ಸುಂಟಿಕೊಪ್ಪ, ಮೇ 21: ಬ್ಲೂಬಾಯ್ಸ್ ಯೂತ್ ಕ್ಲಬ್ ವತಿಯಿಂದ ಆಯೋಜಿತಗೊಂಡಿ ರುವ ಡಿ.ಶಿವಪ್ಪ ಸ್ಮಾರಕ ಫುಟ್ಬಾಲ್ ಪಂದ್ಯಾವಳಿಯಲ್ಲಿ ಉಳ್ಳಾಲ, ಸ್ವರ್ಣ ಎಫ್.ಸಿ. ಮಂಡ್ಯ, ಟಿಡಿಎಲ್ ಎಫ್.ಸಿ.ಬೈಲುಕೊಪ್ಪ ತಂಡಗಳು ಇಂದಿನ ಪಂದ್ಯಾವಳಿಯನ್ನು ಜಯಿಸುವ ಮೂಲಕ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು. ಜಿ.ಯಂ.ಪಿ. ಶಾಲಾ ಮೈದಾನದಲ್ಲಿ ಸಂಜೆ ಮೊದಲ ಪಂದ್ಯಾವಳಿ ಬೆನಕ ಎಫ್.ಸಿ. ಮಂಡ್ಯ ಮತ್ತು ಮೊಡ್ರನ್ ಕಾಲೇಜ್ ಉಳ್ಳಾಲ ನಡುವೆ ನಡೆದು ಉಳ್ಳಾಲ ತಂಡದ ಮುನ್ನಡೆ ಆಟಗಾರ ನೌಷದ್ 10 ನಿಮಿಷದಲ್ಲಿ 1 ಗೋಲುಗಳಿಸುವ ಮೂಲಕ ತಂಡಕ್ಕೆ ಗೆಲುವು ಒದಗಿಸಿದರೆ, ಬೆನಕ ಎಫ್.ಸಿ. ತಂಡವು ಬಿರುಸಿನ ಆಟಕ್ಕೆ ಮುಂದಾದರೂ ಎದುರಾಳಿ ಉಳ್ಳಾಲದ ವೇಗಕ್ಕೆ ಕಡಿವಾಣ ಹಾಕಲಾರದೆ 23ನೇ ನಿಮಿಷದಲ್ಲಿ ನೌಷದ್ ಮತ್ತೊಂದು ಗೋಲು ಬಾರಿಸುವ ಮೂಲಕ ಎದುರಾಳಿಗಳಿಗೆ ಒತ್ತಡ ಹೆಚ್ಚಿಸಿದರು. ದ್ವಿತೀಯಾರ್ಧದಲ್ಲಿ ಎರಡು ತಂಡವು ಸಮಬಲ ಪ್ರದರ್ಶನ ನೀಡಿದ್ದರೂ, ಬೆನಕ ತಂಡಕ್ಕೆ ಉಳ್ಳಾಲ ತಂಡವು ಕಟ್ಟಿಹಾಕಿ 23 ನಿಮಿಷದಲ್ಲಿ ನೌಪ್ರೀನ್ ಮತ್ತೊಂದು ಗೋಲು ಬಾರಿಸುವ ಮೂಲಕ 3-0 ಗೋಲುಗಳಿಂದ ಮುಂದಿನ ಸುತ್ತಿಗೆ ಆರ್ಹತೆ ಪಡೆದುಕೊಂಡಿತು.

ಎರಡನೇ ಪಂದ್ಯಾವಳಿಯು ಸ್ಪೋಟಿಂಗ್ ಎಫ್.ಸಿ. ಮಂಗಳೂರು ಮತ್ತು ಸ್ವರ್ಣ ಎಫ್.ಸಿ. ಮಂಡ್ಯ ನಡುವೆ ನಡೆಯಬೇಕಿದ್ದು, ಸ್ಪೋಟಿಂಗ್ ಎಫ್.ಸಿ. ಬಾರದ ಹಿನ್ನಲೆ ಸ್ವರ್ಣ ಎಫ್.ಸಿ. ವಾಕ್‍ಓವರ್ ಪಡೆಯಿತು.

ಟಿಡಿಎಲ್ ಎಫ್.ಸಿ. ಬೈಲುಕೊಪ್ಪ ಮತ್ತು ನಂಜನಗೂಡು ಎಫ್.ಸಿ. ತಂಡಗಳ ನಡುವೆ ನಡೆದು ಪ್ರಥಮಾರ್ಧದ 10ನೇ ನಿಮಿಷದಲ್ಲಿ ಟಿಡಿಎಲ್ ತಂಡದ ಮೂನ್‍ಮೂನ್ ನಂಜನಗೂಡು ಮೇಲೆ 1 ಗೋಲನ್ನು ಗಳಿಸುವ ಮೂಲಕ ಮುನ್ನಡೆ ಪಡೆದುಕೊಳ್ಳುತ್ತಿದ್ದಂತೆ ಎದುರಾಳಿ ತಂಡದ ಶರತ್ 11ನೇ ನಿಮಿಷದಲ್ಲಿ ಟಿಡಿಎಲ್ ತಂಡದ ಗೋಲಿಯನ್ನು ವಂಚಿಸುವ ಮೂಲಕ 1ಗೋಲು ಬಾರಿಸುವದರೊಂದಿಗೆ ಸಮಬಲ ಸಾಧಿಸಿತ್ತು. ಆದರೆ ಎದುರಾಳಿ ಟಿಡಿಎಲ್ ಬಿರುಸಿನ ಆಟಕ್ಕೆ ಇಳಿಯುವ ಮೂಲಕ 20ನೇ ನಿಮಿಷದಲ್ಲಿ ಟಿಡಿಎಲ್ ತಂಡದ ಮೂನ್‍ಮೂನ್ ಮತ್ತೊಂದು ಗೋಲುಬಾರಿಸುವ ಮೂಲಕ ಮುನ್ನಡೆ ಸಾಧಿಸಿದರು. 21ನೇ ನಿಮಿಷದಲ್ಲಿ ಟೆನ್‍ಸಾಕಿ ಮತ್ತೊಂದು ಗೋಲುಗಳಿಸುವ ಮೂಲಕ, ಎದುರಾಳಿ ತಂಡಕ್ಕೆ ಒತ್ತಡವನ್ನು ಹೆಚ್ಚಿಸಿತು. ದ್ವಿತೀಯಾರ್ಧದ 12ನೇ ನಿಮಿಷದಲ್ಲಿ ಛಾಂಗ್ ಮತ್ತೊಂದು ಗೋಲುಗಳಿಸುವ ಮೂಲಕ ಎದುರಾಳಿಯನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿ ನಂಜನಗೂಡು ಎಫ್.ಸಿ. ತಂಡವು 4-1 ಗೋಲುಗಳಿಂದ ಟಿಡಿಎಲ್ ತಂಡಕ್ಕೆ ಮಣಿದುಕೊಂಡಿತು.

ಇಂದಿನ ಪಂದ್ಯಾವಳಿಯನ್ನು ಗೌತಮ್ ಮೋಹನ್ ಮಹೇದ್ರ, ಗೌತಮ್ ಮುಕುಲ್ ಮಹೇಂದ್ರ, ಜಿ.ಪಂ. ಸದಸ್ಯ ಪಿ.ಎಂ. ಲತೀಫ್, ಕೆದಕಲ್ ಗ್ರಾ.ಪಂ. ಸದಸ್ಯ ಬಿ.ಎಂ. ವೆಂಕಪ್ಪ ಕೋಟ್ಯಾನ್ ಇವರುಗಳು ಕ್ರೀಡಾಪಟುಗಳನ್ನು ಪರಿಚಯಿಸಿಕೊಳ್ಳುವ ಮೂಲಕ ಪಂದ್ಯಾವಳಿಯನ್ನು ಉದ್ಘಾಟಿಸಿದರು.

ಇಂದಿನ ಪಂದ್ಯಾವಳಿ

ಮೊದಲನೇ ಪಂದ್ಯಾವಳಿ ಮ. 3 ಗಂಟೆಗೆ ಮಂಡ್ಯ ಸ್ವರ್ಣ ಗಿ/s ಪನ್ಯ ಎಫ್.ಸಿ. ಸುಂಟಿಕೊಪ್ಪ.

ಎರಡನೇ ಪಂದ್ಯಾವಳಿ ಸ. 4 ಗಂಟೆಗೆ ಮೊಡ್ರನ್ ಕಾಲೇಜ್ ಉಳ್ಳಾಲ ಗಿ/s ಕೂರ್ಗ್ ಇಲೆವನ್ ಎಫ್.ಸಿ. ಕೊಡಗು ನಡುವೆ ನಡೆಯಲಿದೆ.