ಸೋಮವಾರಪೇಟೆ, ಮೇ 21: ಇಲ್ಲಿನ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಮಸ್ಯೆಗಳು ಹೆಚ್ಚುತ್ತಿದ್ದು, ಇದುವರೆಗೂ ಆರೋಗ್ಯ ರಕ್ಷಾ ಸಮಿತಿಯ ಸಭೆಯನ್ನೇ ಕರೆದಿಲ್ಲ. ತಕ್ಷಣ ಸಭೆ ಕರೆದು ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕೆಂದು ಸರಕಾರದಿಂದ ನೇಮಕಗೊಂಡಿರುವ ನಾಮ ನಿರ್ದೇಶಿತ ಸದಸ್ಯರು ಆಗ್ರಹಿಸಿದ್ದಾರೆ.ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ನಾಮನಿರ್ದೇಶಿತ ಸದಸ್ಯರಾದ ಬಿ. ಬಸವರಾಜು, ಟಿ.ಆರ್. ಮೋಹನ್ ಮತ್ತು ಹೆಚ್.ಎ. ನಾಗರಾಜು ಆಸ್ಪತ್ರೆಯ ಸಮಸ್ಯೆಗಳ ಬಗ್ಗೆ ಮಾತನಾಡಿದರು.

ರಕ್ಷಾ ಸಮಿತಿಯ ಅಧ್ಯಕ್ಷ ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಮನವಿ ಮಾಡಿದ್ದರೂ ಇದುವರೆಗೂ ಸಭೆ ಕರೆದಿಲ್ಲ. ಸರಕಾರ ಕಳೆದ 4 ತಿಂಗಳ ಹಿಂದೆಯೇ ಸದಸ್ಯರನ್ನಾಗಿ ನೇಮಕ ಮಾಡಿದೆ. ವರ್ಷಕ್ಕೆ ಕನಿಷ್ಟ 4 ಸಭೆಗಳನ್ನಾದರೂ ಕರೆಯಬೇಕು. ಆದರೆ ಒಂದೇ ಒಂದು ಸಭೆಯನ್ನೂ ಕರೆಯುತ್ತಿಲ್ಲ. ಈ ಬಗ್ಗೆ ಆಸ್ಪತ್ರೆಯ ವೈದ್ಯಾಧಿಕಾರಿಯನ್ನು ಪ್ರಶ್ನಿಸಿದ ಸಂದರ್ಭ, ಏಪ್ರಿಲ್‍ನಲ್ಲಿ ಸಭೆ ಕರೆಯುವದಾಗಿ ಹೇಳಿದ್ದರೂ ಕಾರ್ಯರೂಪಕ್ಕೆ ತಂದಿಲ್ಲ ಎಂದು ಆರೋಪಿಸಿದರು.

ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಎದುರಾಗಿದೆ. ಅತ್ಯಾಧುನಿಕ ಯಂತ್ರೋಪಕರಣಗಳು ಇದ್ದರೂ ಸಿಬ್ಬಂದಿಗಳ ಕೊರತೆಯಿಂದ ಬಳಕೆಯಾಗುತ್ತಿಲ್ಲ. ಮಕ್ಕಳ ವಾರ್ಡ್‍ನ್ನು ಮುಚ್ಚಲಾಗಿದ್ದು, ಇಲ್ಲಿ ಐಸಿಯು ಕೇಂದ್ರ ತೆರೆಯಲು ಸಿದ್ಧತೆ ನಡೆಯುತ್ತಿದೆ. ಆಸ್ಪತ್ರೆ ಆವರಣದಲ್ಲಿ ಸಾರ್ವಜನಿಕರು ವಾಹನಗಳನ್ನು ನಿಲ್ಲಿಸುತ್ತಿದ್ದು, ಇದರಿಂದಾಗಿ ಆಸ್ಪತ್ರೆಯ ಒಳರೋಗಿಗಳಿಗೆ ತೊಂದರೆಯಾಗುತ್ತಿದ್ದರೂ ಯಾರೂ ಗಮನಹರಿಸುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ತಕ್ಷಣ ಆರೋಗ್ಯ ರಕ್ಷಾ ಸಮಿತಿಯ ಸಭೆ ಕರೆಯಬೇಕು. ತಪ್ಪಿದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಆರೋಗ್ಯ ಸಚಿವರಿಗೆ ದೂರು ನೀಡಲಾಗುವದು. ಜತೆಗೆ ತಮ್ಮ ನಾಮನಿರ್ದೇಶನ ಸ್ಥಾನಕ್ಕೂ ರಾಜೀನಾಮೆ ನೀಡಲಾಗುವದು ಎಂದು ತಿಳಿಸಿದರು.