ವೀರಾಜಪೇಟೆ, ಮೇ 21: ವೀರಾಜಪೇಟೆಯ ತೆಲುಗರ ಬೀದಿಗೆ ಒತ್ತಾಗಿರುವ ದಖ್ಖನಿ ಮೊಹಲ್ಲಾಗೆ ತೆರಳುವ ಜಂಕ್ಷನ್ ಬಳಿ ಮನೆÀಗೆ ತೆರಳುತ್ತಿದ್ದ ಸುಭಾಷ್ (28) ಎಂಬಾತನಿಗೆ ಇಬ್ಬರು ಅಪರಿಚಿತರು ಕಣ್ಣಿಗೆ ಖಾರದ ಪುಡಿ ಎರಚಿ ಕೈಯಲ್ಲಿದ್ದ ಹಣದ ಚೀಲವನ್ನು ಎಗರಿಸಲು ವಿಫಲಯತ್ನ ನಡೆಸಿದರೆಂಬ ದೂರಿನ ಮೇರೆಗೆ ಪೊಲೀಸರು ದರೋಡೆ ಯತ್ನ ಪ್ರಕರಣವನ್ನು ದಾಖಲಿಸಿದ್ದಾರೆ.

ಸುಭಾಷ್, ಇಲ್ಲಿನ ಮಲಬಾರ್ ರಸ್ತೆಯಲ್ಲಿರುವ ಸೋಮ ಪದ್ಮ ಪೆಟ್ರೋಲ್ ಬಂಕ್‍ನಲ್ಲಿ ವ್ಯವಸ್ಥಾಪಕರಾಗಿದ್ದು, ಪ್ರತಿ ದಿನವೂ ಬಂಕ್‍ನಲ್ಲಿ ಸಂಗ್ರಹಿಸಿದ ನಗದು ಹಣವನ್ನು ರಾತ್ರಿ ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು. ಅದರಂತೆ ನಿನ್ನೆ ದಿ&divound;ವೂ ಸುಮಾರು ಎರಡು ಲಕ್ಷದ ಇಪ್ಪತ್ತು ಸಾವಿರ ನಗದನ್ನು ಕೈಚೀಲದಲ್ಲಿ ಹಿಡಿದುಕೊಂಡು ರಾತ್ರಿ 9.15ರ ಸಮಯದಲ್ಲಿ ನಂ. (ಕೆ.ಎ. 02 ಇ.ಎ.9347) ಬೈಕ್‍ನಲ್ಲಿ ಹೋಗುತ್ತಿದ್ದಾಗ ಹಿಂಬದಿಯಿಂದ ಕಾರಿನಲ್ಲಿ ಬಂದು ಮುಖಕ್ಕೆ ಕಪ್ಪು ಬಟ್ಟೆ ಕಟ್ಟಿಕೊಂಡಿದ್ದು, ಬೈಕ್‍ನ್ನು ತಡೆದು ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ಸುಭಾಷ್ ಹಣದ ಕೈಚೀಲವನ್ನು ಗಟ್ಟಿಯಾಗಿ ಹಿಡಿದು ಕೂಗಿಕೊಂಡಾಗ ನೆರೆಕರೆಯವರು ಬರುವಷ್ಟರಲ್ಲಿ ದರೋಡೆಕೋರರು ಕೈ ಚೀಲ ಕೀಳುವ ಪ್ರಯತ್ನ ಬಿಟ್ಟು ಕತ್ತಲೆಯಲ್ಲಿ ತಲೆಮರೆಸಿಕೊಂಡರೆನ್ನಲಾಗಿದೆ.

ಸುಭಾಷ್‍ನ ಮುಖಕ್ಕೆ ಗಾಯ ಉಂಟಾಗಿದ್ದರಿಂದ ಇಂದು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ನಗರ ಪೊಲೀಸರಿಗೆ ದೂರು ನೀಡಿದರು. ನಗರ ಪೊಲೀಸರು ದರೋಡೆಗೆ ಯತ್ನಿಸಿದ ಜಾಗವನ್ನು ಮಹಜರು ನಡೆಸಿ, ದೂರುದಾರರಿಂದ ದರೋಡೆಕೋರರ ಚಹರೆಯನ್ನು ಪಡೆದಿದ್ದು ತನಿಖೆ ಮುಂದುವರೆಸಿದ್ದಾರೆ.

ಪೆÀಟ್ರೋಲ್ ಬಂಕ್ ಆರ್.ಕೆ. ಅಬ್ದುಲ್ ಸಲಾಂ ಎಂಬವರಿಗೆ ಸೇರಿದ್ದು ವ್ಯವಸ್ಥಾಪಕ ಸುಭಾಷ್‍ಗೆ ರಕ್ಷಣೆ ಕೋರಿ ಸಮುಚ್ಚಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.