ ಬಂಧುಗಳನ್ನು ಗುರುತಿಸುತ್ತಿರುವದು ಹೆಗ್ಗಳಿಕೆಯ ವಿಚಾರವೆಂದರು.

ದಾನಿಗಳು ಹಾಗೂ ಗಾಳಿಬೀಡಿನ ಕಾಫಿ ಬೆಳೆಗಾರ ಟಿ.ಎಸ್. ವಾಸುದೇವ ಮಾತನಾಡಿ, ದಲಿತ ಸಂಘರ್ಷ ಸಮಿತಿಯು ಶಿಕ್ಷಕರ ಶ್ರಮವನ್ನು ಗುರುತಿಸಿ ಸನ್ಮಾನಿಸುತ್ತಿರುವದಲ್ಲದೆ ವಯೋವೃದ್ಧರ ಪರ ಕಾಳಜಿ ತೋರುತ್ತಿರುವದು ಹೆಮ್ಮೆಯ ವಿಚಾರವೆಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ಕಳೆದ ಅನೇಕ ವರ್ಷಗಳಿಂದ ಶ್ರೀಶಕ್ತಿ ವೃದ್ಧಾಶ್ರಮದ ಬಂಧುಗಳಿಗೆ ಸಮಿತಿ ವತಿಯಿಂದ ವಸ್ತ್ರಗಳನ್ನು ವಿತರಿಸಲಾಗುತ್ತಿದೆ. ಇನ್ನು ಮುಂದೆಯೂ ಸಮಿತಿ ಸಾಮಾಜಿಕ ಕಳಕಳಿಯೊಂದಿಗೆ ಬಡವರ ಹಾಗೂ ಸಾಧಕರ ಪರವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಕಿ ವನಜಾಕ್ಷಿ ದಾಮೋದರ್ ಉಪಸ್ಥಿತರಿದ್ದರು. ಜಿಲ್ಲಾ ಸಂಘಟನಾ ಸಂಚಾಲಕ ಮೇಕೇರಿ ರವಿ ಸ್ವಾಗತಿಸಿ, ತಾಲೂಕು ಸಂಘಟನಾ ಸಂಚಾಲಕಿ ದೀಪಿಕಾ ವಂದಿಸಿದರು.